ADVERTISEMENT

ಕಾಡಾನೆ ದಾಳಿಗೆ ಫಸಲು ನಾಶ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 16:56 IST
Last Updated 1 ಸೆಪ್ಟೆಂಬರ್ 2024, 16:56 IST
ಗುಂಡ್ಲುಪೇಟೆ ತಾಲ್ಲೂಕಿನ ಓಂಕಾರ್ ವಲಯ ವ್ಯಾಪ್ತಿ ಕೋಟೆಕೆರೆ ಗ್ರಾಮದ ರೈತರ ಜಮೀನುಗಳ ಮೇಲೆ ಕಾಡಾನೆಗಳು ದಾಳಿ ನಡೆಸಿ ಫಸಲು ನಾಶಪಡಿಸಿವೆ
ಗುಂಡ್ಲುಪೇಟೆ ತಾಲ್ಲೂಕಿನ ಓಂಕಾರ್ ವಲಯ ವ್ಯಾಪ್ತಿ ಕೋಟೆಕೆರೆ ಗ್ರಾಮದ ರೈತರ ಜಮೀನುಗಳ ಮೇಲೆ ಕಾಡಾನೆಗಳು ದಾಳಿ ನಡೆಸಿ ಫಸಲು ನಾಶಪಡಿಸಿವೆ   

ಗುಂಡ್ಲುಪೇಟೆ: ಕಾಡಾನೆ ಹಿಂಡು ರೈತರ ಜಮೀನುಗಳಿಗೆ ದಾಳಿ ನಡೆಸಿ ಬೆಳೆ ಹಾಗೂ ಕೃಷಿ ಉಪಕರಣ ತುಳಿದು ನಾಶಪಡಿಸಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವಲಯ ವ್ಯಾಪ್ತಿಯ ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಹಾದೇವಸ್ವಾಮಿ ಎಂಬುವರ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಜೋಳ, 5 ತೆಂಗಿನ ಸಸಿಗಳು ಮತ್ತು ಪೈಪ್‌‌‌ಲೈನ್ ತುಳಿದು ಹಾಕಿವೆ. ವೆಂಕಟರಾಮಯ್ಯ ಎಂಬ ರೈತನ ಜಮೀನಿನಲ್ಲಿ ಟೊಮೆಟೊ ಹಾಗೂ ಚನ್ನನಾಯಕ ಎಂಬುವರ ಜಮೀನಿನಲ್ಲಿದ್ದ ಬೋರ್‌‌‌ವೆಲ್ ಮತ್ತು ಇತರೆ ಕೃಷಿ ಉಪಕರಣ ತುಳಿದು ನಾಶಪಡಿಸಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಸೂಕ್ತ ಪರಿಹಾರಕ್ಕೆ ಒತ್ತಾಯ: ಫಸಲು ಮತ್ತು ಕೃಷಿ ಉಪಕರಣ ನಾಶಪಡಿಸಿರುವ ಹಿನ್ನೆಲೆ ರೈತರಿಗೆ ಅಪಾರ ನಷ್ಟ ಸಂಭವಿಸಿದೆ. ಆದ್ದರಿಂದ ಸಂಬಂಧಪಟ್ಟ ಓಂಕಾರ್ ವಲಯದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ದೊರಕಿಸಿಕೊಡಬೇಕೆಂದು ಮಾಲೀಕರು ಒತ್ತಾಯಿಸಿದರು.

ADVERTISEMENT

ಆನೆ ಹಾವಳಿಗೆ ಕಡಿವಾಣ ಹಾಕಿ: ಓಂಕಾರ್ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ರೈತರು ಬೆಳೆದ ಫಸಲುಗಳ ಮೇಲೆ ಕಾಡಾನೆಗಳ ಹಿಂಡು ನಿರಂತರ ದಾಳಿ ನಡೆಸಿ ತುಳಿದು ತಿಂದು ನಾಶ ಪಡಿಸುತ್ತಿದೆ. ಇದರ ಮಾಹಿತಿ ಇದ್ದರೂ ಅರಣ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಆನೆಗಳ ಹಾವಳಿಗೆ ಕಡಿವಾಣ ಹಾಕದಿದ್ದರೆ ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವುದಾಗಿ ರೈತ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.