ADVERTISEMENT

ಸರ್ಕಾರಕ್ಕೆ ಬಾರುಕೋಲಿನ ಏಟು ಕೊಡಿ: ರಾಕೇಶ್ ಟಿಕಾಯತ್

ಭಾರತೀಯ ಕಿಸಾನ್ ಯೂನಿಯನ್‌ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 0:30 IST
Last Updated 14 ಫೆಬ್ರುವರಿ 2026, 0:30 IST
ಚಾಮರಾಜನಗರದಲ್ಲಿ ಶುಕ್ರವಾರ ‘ಸ್ವಾಭಿಮಾನದೆಡೆಗೆ ಹಸಿರು ಸೇನಾನಿಗಳ ಕಾಲ್ನಡಿಗೆ ಹಾಗೂ ರೈತ ಸಮಾವೇಶ’ದಲ್ಲಿ ಅಮೆರಿಕ–ಭಾರತ ವ್ಯಾಪಾರ ಒಪ್ಪಂದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರೈತರು ಪ್ರತಿಭಟಿಸಿದರು
ಚಾಮರಾಜನಗರದಲ್ಲಿ ಶುಕ್ರವಾರ ‘ಸ್ವಾಭಿಮಾನದೆಡೆಗೆ ಹಸಿರು ಸೇನಾನಿಗಳ ಕಾಲ್ನಡಿಗೆ ಹಾಗೂ ರೈತ ಸಮಾವೇಶ’ದಲ್ಲಿ ಅಮೆರಿಕ–ಭಾರತ ವ್ಯಾಪಾರ ಒಪ್ಪಂದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರೈತರು ಪ್ರತಿಭಟಿಸಿದರು   
ಅಮೆರಿಕ–ಭಾರತ ಒಪ್ಪಂದ ಕೃಷಿ ಕ್ಷೇತ್ರಕ್ಕೆ ಮಾರಕ | ಭಾರತ ಕೂಡಲೇ ಈ ಒಪ್ಪಂದದಿಂದ ಹಿಂದೆ ಸರಿಯಲಿ | ಪ್ರಧಾನಿ ನರೇಂದ್ರ ಮೋದಿ ಅವರೊ, ಟ್ರಂಪೋ ಎಂದು ಪ್ರಶ್ನೆ

ಚಾಮರಾಜನಗರ: ‘ರೈತರು ರಾಸುಗಳಿಗೆ ಬಾರುಕೋಲಿನ ಏಟು ಕೊಡುವಂತೆ, ಸರ್ಕಾರ ದಾರಿ ತಪ್ಪಿದಾಗಲೂ ದಂಡಿಸಬೇಕು’ ಎಂದು ಭಾರತೀಯ ಕಿಸಾನ್ ಯೂನಿಯನ್‌ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಶುಕ್ರವಾರ  ಇಲ್ಲಿ ಸಲಹೆ ಮಾಡಿದರು. 

ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 90ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ‘ಸ್ವಾಭಿಮಾನದೆಡೆಗೆ ಹಸಿರು ಸೇನಾನಿಗಳ ಕಾಲ್ನಡಿಗೆ ಹಾಗೂ ರೈತ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಅಮೆರಿಕ–ಭಾರತ ನಡುವಿನ ವ್ಯಾಪಾರ ಒಪ್ಪಂದ ದೇಶದ ಕೃಷಿ ಕ್ಷೇತ್ರಕ್ಕೆ ಮಾರಕವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಅಮೆರಿಕದಿಂದ ಆಮದಾಗುವ ಕೆಲವು ಕೃಷಿ ಉತ್ಪನ್ನಗಳ ಮೇಲೆ ಶೂನ್ಯ ಸುಂಕ ವಿಧಿಸಿರುವುದು ದೇಶದಲ್ಲಿ ಕೃಷಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಕೊಡಲಿದೆ. ಕೂಡಲೇ ಭಾರತ ಈ ಒಪ್ಪಂದದಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ರೈತರೇ ಬಾರುಕೋಲಿನಿಂದ ಬಿಸಿ ಮುಟ್ಟಿಸಲಿದ್ದಾರೆ’ ಎಂದು ಎಚ್ಚರಿಸಿದರು.  

‘ಭವಿಷ್ಯದಲ್ಲಿ ಸಂಘರ್ಷದ ದಿನಗಳು ಬರಲಿದ್ದು, ರೈತ ಸಮುದಾಯ ಸಂಘಟಿತವಾಗಿ ಹೋರಾಟಕ್ಕೆ ಸಜ್ಜಾಗಬೇಕು’ ಎಂದು ಕೃಷಿಕರಿಗೆ ಹೇಳಿದರು.

ವಕೀಲ ರವಿವರ್ಮ ಕುಮಾರ್ ಮಾತನಾಡಿ, ‘ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸಿದ್ಧಉಡುಪುಗಳ ಮೇಲೆ ಶೇ 18ರಷ್ಟು ತೆರಿಗೆ ವಿಧಿಸುವ ಅಮೆರಿಕ, ಬಾಂಗ್ಲಾದೇಶದ ಸಿದ್ಧಉಡುಪುಗಳಿಗೆ ಶೂನ್ಯ ತೆರಿಗೆ ವಿನಾಯಿತಿ ನೀಡಿದೆ. ಭಾರತ– ಅಮೆರಿಕ ವ್ಯಾಪಾರ ಒಪ್ಪಂದ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ’ ಎಂದು ಎಚ್ಚರಿಸಿದರು.

ಚಲನಚಿತ್ರ ನಟ ಅಶೋಕ್‌ ಮಾತನಾಡಿ, ‘ಆಳುವ ಸರ್ಕಾರಗಳು ಜನರನ್ನು ಕುರಿಗಳನ್ನಾಗಿ ಮಾಡಿದ್ದು ದೇಶವನ್ನೇ ಮಾರುವ ಸಂಚು ರೂಪಿಸಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರೋ ಅಥವಾ ಟ್ರಂಪೋ ತಿಳಿಯುತ್ತಿಲ್ಲ’ ಎಂದು ಟೀಕಿಸಿದರು.

ಬಿಕೆಯು ರಾಷ್ಟ್ರೀಯ ಕಾರ್ಯದರ್ಶಿ ಯುದ್‌ವೀರ್ ಸಿಂಗ್, ಅಧ್ಯಕ್ಷೀಯ ಮಂಡಳಿ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ, ನಿವೃತ್ತ ಪೊಲೀಸ್‌ ಅಧಿಕಾರಿ ಅರ್ಕೇಶ್‌ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.