ADVERTISEMENT

ಚಾಮರಾಜನಗರ: ಸಗಣಿ ಎರಚಾಡುವ ‘ಗೊರೆ ಹಬ್ಬ’ ಸಂಪನ್ನ, ಪುನೀತ್‌ಗೆ ಶ್ರದ್ಧಾಂಜಲಿ

ಗಡಿ ಭಾಗ ತಾಳವಾಡಿಯ ಗುಮಟಾಪುರದಲ್ಲಿ ನಡೆಯುವ ವಿಶಿಷ್ಟ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 15:01 IST
Last Updated 6 ನವೆಂಬರ್ 2021, 15:01 IST
ಗೊರೆ ಹಬ್ಬದಲ್ಲಿ ಭಾಗವಹಿಸಿದ್ದವರು, ಡಾ.ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರ ಹಿಡಿದು ಶ್ರದ್ಧಾಂಜಲಿ ಆರ್ಪಿಸಿದರು
ಗೊರೆ ಹಬ್ಬದಲ್ಲಿ ಭಾಗವಹಿಸಿದ್ದವರು, ಡಾ.ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರ ಹಿಡಿದು ಶ್ರದ್ಧಾಂಜಲಿ ಆರ್ಪಿಸಿದರು   

ಚಾಮರಾಜನಗರ: ಸಮೀಪದ ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ಗುಮಟಾಪುರದಲ್ಲಿ ಪ್ರತಿ ವರ್ಷ ದೀಪಾವಳಿಯ ಮರುದಿನ ನಡೆಯುವ, ಸಗಣಿಯಲ್ಲಿ ಹೊಡೆದಾಡುವ ‘ಗೊರೆ ಹಬ್ಬ’ ಶನಿವಾರ ಸಂಭ್ರಮ ಸಡಗರದಿಂದ ನಡೆಯಿತು.

ಕೋವಿಡ್‌ ಕಾರಣದಿಂದ ಕಳೆದ ವರ್ಷ ಹಬ್ಬದಲ್ಲಿ ಭಾಗವಹಿಸಿದ್ದ ಜನರ ಸಂಖ್ಯೆ ಕಡಿಮೆ ಇತ್ತು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು.

ತಾಳವಾಡಿ ತಮಿಳುನಾಡಿನಲ್ಲೇ ಇದ್ದರೂ, ಆ ಪ್ರದೇಶದಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ, ಗೊರೆ ಹಬ್ಬ ಕನ್ನಡಿಗರ ಹಬ್ಬ. ಶತಮಾನಕ್ಕೂ ಹೆಚ್ಚಿನ ಇತಿಹಾಸ ಇದಕ್ಕಿದೆ. ಜಾತಿ ಮತ, ವಯಸ್ಸಿನ ಭೇದವಿಲ್ಲದೆ ಎಲ್ಲರೂ ಸಗಣಿ ಹೊಡೆದಾಟದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.

ADVERTISEMENT

ಪಟಾಕಿ, ಮಂಗಳವಾದ್ಯಗಳ ಸದ್ದು, ಜನರ ಕೇಕೆ, ಶಿಳ್ಳೆ, ಅರಚಾಟ, ಕೂಗಾಟಗಳ ನಡುವೆ ಗ್ರಾಮಸ್ಥರು ಎರಡು ತಂಡಗಳಾಗಿ ಪೈಪೋಟಿಗೆ ಬಿದ್ದವರಂತೆ ಸಗಣಿ ರಾಶಿಯಿಂದ ದೊಡ್ಡ ದೊಡ್ಡ ಉಂಡೆಗಳನ್ನಾಗಿ ಮಾಡಿ ಪರಸ್ಪರ ಎಸೆದರು. ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಗಣಿಯಲ್ಲಿ ಹೊಡೆದಾಡಿಕೊಂಡರು.

‌ಗ್ರಾಮದ ಬೀರೇಶ್ವರ ದೇವಾಲಯದ ಹಿಂಭಾಗದಲ್ಲಿರುವ ಅಂಬೇಡ್ಕರ್‌ ಕಾಲೊನಿಯಲ್ಲಿ ಈ ಹಬ್ಬ ನಡೆಯುತ್ತದೆ. ಹಬ್ಬಕ್ಕಾ‌ಗಿ ಬೆಳಗ್ಗಿನಿಂದಲೇ ಸಗಣಿ ರಾಶಿ ಮಾಡಲಾಗಿತ್ತು.

ಚಾಡಿಕೋರನ ಮೆರವಣಿಗೆ:ಮಧ್ಯಾಹ್ನ 2.30ಕ್ಕೆ ಸುಮಾರಿಗೆ ಗ್ರಾಮದ ಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಕ್ಕಳು ಸಾಂಕೇತಿಕವಾಗಿ ಸಗಣಿ ಎರಚಾಡಿಕೊಳ್ಳುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು.

ನಂತರ ಚಾಡಿಕೋರನ ಮೆರವಣಿಗೆ ನಡೆಯಿತು. ಹುಲ್ಲಿನ ಮೀಸೆ, ದಾಡಿ ಹಾಗೂ ಹಂಬು ಸೊಪ್ಪಿನ ಹಾರ ಧರಿಸಿದ್ದ ಇಬ್ಬರು ಚಾಡಿಕೋರರನ್ನು ಕತ್ತೆಗಳ ಮೇಲೆ ಕೂರಿಸಲಾಯಿತು. ಪ್ರಧಾನ ಚಾಡಿಕೋರನ ಪಾತ್ರ ನಿರ್ವಹಿಸಿದ ಆರ್‌.ಮಹದೇವ ಆವರು 43ನೇ ಬಾರಿಗೆ ಈ ಹೊಣೆಯನ್ನು ಹೊತ್ತುಕೊಂಡರು.

ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ನಂತರ, ಚಾಡಿಕೋರರನ್ನು ಬಿರೇಶ್ವರ ದೇವಾಲಕ್ಕೆ ಕರೆ ತಂದು ವಿಶೇಷ ಪೂಜೆ ಸಲ್ಲಿಸಲಾಯಿತು.

ಆ ಬಳಿಕ ಸಗಣಿ ಹೊಡೆದಾಟ ನಡೆಯಿತು. ದೇವಾಲಯದ ಅರ್ಚಕರು ಸಗಣಿ ರಾಶಿಗೆ ಪೂಜೆ ಸಲ್ಲಿಸಿದರು. ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಗಣಿ ಎರಚಾರ ನಡೆಯಿತು. ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮಸ್ಥರು ಹೊಡೆದಾಟವನ್ನು ಕಣ್ತುಂಬಿಕೊಂಡರು.ಗೊಂಡೆಕಾರನಗುಡ್ಡದಲ್ಲಿ ಚಾಡಿಕೋರನ ಪ್ರತಿಕೃತಿಯನ್ನು ದಹಿಸುವ ಮೂಲಕ ‘ಗೊರೆ ಹಬ್ಬ’ ಮುಕ್ತಾಯ ಕಂಡಿತು.

ಆಚರಣೆ ಹಿಂದೆ ಪವಾಡದ ಕಥೆ

ಗ್ರಾಮದಲ್ಲಿದ್ದ ಜಮೀನ್ದಾರನ ಬಳಿ ಬೀರಪ್ಪ ಎಂಬ ವ್ಯಕ್ತಿ ಜೀತ ಮಾಡುತ್ತಿದ್ದ. ದೇವರ ಮೇಲೆ ಭಯ ಭಕ್ತಿ ಹೆಚ್ಚಿದ್ದ ಆತ, ಜಮೀನ್ದಾರರ ಮನೆಯ ಮಗನಂತೆಯೇ ಇದ್ದ. ಬೀರಪ್ಪ ಮೃತಪಟ್ಟ ನಂತರ ಆತ ಬಳಸುತ್ತಿದ್ದ ಬೆತ್ತ ಹಾಗೂ ಜೋಳಿಗೆಯನ್ನು ಜಮೀನ್ದಾರ ತಿಪ್ಪೆಗೆ ಎಸೆಯುತ್ತಾನೆ.

ತಿಪ್ಪೆಯಲ್ಲಿದ್ದ ಕಸ ತೆರವುಗೊಳಿಸುವ ಸಂದರ್ಭದಲ್ಲಿ ಎತ್ತಿನ ಗಾಡಿಯ ಚಕ್ರಕ್ಕೆ ಕಲ್ಲೊಂದು ಸಿಕ್ಕಿ ಒಡೆಯುತ್ತದೆ. ಅದರಲ್ಲಿ ರಕ್ತ ಸುರಿಯುತ್ತದೆ. ಜಮೀನ್ದಾರ ಬೀರಪ್ಪನ ಬೆತ್ತ ಹಾಗೂ ಜೋಳಿಗೆಯನ್ನು ಹುಡುಕಾಡುತ್ತಾನೆ. ಅದು ಸಿಗುವುದಿಲ್ಲ. ಅದೇ ಲಿಂಗ ರೂಪವಾಗಿದೆ ಎಂದು ಹೇಳಲಾಗುತ್ತಿದೆ.

ಗ್ರಾಮಸ್ಥರ ಕನಸಿನಲ್ಲಿ ಕಾಣಿಸಿಕೊಳ್ಳುವ ಬೀರಪ್ಪ, ದೀಪಾವಳಿಯ ನಂತರ ಗೊರೆ ಹಬ್ಬ ಮಾಡಬೇಕು ಎಂದು ಹೇಳುತ್ತಾನೆ. ಹಾಗಾಗಿ, ತಿಪ್ಪೆ ಗುಂಡಿ ಇದ್ದ ಜಾಗದಲ್ಲೇ ಬೀರಪ್ಪನ ದೇವಸ್ಥಾನ ನಿರ್ಮಿಸಲಾಗುತ್ತದೆ. ಅಂದಿನಿಂದಲೇ ಈ ಹಬ್ಬ ಆಚರಣೆಯಲ್ಲಿದೆ. 100 ವರ್ಷಕ್ಕೂ ಹೆಚ್ಚು ಸಮಯದಿಂದ ದೀಪಾವಳಿಯ ಮರುದಿನವೇ ಹಬ್ಬ ನಡೆಯುತ್ತಾ ಬಂದಿದೆ ಎಂದು ಹೇಳುತ್ತಾರೆ ಗ್ರಾಮಸ್ಥರು.

ಪುನೀತ್‌ಗೆ ಶ್ರದ್ಧಾಂಜಲಿ

ಸಗಣಿ ಹೊಡೆದಾಟ ಆರಂಭಕ್ಕೂ ಮುನ್ನ, ಇತ್ತೀಚೆಗೆ ನಿಧನರಾದ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಹಬ್ಬದ ಆಚರಣೆಗೆ ಸಿದ್ಧರಾಗಿದ್ದವರು ಪುನೀತ್‌ ರಾಜ್‌ಕುಮಾರ್‌ ಅವರ ದೊಡ್ಡ ಭಾವಚಿತ್ರವನ್ನು ಕೈಯಲ್ಲಿ ಎತ್ತಿ ಹಿಡಿದು, ‘ಪುನೀತ್‌ ರಾಜ್‌ಕುಮಾರ್‌ ಅಮರವಾಗಲಿ’ ಎಂಬ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.