ADVERTISEMENT

ಹನೂರು: ಗೋಪಿನಾಥಂ ಮಿಸ್ಟ್ರಿ ಟ್ರೇಲ್ ಕ್ಯಾಂಪ್ ಜೆಎಲ್‌ಆರ್‌ಗೆ; ಆಕ್ಷೇಪ

ಬಿ.ಬಸವರಾಜು
Published 17 ಸೆಪ್ಟೆಂಬರ್ 2020, 19:30 IST
Last Updated 17 ಸೆಪ್ಟೆಂಬರ್ 2020, 19:30 IST
ಗೋಪಿನಾಥಂ ಮಿಸ್ಟ್ರಿ ಟ್ರೇಲ್‌ಕ್ಯಾಂಪ್‌ನ ಪ್ರವೇಶ ದ್ವಾರ
ಗೋಪಿನಾಥಂ ಮಿಸ್ಟ್ರಿ ಟ್ರೇಲ್‌ಕ್ಯಾಂಪ್‌ನ ಪ್ರವೇಶ ದ್ವಾರ   

ಹನೂರು: ಕಾವೇರಿ ವನ್ಯಧಾಮದಲ್ಲಿರುವ ಗೋಪಿನಾಥಂ ಮಿಸ್ಟ್ರಿ ಟ್ರೇಲ್ ಕ್ಯಾಂಪ್ ಅನ್ನುಅರಣ್ಯ ಇಲಾಖೆಯು ಜಂಗಲ್ ಲಾಡ್ಜಸ್‌ ಅಂಡ್ ರೆಸಾರ್ಟ್ಸ್‌ಗೆ (ಜೆಎಲ್‌ಆರ್‌) ಹಸ್ತಾಂತರಿಸುತ್ತಿರುವುದಕ್ಕೆ ಪರಿಸರ ಆಸಕ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕ್ಯಾಂಪ್‌ನಲ್ಲಿ ತಂಗುವುದಕ್ಕೆ ಅರಣ್ಯ ಇಲಾಖೆ ನಿಗದಿಪಡಿಸಿರುವ ಬೆಲೆ ಅತ್ಯಂತ ಕಡಿಮೆ ಇದ್ದು, ಪರಿಸರದ ಬಗ್ಗೆ ಆಸಕ್ತಿ ಉಳ್ಳ ಸಾಮಾನ್ಯ ಜನರು ಕೂಡ ಉಳಿದುಕೊಳ್ಳಬಹುದು. ಆದರೆ, ಜೆಎಲ್‌ಆರ್‌ಗೆ ನೀಡಿದ ನಂತರ ಸಾಮಾನ್ಯ ಜನರಿಗೆ ಅಲ್ಲಿ ಉಳಿದುಕೊಳ್ಳಲು ಸಾಧ್ಯವೇ ಇಲ್ಲ. ಕ್ಯಾಂಪ್‌ ಸಿರಿವಂತರಿಗೆ ಮಾತ್ರ ಕೈಗೆಟುಕಲಿದೆ ಎಂದು ಅರಣ್ಯ ಪ್ರೇಮಿಗಳು ಆರೋಪಿಸುತ್ತಾರೆ.

ಅರಣ್ಯ ಇಲಾಖೆಯು ಪ್ರತಿ ಟೆಂಟ್‌ಗೆ ₹1,600 ದರ ನಿಗದಿ ಪಡಿಸಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಜೆಎಲ್‌ಆರ್‌ ನಿರ್ವಹಿಸುತ್ತಿರುವ ಲಾಡ್ಜ್‌, ರೆಸಾರ್ಟ್‌ಗಳ ದಿನದ ಬಾಡಿಗೆ ಏಳೆಂಟು ಸಾವಿರ ರೂಪಾಯಿ ಇದೆ. ಮಿಸ್ಟ್ರಿ ಟ್ರೇಲ್‌ ಕ್ಯಾಂಪ್‌ನಲ್ಲೂ ಅದು ದುಬಾರಿ ದರವನ್ನೇ ನಿಗದಿ ಪಡಿಸುವುದು ಖಚಿತ. ಅಷ್ಟು ಹಣ ತೆತ್ತು ಜನ ಸಾಮಾನ್ಯರಿಗೆ ಭೇಟಿ ನೀಡಲು ಸಾಧ್ಯವಿಲ್ಲ ಎಂಬುದು ಅವರ ಅಭಿ‌ಪ್ರಾಯ.

