ADVERTISEMENT

ಹನೂರು: ಕಳ್ಳಬೇಟೆಕೋರರ ಪತ್ತೆಗೆ ಅರಣ್ಯ ಸಿಬ್ಬಂದಿನಿಂದ ಐದಾರು ಕಿ.ಮೀ ಕೂಂಬಿಂಗ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 2:31 IST
Last Updated 17 ಫೆಬ್ರುವರಿ 2026, 2:31 IST
ಬಿಆರ್‌ಟಿ ಅರಣ್ಯವ್ಯಾಪ್ತಿಯ ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಜಲಾಶಯದ ಬಳಿ ಉರುಳಿಗೆ ಸಿಲುಕಿ ಹುಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸೋಮವಾರ ಅರಣ್ಯ ಇಲಾಖೆಯ ಸಿಬ್ಬಂದಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದರು
ಬಿಆರ್‌ಟಿ ಅರಣ್ಯವ್ಯಾಪ್ತಿಯ ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಜಲಾಶಯದ ಬಳಿ ಉರುಳಿಗೆ ಸಿಲುಕಿ ಹುಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸೋಮವಾರ ಅರಣ್ಯ ಇಲಾಖೆಯ ಸಿಬ್ಬಂದಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದರು   

ಹನೂರು (ಚಾಮರಾಜನಗರ ಜಿಲ್ಲೆ): ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಜಲಾಶಯದ ಬಳಿ ಉರುಳಿಗೆ ಸಿಲುಕಿ ಹುಲಿ ಮೃತಪಟ್ಟ ಬೆನ್ನಲ್ಲೇ ಸೋಮವಾರ ಅರಣ್ಯ ಇಲಾಖೆಯ ಸಿಬ್ಬಂದಿ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಿದರು.

‘ಭೂಮಿ’ ಹಾಗೂ ‘ಭಾನು’ ಎಂಬ ಶ್ವಾನಗಳ ನೆರವಿನೊಂದಿಗೆ 50ಕ್ಕೂ ಹೆಚ್ಚು ಗಸ್ತು ಸಿಬ್ಬಂದಿ ಜಲಾಶಯದ ಸುತ್ತಲೂ 6 ಕಿ.ಮೀ ದೂರದವರೆಗೂ ಕೂಂಬಿಂಗ್ ನಡೆಸಿದರು. ಅಕ್ರಮ ಬೇಟೆ ಪ್ರಕರಣದ ಆರೋಪಿಗಳು, ಅಂತರರಾಜ್ಯ ಕಳ್ಳಬೇಟೆಕೋರರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆದಿದೆ.

‘ಉರುಳಿಗೆ ಸಿಲುಕಿ ಹುಲಿ ಮೃತಪಟ್ಟಿದ್ದರೂ ನಿರ್ದಿಷ್ಟವಾಗಿ ಹುಲಿಯನ್ನು ಬೇಟೆಯಾಡಲು ಉರುಳು ಹಾಕಿರುವ ಸಾಧ್ಯತೆಗಳು ತೀರಾ ಕಡಿಮೆ. ಹುಲಿಯ ಹಲ್ಲು, ಉಗುರು, ಚರ್ಮ ಸೇರಿ ಅಂಗಾಂಗಳ ಕಳವು ನಡೆದಿಲ್ಲ. ಇತರೆ ಪ್ರಾಣಿಗಳ ಬೇಟೆಗೆ ಉರುಳು ಹಾಕಿರುವ ಸಾಧ್ಯತೆಗಳು ಹೆಚ್ಚು’ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ADVERTISEMENT

‘ಮಾಂಸಕ್ಕಾಗಿ ಕಾಡುಪ್ರಾಣಿಗಳನ್ನು ಕೊಲ್ಲಲು ಉರುಳು ಹಾಕಲಾಗಿದ್ದು ತನಿಖೆ ನಡೆಯುತ್ತಿದೆ. ಕೃತ್ಯದಲ್ಲಿ ಸ್ಥಳೀಯರು, ಪ್ರವಾಸಿಗರು ಹಾಗೂ  ಅಂತರ ರಾಜ್ಯ ಕಳ್ಳಬೇಟೆಕೋರರ ಪಾತ್ರದ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ನರಳಾಡಿದ್ದ ಹುಲಿ:

‘ಉರುಳಿನಿಂದ ಬಿಡಿಸಿಕೊಳ್ಳಲು ಹಲವು ತಾಸುಗಳ ಕಾಲ ಹುಲಿ ಒದ್ದಾಡಿತ್ತು. ಕುತ್ತಿಗೆಯನ್ನು ಬಿಗಿದುಕೊಂಡ ದಾರ ಒಂದು ಇಂಚಿನಷ್ಟು ಚರ್ಮವನ್ನು ಕೊರೆದಿತ್ತು. ಪ್ರಾಣ ಉಳಿಸಿಕೊಳ್ಳಲು ನಡೆಸಿದ ಸುಧೀರ್ಘ ಹೋರಾಟದಲ್ಲಿ ನಿತ್ರಾಣಗೊಂಡಿದ್ದ ಹುಲಿಯು ಜಲಾಯಶದ ಬಳಿ ಬಂದು ನೀರು ಕುಡಿದು ಮೃತಪಟ್ಟಿತು’ ಎನ್ನಲಾಗಿದೆ.   

ಗಸ್ತು ವೈಫಲ್ಯ:

‘ಜಲಾಶಯ ಹಾಗೂ ಸುತ್ತಮುತ್ತಲಿನ ಪ್ರದೇಶ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ವ್ಯಾಪ್ತಿಗೊಳಪಟ್ಟ ಸೂಕ್ಷ್ಮ ಪ್ರದೇಶವಾಗಿದ್ದರೂ ಕಿಡಿಗೇಡಿಗಳು ರಾಜಾರೋಷವಾಗಿ ಉರುಳು ಹಾಕಿರುವುದು ಇಲಾಖೆಯ ವೈಫಲ್ಯ ತೋರಿಸುತ್ತದೆ. ಸಮರ್ಪಕವಾಗಿ ಗಸ್ತು ನಡೆಯದಿರುವುದನ್ನು ನೋಡಿ ಉರುಳು ಹಾಕಲಾಗಿದೆ’ ಎಂದು ಪರಿಸರವಾದಿಗಳು ಟೀಕಿಸಿದ್ದಾರೆ.

‘ಜಲಾಶಯ ವೀಕ್ಷಣೆಗೆ ಬರುವ ಪ್ರವಾಸಿಗರು ಹಿನ್ನೀರಿನಲ್ಲಿ ಮೋಜು ಮಾಡುವುದು ಹೆಚ್ಚಾಗಿದೆ. ಪರಿಸರ ಹಾಗೂ ವನ್ಯಜೀವಿಗಳ ಜೀವಕ್ಕೆ ಕುತ್ತು ತರುವ ಚಟುವಟಿಕೆಗಳಿಗೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.