ಚಾಮರಾಜನಗರ: ಗಣೇಶ ಚತುರ್ಥಿಗೆ ಕೆಲವೇದಿನಗಳು ಬಾಕಿ ಇರುವಂತೆಯೇ ಹೂವಿನ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಹಬ್ಬದ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ನಗರದ ಸಮೀಪದ ಚೆನ್ನೀಪುರದಮೋಳೆಯಲ್ಲಿರುವ ಬಿಡಿ ಹೂವಿನ ಮಾರುಕಟ್ಟೆಯಲ್ಲಿ, ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಎಲ್ಲ ಹೂವುಗಳ ಬೆಲೆಯೂ ದುಪ್ಪಟ್ಟಾಗಿದೆ. ₹300–₹400ರಷ್ಟಿದ್ದ ಕೆಜಿ ಕನಕಾಂಬರದ ಬೆಲೆ ₹600 ಆಗಿದೆ. ಮರ್ಲೆ, ಕಾಕಡದ ಬೆಲೆ ₹ 200ಕ್ಕೆ ಏರಿದೆ. ಕಳೆದ ವಾರ ₹80 ಇತ್ತು. ₹40 ಇದ್ದ ಸೇವಂತಿಗೆ ಬೆಲೆ ಈ ಬಾರ ₹80ಕ್ಕೆ ಏರಿದೆ. ಸುಗಂಧರಾಜ ಹೂವಿಗೆ ₹120 ಇದೆ.
‘ಹೂವುಗಳಿಗೆ ಕಳೆದ ವಾರಕ್ಕಿಂತ ಸ್ವಲ್ಪ ಹೆಚ್ಚಿನ ಬೇಡಿಕೆ ಇದೆ. ಗಣೇಶನ ಹಬ್ಬಕ್ಕೆ ಬೇಡಿಕೆ ಇನ್ನಷ್ಟು ಜಾಸ್ತಿಯಾಗಲಿದ್ದು, ಬೆಲೆಯೂ ಏರಿಕೆ ಕಾಣಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್ ಹಾಗೂ ಕ್ಯಾರೆಟ್ ಬೆಲೆ ಹೆಚ್ಚಾಗಿದೆ. ಉಳಿದ ತರಕಾರಿಗಳ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿಲ್ಲ.
ಹಾಪ್‌ಕಾಮ್ಸ್‌ನಲ್ಲಿ ಕಳೆದವಾರ ಬೀನ್ಸ್‌ಗೆ ಕೆಜಿಗೆ ₹40 ಇತ್ತು. ಈ ವಾರ ₹50ಕ್ಕೆ ಏರಿದೆ. ಅದೇ ರೀತಿ ₹30 ಇದ್ದ ಕ್ಯಾರೆಟ್ ಬೆಲೆ ₹40ಕ್ಕೆ ಏರಿದೆ.
‘ಮಳೆ ವಾತಾವರಣ ಇರುವುದರಿಂದ ಬೀನ್ಸ್ ಹಾಗೂ ಕ್ಯಾರೆಟ್ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ. ಈ ಕಾರಣದಿಂದ ಬೆಲೆ ಹೆಚ್ಚಾಗಿದೆ’ ಎಂದು ಹಾಪ್‌ಕಾಮ್ಸ್ ವ್ಯಾಪಾರಿ ಮಧು ಅವರು ಮಾಹಿತಿ ನೀಡಿದರು.
ಉಳಿದಂತೆ ಟೊಮೆಟೊ (₹20), ಆಲೂಗಡ್ಡೆ (₹25), ಈರುಳ್ಳಿ (₹30), ಮೂಲಂಗಿ (₹20) ಹಾಗೂ ಇತರ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ಹಣ್ಣುಗಳ ಪೈಕಿ ಸೇಬು (₹100–₹120), ಮೂಸಂಬಿ (₹60), ಕಿತ್ತಳೆ (₹80), ದ್ರಾಕ್ಷಿ, ದಾಳಿಂಬೆ (₹120) ಬೆಲೆ ಸ್ಥಿರವಾಗಿದೆ.
ಮಾಂಸ ಮಾರುಕಟ್ಟೆಯಲ್ಲಿ ಮಟನ್ ಬೆಲೆ ಬದಲಾಗಿಲ್ಲ. ಚಿಕನ್ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ ಚಿಕನ್‌ಗೆಕಳೆದ ವಾರ ₹200–₹220ರವರೆಗೆ ಬೆಲೆ ಇತ್ತು. ಈ ವಾರ ₹180–₹200ಕ್ಕೆ ವ್ಯಾಪಾರಿಗಳು ಮಾರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.