ADVERTISEMENT

ಗುಂಡ್ಲುಪೇಟೆ: ಸರ್ಕಾರಿ ಉಪಕರಣಗಾರದ ನೂತನ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 15:22 IST
Last Updated 21 ಅಕ್ಟೋಬರ್ 2020, 15:22 IST
ಬುಧವಾರ ಉದ್ಘಾಟನೆಗೊಂಡ ನೂತನ ಕಟ್ಟಡ
ಬುಧವಾರ ಉದ್ಘಾಟನೆಗೊಂಡ ನೂತನ ಕಟ್ಟಡ   

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕೌಶಲಾಭಿವೃದ್ದಿ ಇಲಾಖೆ ಆಶ್ರಯದಲ್ಲಿ ಗುಂಡ್ಲುಪೇಟೆಯ ದುಂದಾಸನಪುರದಲ್ಲಿರುವ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ತರಬೇತಿ ಮತ್ತು ಆಡಳಿತ ವಿಭಾಗದ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಲಾಯಿತು.

ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಕೌಶಲಾಭಿವೃದ್ದಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ ಅವರು ವರ್ಚ್ಯುವಲ್ ಕಾರ್ಯಕ್ರಮದ ಮೂಲಕ ಬೆಂಗಳೂರಿನಿಂದಲೇ ಕಟ್ಟಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಗುಂಡ್ಲುಪೇಟೆಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಕ್ಕೆ ಆಧುನಿಕ ಕಟ್ಟಡ ವ್ಯವಸ್ಥೆ ಕಲ್ಪಿಸಲಾಗಿದೆ. ಕೇಂದ್ರಕ್ಕಾಗಿ ಇಂತಹ ಕಟ್ಟಡದ ಅಗತ್ಯವಿತ್ತು.ಈ ಕೇಂದ್ರದಲ್ಲಿ ವ್ಯಾಸಂಗ ಮಾಡಿದವರಿಗೆ ಶೇ 100ರಷ್ಟು ಉದ್ಯೋಗ ಅವಕಾಶ ಲಭಿಸುತ್ತಿದೆ. ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಯಶಸ್ಸು ಕಾಣುತ್ತಿದ್ದೇವೆ. ಹೊಸದಾಗಿ ನೂತನ ಕಟ್ಟಡದಲ್ಲಿ ಡಿಪ್ಲೊಮಾ ಇನ್ ಪ್ರಿಸಿಷನ್ ಮ್ಯಾನ್ಯುಫ್ಯಾಕ್ಚರಿಂಗ್ ಹಾಗೂ ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್ ಕೋರ್ಸುಗಳ ಆರಂಭಕ್ಕೆ ಉದ್ದೇಶಿಸಲಾಗಿದೆ. ಸ್ಥಳೀಯ ಶಾಸಕ ಕೇಂದ್ರದ ಬೆಳವಣಿಗೆಗೆ ಆಸಕ್ತಿ ಹೊಂದಿದ್ದಾರೆ’ ಎಂದು ಹೇಳಿದರು.

ADVERTISEMENT

‘ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಿಂದ ಸಾಕಷ್ಟು ಬದಲಾವಣೆಯಾಗಲಿದೆ. ಇಂತಹ ಕಾರ್ಯಕ್ರಮಗಳು ಜಿಲ್ಲೆಯ ಅಭಿವೃದ್ದಿಗೂ ಕಾರಣವಾಗಲಿದೆ. ಜಿಲ್ಲೆಯಲ್ಲಿ ಉದ್ದಿಮೆಗಳು, ಕೈಗಾರಿಕೆಗಳು, ಬರಲು ಸಾಧ್ಯವಾಗಲಿದೆ’ ಎಂದು ಅಶ್ವತ್ಥ್‌ ನಾರಾಯಣ ಅವರು ಆಶಿಸಿದರು.

ವರ್ಚ್ಯುವಲ್ ವೇದಿಕೆಯ ಮೂಲಕ ಮಾತನಾಡಿದ ಕೌಶಲಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿದ ಡಾ.ಎಸ್.ಸೆಲ್ವಕುಮಾರ್ ಅವರು, ‘ನೂತನ ತರಬೇತಿ ಕಟ್ಟಡ ಕೇಂದ್ರದಿಂದ ಅಲ್ಪಾವಧಿ ಹಾಗೂ ಧೀರ್ಘಾವಧಿ ಕೋರ್ಸುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಲು ಅವಕಾಶ ಲಭಿಸಲಿದೆ. ಹೆಚ್ಚು ವಿದ್ಯಾರ್ಥಿಗಳು ಕೋರ್ಸುಗಳ ಅಧ್ಯಯನ ಮಾಡಿ ಉದ್ಯೋಗ ಪಡೆದುಕೊಳ್ಳಲು ಅವಕಾಶ ಮಾಡಿಕೊಡಬೇಕು’ ಎಂದರು.

ಗುಂಡ್ಲುಪೇಟೆಯ ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ, ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಗಣಪತಿ ಎಸ್. ಮೇತ್ರಿ, ಭೋದಕ ವೃಂದದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.