ADVERTISEMENT

ಪ್ರವಾಹ: ಸಹಜ ಸ್ಥಿತಿಯತ್ತ ಗ್ರಾಮಗಳು

ಪರಿಹಾರ ಕೇಂದ್ರಗಳಲ್ಲಿ ಇನ್ನೂ ಇದ್ದಾರೆ ಸಂತ್ರಸ್ತರು, ಗ್ರಾಮಗಳಿಗೆ ಮರಳಿದ ಕೆಲವರು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 20:01 IST
Last Updated 14 ಆಗಸ್ಟ್ 2019, 20:01 IST
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಎಸ್‌ಪಿ ಎಚ್‌.ಡಿ.ಆನಂದಕುಮಾರ್‌ ಅವರು ಬುಧವಾರ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತನಾಡಿದರು
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಎಸ್‌ಪಿ ಎಚ್‌.ಡಿ.ಆನಂದಕುಮಾರ್‌ ಅವರು ಬುಧವಾರ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತನಾಡಿದರು   

ಕೊಳ್ಳೇಗಾಲ: ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿದ್ದ ತಾಲ್ಲೂಕಿನ ನದಿಪಾತ್ರದ ಗ್ರಾಮಗಳು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿವೆ.

ನೆರೆಪೀಡಿತವಾಗಿದ್ದ ದಾಸನಪುರ, ಹಳೆ ಅಣಗಳ್ಳಿ, ಹಳೆ ಹಂಪಾಪುರ, ಮುಳ್ಳೂರು ಮತ್ತು ಎಡಕುರಿಯಾ ಗ್ರಾಮಸ್ಥರಲ್ಲಿ ಇನ್ನೂ ಹಲವರು ಪರಿಹಾರ ಕೇಂದ್ರಗಳಲ್ಲಿದ್ದರೆ, ಕೆಲವರು ಗ್ರಾಮಗಳಿಗೆ ಮರಳಿದ್ದಾರೆ.

ನೆರೆಯಿಂದಾಗಿ ಗ್ರಾಮಗಳಿಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. ಸೆಸ್ಕ್‌ ಸಿಬ್ಬಂದಿ ಈಗ ಮತ್ತೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದಾರೆ. ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಇನ್ನೂ ಸರಿಯಾಗದಿರುವುದರಿಂದ ಹಾಗೂ ಮತ್ತೆ ಮಳೆ ಬರುವ ಸಾಧ್ಯತೆ ಇರುವುದರಿಂದ ಇನ್ನೂ ಎರಡು ದಿನಗಳ ಕಾಲ ಪರಿಹಾರ ಕೇಂದ್ರಗಳಲ್ಲೇ ಉಳಿಯುವಂತೆ ಜಿಲ್ಲಾಡಳಿತ ಸಂತ್ರಸ್ತರಿಗೆ ಮನವಿ ಮಾಡಿದೆ.

ADVERTISEMENT

ನಗರಸಭೆ, ಗ್ರಾ.ಪಂ.ಗಳಿಂದ ಸ್ವಚ್ಛತೆ: ಈ ಮಧ್ಯೆ, ನೆರೆಪೀಡಿತ ಗ್ರಾಮಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಕೊಳ್ಳೇಗಾಲ ನಗರಸಭೆ ಮತ್ತು ಆಯಾ ಗ್ರಾಮ ಪಂಚಾಯಿತಿಗಳು ಆರಂಭಿಸಿವೆ.

ನೆರೆಯಿಂದಾಗಿ ಗ್ರಾಮಗಳ ಮನೆಗಳು, ರಸ್ತೆ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳು ಕೆಸರುಮಯವಾಗಿದ್ದವು. ಜಿಲ್ಲಾಧಿಕಾರಿ ಅವರ ಸೂಚನೆಯ ಮೇರೆಗೆ ನಗರಸಭೆಯ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ಸ್ವಚ್ಛಗೊಳಿಸಿದರು.

