ADVERTISEMENT

ಮಾದಕ ವಸ್ತು ಮುಕ್ತ ಚಾಮರಾಜನಗರ ಗುರಿ: SP ಎಂ.ಮುತ್ತುರಾಜ್‌

ಗಡಿಯಲ್ಲಿ ಕಟ್ಟೆಚ್ಚರ; ಅಪರಾಧ ಕೃತ್ಯಗಳ ಪ್ರಮಾಣ ತಗ್ಗಿಸಲು ಒತ್ತು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 8:05 IST
Last Updated 12 ಫೆಬ್ರುವರಿ 2026, 8:05 IST
ಎಂ.ಮುತ್ತುರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಎಂ.ಮುತ್ತುರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ   

ಚಾಮರಾಜನಗರ: ‘ಮಾದಕ ವಸ್ತು ಮುಕ್ತ ಚಾಮರಾಜನಗರ ಜಿಲ್ಲೆ’ ನಿರ್ಮಾಣ ಜಿಲ್ಲಾ ಪೊಲೀಸ್ ಇಲಾಖೆಯ ಗುರಿಯಾಗಿದ್ದು ಮಾದಕ ಪದಾರ್ಥಗಳ ತಯಾರಿಕೆ, ಮಾರಾಟ, ಸಾಗಾಣಿಕೆ ಹಾಗೂ ಸೇವನೆಯ ಜಾಲದ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳ ಪೂರೈಕೆ ಜಾಲವನ್ನು ಸಂಪೂರ್ಣವಾಗಿ ಮಟ್ಟಹಾಕುವುದರ ಜೊತೆಗೆ ಡ್ರಗ್ಸ್‌ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಶಿಕ್ಷಣ ಸಂಸ್ಥೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಎಸ್‌ಪಿ ಹೇಳಿದರು.

ಗಡಿಯಲ್ಲಿ ಕಟ್ಟೆಚ್ಚರ:   

ADVERTISEMENT

ತಮಿಳುನಾಡು ಹಾಗೂ ಕೇರಳ ಜೊತೆ ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳ ಪ್ರಮಾಣ ತಗ್ಗಿಸುವುದು ಹಾಗೂ ಮಾನವ ಪ್ರಾಣಿ ಸಂಘರ್ಷ ತಡೆಯುವುದು ಆದ್ಯತೆಯಾಗಿದೆ. ಪೂರಕವಾಗಿ ಉಭಯ ರಾಜ್ಯಗಳನ್ನು ಸಂಪರ್ಕಿಸುವ ಅಂತರರಾಜ್ಯ ಗಡಿಗಳಲ್ಲಿರುವ ಚೆಕ್‌ಪೋಸ್ಟ್‌ಗಳ ಮೇಲೆ ನಿಗಾ ಇರಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜನೆಯ ಜೊತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ದಿನದ 24 ತಾಸು ತಪಾಸಣೆ ನಡೆಯುತ್ತಿದೆ.

ಮಹಿಳೆಯರ ಸುರಕ್ಷತೆಗೆ ಒತ್ತು:

ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ‘ಅಕ್ಕಪಡೆ’ ರಚಿಸಲಾಗಿದ್ದು ಶಾಲಾ ಕಾಲೇಜು, ಉದ್ಯಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರಂತರವಾಗಿ ಗಸ್ತು ನಡೆಯುತ್ತಿದೆ. 

ಇ ಬೀಟ್‌ಗೆ ಬಲ:

ಕಳ್ಳತನ ಹಾಗೂ ಅಪರಾಧ ಕೃತ್ಯಗಳ ತಡೆಗೆ ಇ ಬೀಟ್ ವ್ಯವಸ್ಥೆಯನ್ನು ಬಲಗೊಳಿಸಲಾಗಿದೆ. ಪೊಲೀಸರು ಕಡ್ಡಾಯವಾಗಿ ರಾತ್ರಿ ಗಸ್ತು ನಡೆಸಿದ ಫೋಟೊಗಳನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಪ್ರತಿ ಠಾಣೆಯಲ್ಲಿ ಬೀಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ, ಪೊಲೀಸರ ಜೊತೆಗೆ ಹೋಂಗಾರ್ಡ್ಸ್‌ ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ ಗುಡ್ ಮಾರ್ನಿಂಗ್ ಬೀಟ್‌ ಹಾಗೂ ಬೆಳಿಗ್ಗೆ ಹಾಗೂ ಸಂಜೆ ಠಾಣೆಯ ಎಲ್ಲ ಸಿಬ್ಬಂದಿಯನ್ನೊಳಗೊಂಡ ತಂಡದಿಂದ ಗ್ರೂಪ್ ಪ್ಯಾಟ್ರೊಲಿಂಗ್ ಮಾಡಿಸಲಾಗುತ್ತಿದೆ.

ವಿರೂಪ ನಂಬರ್ ಪ್ಲೇಟ್‌ ವಿರುದ್ಧ ಕ್ರಮ:

ನಂಬರ್ ಪ್ಲೇಟ್ ಹೊಂದಿಲ್ಲದ, ವಿರೂಪಗೊಂಡ ನಂಬರ್‌ ಪ್ಲೇಟ್‌ ಹಾಕಿಸಿರುವ ಬೈಕ್‌, ಆಟೋ ಹಾಗೂ ನಾಲ್ಕು ಚಕ್ರದ 32 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮುಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ವಾಹನಗಳ ಮಾಲೀಕರ ಬೆರಳಚ್ಚು ಮಾದರಿ ಸಂಗ್ರಹಿಸಲಾಗುತ್ತಿದೆ.

