
ಗುಂಡ್ಲುಪೇಟೆ: ತಾಲ್ಲೂಕಿನ ಚನ್ನಂಜಯ್ಯನಹುಂಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕವನ್ನು ತಾಲ್ಲೂಕು ಅಧ್ಯಕ್ಷ ಹಂಗಳ ದಿಲೀಪ್ ಉದ್ಘಾಟಿಸಿದರು.
ನಾಮಫಲಕ ಅನಾವರಣಗೊಳಿಸಿದ ನಂತರ ಹಲವು ಮಂದಿ ರೈತರಿಗೆ ಕಾರ್ಯಕರ್ತರಿಗೆ ಹಸಿರು ಶಾಲೆ ದೀಕ್ಷೆ ನೀಡಿ ಮಾತನಾಡಿದ ದಿಲೀಪ್ ಅವರು, ‘ರೈತ ಸಂಘಟನೆಗೆ ಗ್ರಾಮೀಣ ಪ್ರದೇಶದ ಯುವಕರು, ಮುಖಂಡರು ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ’ ಎಂದು ತಿಳಿಸಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಬೆಳೆದ ಬಹುತೇಕ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ಮೋಸ ಮಾಡುತ್ತಿದೆ. ಜೊತೆಗೆ ವಿವಿಧ ರೈತ ವಿರೋಧ ಕಾಯೆಗಳನ್ನು ಜಾರಿಗೊಳಿಸುವ ಹುನ್ನಾರ ನಡೆಸುತ್ತಿವೆ. ಇವುಗಳ ವಿರುದ್ಧ ಹೋರಾಟ ಮಾಡಿ ರೈತ ಕುಲ ಉಳಿಯುವಂತೆ ಮಾಡಲು ಎಲ್ಲರೂ ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.
ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಕಾರ್ಯಧ್ಯಕ್ಷ ಮಹದೇವಪ್ಪ ಪುತ್ತನಪುರ, ಜಿಲ್ಲಾ ಉಪಾಧ್ಯಕ್ಷ ಮಾಧು, ಕೊಳ್ಳೇಗಾಲ ಉಪಾಧ್ಯಕ್ಷ ಗೌಡೇಗೌಡಮ, ಚಾಮರಾಜನಗರ ಸಂಘಟನಾ ಕಾರ್ಯದರ್ಶಿ ಮಹದೇವಪ್ರಸಾದ್, ಜಿಲ್ಲಾ ಕಾರ್ಯದರ್ಶಿ ಬೊಮ್ಮನಹಳ್ಳಿ ಲೋಕೇಶ, ಜಿಲ್ಲಾ ಕಾಯಂ ಆಹ್ವಾನಿತರಾದ ಶಿವಮಲ್ಲು ಹೊನ್ನೇಗೌಡನಹಳ್ಳಿ, ನಿಟ್ರೆ ಮಹದೇವಶೆಟ್ಟಿ, ಸ್ವಾಮಿ, ಲೋಕೇಶ್, ಬಸವೇಶ್, ಉಮೇಶ್, ರಾಜೇಶ್ ಮಹೇಶ್, ಪುತ್ತನಪುರ ಶಿವಕುಮಾರ್, ಹಂಗಳ ಲೋಕೇಶ್, ಕಬ್ಬಹಳ್ಳಿ ಮೂರ್ತಿ, ಚಾಮರಾಜನಗರ ಸಂತೋಷ್ ಹಾಜರಿದ್ದರು.