ತ್ಯಾಜ್ಯ ಸಂಗ್ರಹಿಸಿದ ಸಿಬ್ಬಂದಿ ಚರಂಡಿಗಳ ಸುತ್ತಲೂ ಬ್ಲೀಚಿಂಗ್‌ ಪೌಡರ್‌ ಹಾಗೂ ಫಿನಾಯಿಲ್‌ ಹಾಕಿದರು.

ಡಿಸಿ, ಎಸ್‌ಪಿ ಭೇಟಿ: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಹಾಗೂ ಇತರ ಅಧಿಕಾರಿಗಳು ಬುಧವಾರ ಪರಿಹಾರ ಕೇಂದ್ರಗಳಿಗೆ ಭೇಟಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕೆಲವು ಸಂತ್ರಸ್ತರು, ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕಾವೇರಿ ಅವರು, ‘ಆಗಿರುವ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ನಷ್ಟ ಆದವರಿಗೆ ಪರಿಹಾರ ನೀಡಲಾಗುವುದು. ಇದಕ್ಕೆ 10ರಿಂದ 15 ದಿನಗಳು ಬೇಕು’ ಎಂದು ಹೇಳಿದರು.

ಶಾಶ್ವತ ಪರಿಹಾರಕ್ಕೆ ಆಗ್ರಹ: ‘ಪ್ರತಿ ವರ್ಷ ಕಾವೇರಿ ನದಿಯಲ್ಲಿ ಪ್ರವಾಹ ಬಂದಾಗಲೆಲ್ಲ ನಮ್ಮ ಗ್ರಾಮಗಳು ಮುಳುಗಡೆಯಾಗುತ್ತವೆ. ಒಂದಷ್ಟು ಮನೆಗಳು, ಕೃಷಿ ಜಮೀನು ಹಾನಿಗೀಡಾಗುತ್ತವೆ. ಜಿಲ್ಲಾಡಳಿತ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಸಂತ್ರಸ್ತರು ಒತ್ತಾಯಿಸಿದರು.

ತಹಶೀಲ್ದಾರ್‌ ತಂಡದಿಂದ ಮಾಹಿತಿ ಸಂಗ್ರಹ

ತಹಶೀಲ್ದಾರ್‌ ಕುನಾಲ್‌ ನೇತೃತ್ವದ ಅಧಿಕಾರಿಗಳ ತಂಡ ನೆರೆಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಆಗಿರುವ ಹಾನಿಯ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ.

ಬುಧವಾರ ಮುಳ್ಳೂರು ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳುಮನೆ ಕಳೆದುಕೊಂಡವರು ಮತ್ತು ಬೆಳೆ ಹಾನಿಯಾಗಿರುವುದರ ಮಾಹಿತಿಗಳನ್ನು ಗ್ರಾಮಸ್ಥರಿಂದ ಪಡೆದರು.

‘ನಷ್ಟ ಅನುಭವಿಸಿದವರಿಗೆ ಸರ್ಕಾರ ಪರಿಹಾರ ನೀಡಲಿದೆ. ಆದರೆ, ನೀವು ಹಾನಿಯ ಬಗ್ಗೆ ನೈಜವಾದ ಮಾಹಿತಿ ನೀಡಬೇಕು. ಪರಿಹಾರಕ್ಕೆ ಕೋರಿ ಸರಿಯಾದ ದಾಖಲೆಗಳನ್ನೇ ಸಲ್ಲಿಸಬೇಕು’ ಎಂದು ಕುನಾಲ್‌ ಅವರು ಗ್ರಾಮಸ್ಥರಿಗೆ ತಿಳಿಸಿದರು.

ಸಂಘ ಸಂಸ್ಥೆಗಳಿಂದ ನೆರವು

ನಗರದ ವಿವಿಧ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕರು ಈ ಮಧ್ಯೆ, ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವರಿಗೆ ಅವಶ್ಯಕ ಸಾಮಗ್ರಿಗಳನ್ನು ಸ್ವಯಂಪ್ರೇರಿತರಾಗಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.