ADVERTISEMENT

ನಟ ಗಣೇಶ್ ಕಟ್ಟಡ ನಿರ್ಮಾಣ ಪ್ರಕರಣ: ಪ್ರತಿಭಟನೆಗೆ ತೆರಳಿದ್ದವರಿಗೆ ಘೇರಾವ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 13:47 IST
Last Updated 7 ಸೆಪ್ಟೆಂಬರ್ 2023, 13:47 IST
ಗುಂಡ್ಲುಪೇಟೆ ತಾಲ್ಲೂಕಿನ ಜಕ್ಕಹಳ್ಳಿ ಗ್ರಾಮದ ಬಳಿ ಚಲನಚಿತ್ರ ನಟ ಗಣೇಶ್ ನಿರ್ಮಾಣ ಮಾಡುತ್ತಿರುವ ಬೃಹತ್ ಕಟ್ಟಡದ ಬಳಿ ರೈತ ಸಂಘಟನೆಯ ಮುಖಂಡರು ಪ್ರತಿಭಟಿಸಿದರು.
ಗುಂಡ್ಲುಪೇಟೆ ತಾಲ್ಲೂಕಿನ ಜಕ್ಕಹಳ್ಳಿ ಗ್ರಾಮದ ಬಳಿ ಚಲನಚಿತ್ರ ನಟ ಗಣೇಶ್ ನಿರ್ಮಾಣ ಮಾಡುತ್ತಿರುವ ಬೃಹತ್ ಕಟ್ಟಡದ ಬಳಿ ರೈತ ಸಂಘಟನೆಯ ಮುಖಂಡರು ಪ್ರತಿಭಟಿಸಿದರು.   

ಗುಂಡ್ಲುಪೇಟೆ: ನಟ ಗಣೇಶ್ ನಿರ್ಮಿಸುತ್ತಿರುವ ಬೃಹತ್ ಕಟ್ಟಡದ ಬಳಿ ರೈತ ಸಂಘಟನೆ ಮುಖಂಡರು ಗುರುವಾರ ಪ್ರತಿಭಟನೆಗೆಂದು ಹೋಗುತ್ತಿದ್ದಾಗ  ಜಕ್ಕಹಳ್ಳಿ, ಮಂಗಲ, ಎಲಚೆಟ್ಟಿ ಗ್ರಾಮಸ್ಥರು ಘೇರಾವ್ ಹಾಕಿ ಸ್ಥಳಕ್ಕೆ ಹೋಗದಂತೆ ತಡೆದರು.

ಮುಖಂಡರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರೆಲ್ಲಾ ಒಟ್ಟುಗೂಡಿ,‘ನಮಗೆ ಈ ಕಟ್ಟಡ ನಿರ್ಮಾಣದಿಂದ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ. ಇಲ್ಲಿನ ರೈತರಿಗೆ ತೊಂದರೆ ಆಗುತ್ತಿರುವ ಬಗ್ಗೆ ಏನಾದರೂ ನಿಮಗೆ ಮನವಿ ಮಾಡಿದ್ದಾರೆಯೇ? ನಮಗೆ ತೊಂದರೆ ಆದರೆ, ನಮ್ಮ ಗ್ರಾಮಸ್ಥರು ಬಗೆಹರಿಸಿಕೊಳ್ಳುತ್ತೇವೆ. ನಿಮ್ಮ ಅವಶ್ಯಕತೆ ನಮಗಿಲ್ಲ. ನೀವು ಜಾಗ ವೀಕ್ಷಣೆ ಮಾಡಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು.

‘ಈ ಕಾಡಂಚಿನ ಗ್ರಾಮಕ್ಕೆ ಇಪ್ಪತ್ತು ವರ್ಷಗಳ ಕಾಲ ರಸ್ತೆ ಇಲ್ಲ, ಕಾಡು ಪ್ರಾಣಿಗಳಿಂದ ಜನ ಮತ್ತು ಕೃಷಿ ಚಟುವಟಿಕೆಗಳಿಗೆ ತೊಂದರೆಯಾದಾಗ ಯಾವ ಸಂಘಟನೆಗಳೂ ಈ ಕಡೆಗೆ ಮುಖ ಮಾಡಿಲ್ಲ, ಡೋಂಗಿ ಪರಿಸರವಾದಿಗಳ ಪ್ರೇರಣೆಯಿಂದ ಇಲ್ಲಿಗೆ ಬಂದು ನಾಟಕವಾಡುತ್ತಿದ್ದೀರಾ’ ಎಂದು ರೈತ ಮುಖಂಡರನ್ನೇ ಪ್ರಶ್ನಿಸಿದರು.

