
ಗುಂಡ್ಲುಪೇಟೆ: ಜಮೀನಿಗೆ ತೆರಳುತಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೊಮ್ಮನಹಳ್ಳಿ ಗ್ರಾಮದ ರಾಜಶೇಖರಪ್ಪ ಅಲಿಯಾಸ್ ಸದಾ (42) ಚಿರತೆ ದಾಳಿಗೆ ಒಳಗಾಗಿ ಗಾಯಗೊಂಡಿರುವ ರೈತ. ಈತ ಗುರುವಾರ ರಾತ್ರಿ ಸುಮಾರು 10.30ರ ಸುಮಾರಿಗೆ ಊರಿನ ಪಕ್ಕದಲ್ಲಿರುವ ಜಮೀನಿನಲ್ಲಿ ಬೇಯಿಸಿ ಒಣ ಹಾಕಿರುವ ಅರಿಶಿಣವನ್ನು ನೋಡಿಕೊಳ್ಳಲು ಬೈಕ್‌ನಲ್ಲಿ ಮಾದಲವಾಡಿ ಕಡೆಗೆ ಹೋಗುತ್ತಿದ್ದಾಗ ಪೊದೆಯೊಳಗೆ ಅಡಗಿದ್ದ ಚಿರತೆ ಏಕಾಏಕಿ ದಾಳಿ ಮಾಡಿದೆ. ಇದರಿಂದ ರೈತನ ಕತ್ತು, ತುಟಿ ಮತ್ತು ಮುಖಕ್ಕೆ ಪರಚಿ ಗಂಭೀರ ಗಾಯಗೊಳಿಸಿದೆ.
ಬೈಕ್‌ನಿಂದ ಬಿದ್ದ ರಭಸಕ್ಕೆ ಹಾರ್ನ್ ಬಟನ್ ಒತ್ತಿದ್ದ ಹಿನ್ನೆಲೆ ಅದರ ಶಬ್ದಕ್ಕೆ ಚಿರತೆ ಓಡಿ ಹೋಗಿದೆ. ಗಾಯಗೊಂಡ ರೈತ ರಾಜಶೇಖರಪ್ಪನನ್ನು ಚಿಕಿತ್ಸೆಗಾಗಿ ಚಾಮರಾಜನಗರದ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿರತೆ ಸೆರೆಗೆ ಒತ್ತಾಯ: ಬೊಮ್ಮನಹಳ್ಳಿ ಗ್ರಾಮದ ಸುತ್ತಮುತ್ತಲು ವನ್ಯಜೀವಿಗಳ ಹಾವಳಿ ಮೀತಿಮಿರಿದೆ. ಇದರಿಂದ ಜಮೀನುಗಳಿಗೆ ರಾತ್ರಿ ವೇಳೆ ಕಾವಲಿಗೆ ತೆರಳಲು ರೈತರು ಹಿಂದೇಟು ಹಾಕುವಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಮುಂದಾಗಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.