ಜನಸ್ನೇಹಿ ಪೊಲೀಸ್:

ಠಾಣೆಗೆ ದೂರು ನೀಡಲು ಬಂದವರ ಜೊತೆಗೆ ಸೌರ್ಜನ್ಯದಿಂದ ವರ್ತಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಾನೂನು ನೆರವು ನೀಡುವುದರ ಜೊತೆಗೆ ಮಾನವೀಯ ನೆರವು ನೀಡುವ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು ನೀಡಲಾಗಿದೆ.

ಸೈಬರ್ ಅಪರಾಧ ತಡೆಗೆ ಒತ್ತು:

ಮಹಾನಗರಗಳಿಗೆ ಸೀಮಿತವಾಗಿದ್ದ ಸೈಬರ್ ಅಪರಾಧ ಪ್ರಕರಣಗಳು ಗ್ರಾಮಾಂತರ ಭಾಗಗಳಿಗೂ ವಿಸ್ತರಣೆಯಾಗಿದ್ದು ಡಿಜಿಟಲ್ ಅರೆಸ್ಟ್‌ ಹೆಸರಿನಲ್ಲಿ ನಾಗರಿಕರನ್ನು ಬೆದರಿಸಿ ಹಣ ದೋಚಲಾಗುತ್ತಿದೆ. ಸೈಬರ್ ಅಪರಾಧಗಳ ಬಗ್ಗೆ ಜನರು ಎಚ್ಚರವಾಗಿರಬೇಕು, ಹಣದುಪಟ್ಟು ಆಸೆಗೆ ಬಿದ್ದು ಅಪಚಿರಿತರಿಗೆ ಬ್ಯಾಂಕ್‌ ಖಾತೆ, ಆಧಾರ್, ಪಾನ್‌, ಒಟಿಪಿ ಸಹಿತ ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು.

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಲಾಗಿದ್ದು ಸಮಾಜದಲ್ಲಿ ಗಲಭೆ ಅಶಾಂತಿ ಸೃಷ್ಟಿಸುವ, ಕೋಮು ಸೌಹಾರ್ದತೆ ಕದಡುವ ಸಂದೇಶ ಹರಡಿದರೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಜಾಲತಾಣಗಳ ಮೇಲೆ ನಿಗಾ ಇರಿಸಲು ತಂಡವೊಂದನ್ನು ನಿಯೋಜಿಸಲಾಗಿದೆ ಎಂದು ಎಸ್‌ಪಿ ಮುತ್ತುರಾಜ್ ಎಚ್ಚರಿಕೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್‌.ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಲಕ್ಕೂರು ವೇದಿಕೆಯಲ್ಲಿ ಇದ್ದರು.

‘ಎಎಂಪಿಆರ್‌ ಕ್ಯಾಮೆರಾ ಅಳವಡಿಕೆ’

ಸಂಚಾರ ನಿಯಮಗಳ ಪಾಲನೆ ಹಾಗೂ ಅಪರಾಧ ಕೃತ್ಯಗಳ ಪತ್ತೆಹಚ್ಚುವಿಕೆಗೆ ಪೂರಕವಾದಿ ನಗರದಲ್ಲಿ 14 ಅತ್ಯಾಧುನಿಕ ತಂತ್ರಜ್ಞಾನದ ಎಎಂಪಿಆರ್ ಕ್ಯಾಮೆರಾಗಳ ಅಳವಡಿಕೆ ನಡೆಯುತ್ತಿದೆ. ಚಾಮರಾಜನಗರ ಸಂತೇಮರಹಳ್ಳಿ ಕೊಳ್ಳೇಗಾಲ ಹನೂರು ತಾಲ್ಲೂಕುಗಳ ಆಯಕಟ್ಟಿನ ಸ್ಥಳಗಳಲ್ಲಿ ಹಾಕಲಾಗುತ್ತಿದ್ದು ಹೆಲ್ಮೆಟ್‌ ಸೀಟ್‌ ಬೆಲ್ಟ್‌ ಧರಿಸದೆ ವಾಹನ ಚಲಾಯಿಸಿದರೆ ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಓಡಿಸಿದರೆ ನೇರವಾಗಿ ವಾಹನ ಮಾಲೀಕರ ಮನೆಗೆ ದಂಡದ ನೋಟಿಸ್ ಬರಲಿದೆ ಎಂದು ಎಸ್‌ಪಿ ಮುತ್ತುರಾಜ್ ತಿಳಿಸಿದರು.

‘217 ಒಂಟಿ ನಾಗರಿಕರ ಗುರುತು’

ಸಂಭವನೀಯ ವಂಚನೆ ದರೋಡೆ ಕೊಲೆ ಹಲ್ಲೆ ದೌರ್ಜನ್ಯ ತಡೆಯುವ ಉದ್ದೇಶದಿಂದ ಜಿಲ್ಲೆಯಲ್ಲಿ ಒಂಟಿಯಾಗಿ ಬದುಕುತ್ತಿರುವ ನಾಗರಿಕರನ್ನು ಗುರುತಿಸಿ ರಕ್ಷಣೆ ಹಾಗೂ ಸಹಾಯ ಹಸ್ತ ಚಾಚುವ ಕೆಲಸಕ್ಕೆ ಪೊಲೀಸ್ ಇಲಾಖೆ ಕೈಹಾಕಿದೆ.   ಈಗಾಗಲೇ 217 ಏಕಾಂಗಿ ಹಿರಿಯ ನಾಗರಿಕರನ್ನು ಗುರುತಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.