ADVERTISEMENT

‘ನಮಗೆ ಯಾವ ಪರಿಸರವಾದಿಗಳೂ ಪ್ರತಿಭಟಿಸಲು ಹೇಳಿಲ್ಲ. ಕಾಡಂಚಿನ ಜನರಿಗೆ ಮಾತ್ರ ಕಾನೂನು ಕೇಳುವ ಸರ್ಕಾರ ಹಣವಂತರಿಗೆ ಹೇಗೆ ಬೃಹತ್ ಪ್ರಮಾಣದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀ‍ಡಿತು ಎಂದು ತಿಳಿದುಕೊಳ್ಳುವ ಸಲುವಾಗಿ ಬಂದಿದ್ದೇವೆ’ ಎಂದು ಗ್ರಾಮಸ್ಥರಿಗೆ ತಿಳಿಸಿದರು. ಆದರೂ ಸಹ ಅಲ್ಲಿನ ಜನರು ಕೇಳದೆ ವಿರೋಧಿಸಿದರು.

ಪೊಲೀಸರು ಮಧ್ಯಸ್ಥಿಕೆ ವಹಿಸಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದಾಗ, ‘ಈ ವಿಚಾರ ಹೈಕೋರ್ಟ್‌‌‌ನಲ್ಲಿರುವುದರಿಂದ ಪೊಲೀಸರು ಮಧ್ಯೆಪ್ರವೇಶಿಸುವುದಿಲ್ಲ, ಯಾವುದೇ ಗಲಾಟೆಗಳು ನಡೆಯದಂತೆ ಭದ್ರತೆ ಒದಗಿಸುವುದಷ್ಟೇ ನಮ್ಮ ಕೆಲಸ’ ಎಂದು ಪೊಲೀಸ್ ಇನ್ಸ್‌‌‌‌‌‌‌ಪೆಕ್ಟರ್ ಪರಶಿವಮೂರ್ತಿ ರೈತ ಮುಖಂಡರಿಗೆ ತಿಳಿಸಿದರು.

ಖಾಸಗಿ ಆಸ್ತಿ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡುವಂತಿಲ್ಲ ಎಂದು ಆರ್ ಐ ನದೀಮ್ ರೈತ ಮುಖಂಡರಿಗೆ ಮನವರಿಕೆ ಮಾಡಿದರು.
‘ನಾವು ಜಾಗ ವೀಕ್ಷಣೆ ಮಾಡಬೇಕು’ ಎಂದು ಪಟ್ಟು ಹಿಡಿದಾಗ ರೈತ ಮುಖಂಡರು ಮತ್ತು ಗ್ರಾಮಸ್ಥರಿಗೆ ವಾಗ್ವಾದ ನಡೆಯಿತು. ಪೊಲೀಸರು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರು. ಬಳಿಕ ರೈತ ಸಂಘಟನೆಯ ಇಬ್ಬರು ಮಾತ್ರವೇ ಜಾಗಕ್ಕೆ ನೋಡಲು ಅವಕಾಶ ಮಾಡಿದರು.

ರೈತ ಸಂಘಟನೆಯ ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಹಾಲಹಳ್ಳಿ ಮಹೇಶ್, ಹೊಸಹಳ್ಳಿ ಮಹೇಶ್, ಹಿರಿಕಾಟಿ ಚಿಕ್ಕಣ್ಣ, ಕುಣಗಳ್ಳಿ ಸುರೇಶ್, ದಡದಹಳ್ಳಿ ಮಹೇಶ್, ಎಲಚೆಟ್ಟಿ, ಜಕ್ಕಹಳ್ಳಿ ಮತ್ತು ಮಂಗಲ ಗ್ರಾಮಸ್ಥರು ಇದ್ದರು.

ಬೆಂಗಳೂರು ಮೈಸೂರಿನವರು ಪರಿಸರವಾದಿಗಳ ಹೆಸರು ಹೇಳಿಕೊಂಡು ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇಲ್ಲಿನ ಪರಿಸ್ಥಿತಿಯ ಬಗ್ಗೆ ಅವರಿಗೆ ಅರಿವಿಲ್ಲ ಕಾಡಂಚಿನ ಗ್ರಾಮದ ರೈತರು ಜಮೀನುಗಳನ್ನು ಮಾರಾಟ ಮಾಡಬಾರದು ಎಂದು ಕಂದಾಯ ಇಲಾಖೆಗೆ ಪತ್ರ ಬರೆಯುತ್ತಾರೆ ಪರಿಸರವಾದಿಗಳು. ಇಲ್ಲಿ ಬೆಳೆ ಬೆಳೆದರೆ ಕಾಡು ಪ್ರಾಣಿಗಳ ಪಾಲಾಗುತ್ತದೆ ಮಕ್ಕಳ ವಿದ್ಯಾಭ್ಯಾಸ ಮದುವೆ ಇತ್ಯಾದಿಗಳಿಗೆ ಜಮೀನು ಮಾರಾಟ ಮಾಡುತ್ತೇವೆ. ರೆಸಾರ್ಟ್ಗಳು ನಿರ್ಮಾಣವಾದರೆ ನೂರಾರು ಜನರಿಗೆ ಕೆಲಸ ಸಿಗುತ್ತದೆ ಎಂದು ಗ್ರಾಮಸ್ಥರು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.