ADVERTISEMENT

ನಿಯಮ ಉಲ್ಲಂಘನೆ: ‘ಅರಣ್ಯ ಪ್ರದೇಶದ ಒಳಗಿರುವ ವಸತಿಗೃಹಗಳು, ನಿರೀಕ್ಷಣಾ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ಹಾಗೂ ವಾಣಿಜ್ಯ ಉದ್ದೇಶದ ಸಂಸ್ಥೆಗಳಿಗೆ ನೀಡಬಾರದು ಎಂದು ಸುಪ್ರೀಂ ಕೋರ್ಟ್‌ ನೇಮಿಸಿರುವ ಕೇಂದ್ರ ಉನ್ನತಾಧಿಕಾರಿ ಸಮಿತಿ 2018ರಲ್ಲಿ ಹೇಳಿದೆ.ಗಾಳಿಬೋರೆ, ಭೀಮೇಶ್ವರಿ ಹಾಗೂ ಬಿಆರ್‌ಟಿಯ ಕೆ.ಗುಡಿಯಲ್ಲೂ ಜೆಎಲ್‌ಆರ್‌ ರೆಸಾರ್ಟ್‌ಗಳನ್ನು ನಡೆಸುತ್ತಿದೆ. ಇದಕ್ಕೆ ಯಾವುದೇ ಪೂರ್ವಾನುಮತಿ ಪಡೆದಿಲ್ಲ. ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅನ್ವಯ, ಈ ರೆಸಾರ್ಟ್‌ಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಹಾಗೂ ಕೇಂದ್ರ ಪರಿಸರ ಸಚಿವಾಲಯ ವತಿಯಿಂದ ಸೂಕ್ತ ಅನುಮತಿ ಪಡೆಯುವಂತೆ ಆದೇಶಿಸಲಾಗಿದೆ. ಆದರೆ ಈವರೆಗೂ ಜೆಎಲ್‌ಆರ್‌ ಅನುಮತಿ ಪಡೆದಿಲ್ಲ. ಈಗ ಅದೇ ಸಂಸ್ಥೆಗೆ ಮಿಸ್ಟ್ರಿ ಟ್ರೇಲ್ ಕ್ಯಾಂಪ್ ನೀಡಲಾಗುತ್ತಿದೆ’ ಎಂದು ಬೆಂಗಳೂರಿನ ಸುರೇಶ್ ಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಭಿನ್ನ ಅಭಿಪ್ರಾಯ:ಅರಣ್ಯ ಇಲಾಖೆಯಲ್ಲೂ ಕೆಲವು ಅಧಿಕಾರಿಗಳು ಕ್ಯಾಂಪ್‌ ಹಸ್ತಾಂತರಿಸುವ ವಿಚಾರದಲ್ಲಿ ಭಿನ್ನ ಅಭಿಪ್ರಾಯ ಹೊಂದಿದ್ದಾರೆ.

