ಚಾಮರಾಜನಗರ: ವಿಜಯದಶಮಿ ಹಾಗೂ ಆಯುಧಪೂಜೆ ಹಬ್ಬದ ನಂತರ ಹೂವಿಗೆ ಬೇಡಿಕೆ ಕುಸಿದಿದೆ. ಹಬ್ಬದ ದಿನ ಗಗನಕ್ಕೇರಿದ್ದ ಹೂಗಳ ಬೆಲೆ ಪ್ರಸ್ತುತ ಪಾತಾಳಕ್ಕೆ ಕುಸಿದಿದೆ.
ಹಬ್ಬದ ಸಂದರ್ಭ ಚೆಂಡು ಹೂ, ಸೇವಂತಿಗೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು. ಸೇವಂತಿಗೆ ಕೆ.ಜಿಗೆ ₹200ರವರೆಗೂ ಮಾರಾಟವಾದರೆ ಚೆಂಡು ಹೂ ₹ 50ರವರೆಗೂ ದರ ಇತ್ತು. ಸದ್ಯ ಸೇವಂತಿಗೆ ಕೆ.ಜಿಗೆ ₹20ಕ್ಕೆ ಇಳಿಕೆಯಾಗಿದೆ, ಚೆಂಡು ಹೂ ₹5 ರಿಂದ ₹10ಕ್ಕೆ ಕುಸಿದಿದೆ. ಸಣ್ಣ ಮಲ್ಲಿಗೆ ದರ ₹100 ರಿಂದ ₹120, ಮಲ್ಲಿಗೆ ₹400, ಕನಕಾಂಬರ ₹400, ಸುಗಂಧರಾಜ ₹20, ಗುಲಾಬಿ ₹80ರಿಂದ ₹100ರವರೆಗೂ ದರ ಇದೆ ಎನ್ನುತ್ತಾರೆ ಚೆನ್ನಾಪುರದ ಮೊಳೆ ರಸ್ತೆಯಲ್ಲಿರುವ ಹೂ ವ್ಯಾಪಾರಿ ರವಿ.
ಹಬ್ಬಗಳು ಮುಗಿದ ಬಳಿಕ ಬೇಡಿಕೆ ಕುಸಿಯುವುದರಿಂದ ದರ ಇಳಿಕೆಯಾಗುವುದು ಸಾಮಾನ್ಯ. ದೀಪಾವಳಿಯ ಹೊತ್ತಿಗೆ ಮತ್ತೆ ಬೆಲೆ ಹೆಚ್ಚಾಗಲಿದೆ ಅಲ್ಲಿಯವರೆಗೂ ದರ ಕಡಿಮೆ ಇರಲಿದೆ ಎನ್ನುತ್ತಾರೆ ವ್ಯಾಪಾರಿಗಳು.
ಮಾರುಕಟ್ಟೆಯಲ್ಲಿ ತರಕಾರಿಗಳ ದರ ಏರಿಳಿತವಾಗಿದೆ. ಟೊಮೆಟೊ, ಈರುಳ್ಳಿ, ಬೀಟ್‌ರೂಟ್ ಅಗ್ಗವಾದರೆ, ಬೆಂಡೆ, ಬೀನ್ಸ್, ಕ್ಯಾಪ್ಸಿಕಂ ಸ್ವಲ್ಪ ದುಬಾರಿಯಾಗಿದೆ. ಮಾರುಕಟ್ಟೆಗೆ ಟೊಮೆಟೊ ಆವಕ ಹೆಚ್ಚಾಗಿರುವುದರಿಂದ ಕೆ.ಜಿಗೆ ₹20 ರಿಂದ ₹25ಕ್ಕೆ ದೊರೆಯುತ್ತಿದೆ
ಈರುಳ್ಳಿ ದರ ಕುಸಿತ: ಮೂರ್ನಾಲ್ಕು ತಿಂಗಳಿಂದಲೂ ಈರುಳ್ಳಿ ದರ ಇಳಿಮುಖವಾಗಿದ್ದು ತೀರಾ ಅಗ್ಗವಾಗಿದೆ. ಚಿಲ್ಲರೆಯಾಗಿ ಖರೀದಿಸಿದರೆ ಕೆ.ಜಿಗೆ ₹20 ರಿಂದ ₹30, ಸಗಟಾಗಿ ಖರೀದಿಸಿದರೆ ₹ 100 ಕ್ಕೆ 6 ಕೆಜಿಯವರೆಗೂ ಗುಣಮಟ್ಟದ ಈರುಳ್ಳಿ ಸಿಗುತ್ತಿದೆ. ಹೊರ ರಾಜ್ಯಗಳಿಂದಲೂ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೇಡಿಕೆ ತಗ್ಗಿದ್ದು ಬೆಲೆ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿ ವೀರಭದ್ರಪ್ಪ.
ಇಳಿಯದ ತೆಂಗಿನ ಕಾಯಿ ದರ: ಚಟ್ನಿ, ಸಾಂಬಾರ್ ಸಹಿತ ಮಸಾಲೆ ತಯಾರಿಕೆಗೆ ಬಳಸುವ ತೆಂಗಿನಕಾಯಿ ದರ ಇಳಿಕೆಯಾಗಿಲ್ಲ. ಕೆ.ಜಿಗೆ ₹ 80 ರಿಂದ ₹ 100 ರವರೆಗೂ ಬೆಲೆ ಇದ್ದು ಬೇಡಿಕೆಯೂ ಹೆಚ್ಚಾಗಿದೆ. ಬಿಡಿಯಾಗಿ ಖರೀಸಿದರೆ ಒಂದು ತೆಂಗಿನಕಾಯಿಗೆ ₹ 50 ರಿಂದ ₹ 60 ಇದೆ. ಹಬ್ಬಗಳ ಸೀಸನ್ ಇರುವುದರಿಂದ ದರ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳು ಇಲ್ಲ ಎನ್ನುತ್ತಾರೆ ವ್ಯಾಪಾರಿ ಶ್ರೀನಿವಾಸ್.
ಹಣ್ಣುಗಳ ದರ ಅಲ್ಪ ಇಳಿಕೆಯಾಗಿದೆ. ಸೇಬು ಗಾತ್ರ ಹಾಗೂ ಗುಣಮಟ್ಟಕ್ಕೆ ಅನುಗುಣವಾಗಿ ಕೆ.ಜಿಗೆ ₹100 ರಿಂದ ₹160, ಮೋಸಂಬಿ ₹60 ರಿಂದ ₹80, ಕಿತ್ತಳೆ ₹50 ರಿಂದ ₹60, ದಾಳಿಂಬೆ ₹140 ರಿಂದ ₹160, ಏಲಕ್ಕಿ ಬಾಳೆ ₹70 ರಿಂದ ₹80, ಪಚ್ಚಬಾಳೆ ₹40 ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.