ಈಗ ಪ್ರವಾಸಿಗರು ಭೇಟಿ ನೀಡುತ್ತಿದ್ದರೂ, ಹೆಚ್ಚಿನ ಮನೋರಂಜನಾ ಚಟುವಟಿಕೆಗಳಿಗೆ ಇಲ್ಲಿ ಅವಕಾಶ ಇಲ್ಲ. ಜೊತೆಗೆ,ಎರಡು ರಾಜ್ಯಗಳ ಗಡಿ ಭಾಗದಲ್ಲಿ ಕ್ಯಾಂಪ್‌ ಇರುವುದರಿಂದ ಹಲವು ಸಭೆಗಳಿಗೆ ಇದು ವೇದಿಕೆಯಾಗಿದೆ. ಎರಡು ರಾಜ್ಯಗಳ ಪೊಲೀಸ್ ಹಾಗೂ ಅರಣ್ಯ ಇಲಾಖೆಗಳು ಇಲ್ಲಿ ಸಭೆಗಳನ್ನು ನಡೆಸುವ ಮೂಲಕ ಗಡಿಭಾಗದಲ್ಲಾಗುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸುತ್ತಾ ಬಂದಿವೆ. ಕ್ಯಾಂಪ್‌ ಹಸ್ತಾಂತರಿಸುವುದರಿಂದ ಅಂತಹ ಸಭೆಗಳನ್ನು ನಡೆಸುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೇಳುತ್ತಾರೆ.

ಮಿಸ್ಟ್ರಿ ಟ್ರೇಲ್ ಕ್ಯಾಂಪ್ ಅರಣ್ಯ ಇಲಾಖೆ ವಶದಲ್ಲಿರುವುದರಿಂದ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಮುಂದೆ ಬೇರೆ ಸಂಸ್ಥೆ ನಿರ್ವಹಿಸುವುದರಿಂದ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಸಿಕ್ಕಿದಂತಾಗುತ್ತದೆ ಎಂಬ ಆತಂಕವನ್ನೂ ಪರಿಸರ ಪ್ರಿಯರು ವ್ಯಕ್ತಪಡಿಸಿದ್ದಾರೆ.

‘ಕ್ಯಾಂಪ್ ನಿರ್ವಹಣೆ ಕಷ್ಟವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿಲ್ಲ ಎಂಬ ನೆಪವೊಡ್ಡಿ ಅರಣ್ಯ ಇಲಾಖೆ ಕ್ಯಾಂಪ್ ಅನ್ನು ಜೆಎಲ್ ಆರ್ ವಶಕ್ಕೆ ನೀಡುತ್ತಿದೆ. ಪ್ರವಾಸೋದ್ಯಮ ಉದ್ದೇಶಕ್ಕೆ ಕ್ಯಾಂಪ್‌ ಬಳಕೆಯಾಗುವುದರಿಂದ ಅಕ್ರಮ ಚಟುವಟಿಕೆಗಳು ಹೆಚ್ಚಾಗುವುದರಲ್ಲಿ ಸಂಶಯ ಇಲ್ಲ. ಇದರಿಂದ ಸ್ಥಳೀಯರು, ವನ್ಯಜೀವಿಗಳಿಗೆ ತೊಂದರೆಯಾಗಲಿದೆ. ಹಾಗಾಗಿ, ಇಲಾಖೆ ಯಾವುದೇ ಕಾರಣಕ್ಕೆ ಕ್ಯಾಂಪ್‌ ಅನ್ನು ಹಸ್ತಾಂತರಿಸಬಾರದು’ ಎಂದು ಬೆಂಗಳೂರಿನ ನವೀನ್‌ ಅವರು ಒತ್ತಾಯಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾವೇರಿ ವನ್ಯಧಾಮದ ಡಿಸಿಎಫ್‌ ಡಾ.ಎಸ್‌.ರಮೇಶ್‌ ಅವರು, ‘ಕ್ಯಾಂಪ್‌ ನಿರ್ವಹಿಸುವುದು ಇಲಾಖೆಗೆ ಕಷ್ಟವಾಗಿದೆ. ಈ ಕಾರಣಕ್ಕೆ ಜೆಎಲ್‌ಆರ್‌ಗೆ ನಿರ್ವಹಣೆ ಹೊಣೆ ನೀಡುತ್ತಿದ್ದೇವೆ. ಸಂಸ್ಥೆಯು ಶೀಘ್ರದಲ್ಲಿ ತನ್ನ ಕೆಲಸ ಆರಂಭಿಸಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.