ADVERTISEMENT

ಮಹದೇಶ್ವರಬೆಟ್ಟ: ಗಡಿಯಲ್ಲಿ ‘ಗೋವು ಹಬ್ಬ’ದ ಸಂಭ್ರಮ

ಜಿ.ಪ್ರದೀಪ್ ಕುಮಾರ್
Published 13 ಜನವರಿ 2026, 6:49 IST
Last Updated 13 ಜನವರಿ 2026, 6:49 IST
ಮಹದೇಶ್ವರನ ಬೆಟ್ಟದ ಸುತ್ತಮುತ್ತಲೂ ಸಂಕ್ರಾಂತಿ ಹಬ್ಬಕ್ಕೂ ಮುಂಚಿತವಾಗಿ ಗೋವು ಹಬ್ಬದ ಅಂಗವಾಗಿ ರಾಗಿ ರಾಶಿ ಮಾಡುವ ರೈತರು
ಮಹದೇಶ್ವರನ ಬೆಟ್ಟದ ಸುತ್ತಮುತ್ತಲೂ ಸಂಕ್ರಾಂತಿ ಹಬ್ಬಕ್ಕೂ ಮುಂಚಿತವಾಗಿ ಗೋವು ಹಬ್ಬದ ಅಂಗವಾಗಿ ರಾಗಿ ರಾಶಿ ಮಾಡುವ ರೈತರು   

ಮಹದೇಶ್ವರಬೆಟ್ಟ: ಜಿಲ್ಲೆಯ ಗಡಿ ಭಾಗದ ಗ್ರಾಮಗಳಲ್ಲಿ ಸಂಕ್ರಾಂತಿಗೂ ಮುನ್ನವೇ ಭೋಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಜಾನುವಾರು ಕೇಂದ್ರಿತವಾದ ಆಚರಣೆಯನ್ನು ಈ ಭಾಗದಲ್ಲಿ ಗೋವು ಹಬ್ಬವಾಗಿ ಆಚರಿಸುವುದು ವಿಶೇಷ.

ಈ ಭಾಗದಲ್ಲಿ ರೈತರು ಬೆಳೆಯುವ ರಾಗಿಯನ್ನು ಕಣದಲ್ಲಿ ರಾಶಿ ಹಾಕಿ ಸ್ವಲ್ಪ ಭಾಗವನ್ನು ಬಡವರಿಗೆ ಹಂಚುವ ಮೂಲಕ ಮಕರ ಸಂಕ್ರಾಂತಿ ಹಬ್ಬಕ್ಕೆ ಮುನ್ನುಡಿ ಬರೆಯುತ್ತಾರೆ. ಬಳಿಕ ನಾಲ್ಕು ದಿನಗಳ ಕಾಲ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.

ಮಹದೇಶ್ವರನ ಬೆಟ್ಟ, ಒಡೆಯರ ಪಾಳ್ಯ ಹಾಗೂ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಗೋವು ಹಬ್ಬ ಆಚರಿಸಲಾಗುತ್ತದೆ. ಸಂಕ್ರಾಂತಿ ಹಬ್ಬಕ್ಕೆ ಪೂರ್ವಭಾವಿಯಾಗಿ ಒಂದು ವಾರ ಮುಂಚಿತವಾಗಿ ಮನೆಯನ್ನು ಶುದ್ಧಗೊಳಿಸಿ ಸುಣ್ಣ, ಬಣ್ಣ ಬಳಿದು ಅಂದಗೊಳಿಸಲಾಗಿತ್ತದೆ.

ADVERTISEMENT

ನಾಲ್ಕು ದಿನಗಳ ಹಬ್ಬದ ಮೊದಲ ದಿನ ಕಾಪು ಕಟ್ಟಲಾಗುತ್ತದೆ. ಅಂದರೆ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿ ಐದು ರೀತಿಯ ಸೊಪ್ಪುಗಳ (ಅಣ್ಣೆ ಸೊಪ್ಪು, ಉತ್ತರಾಣಿ ಸೊಪ್ಪು, ಆವರಿಕೆ ಸೊಪ್ಪು, ತುಂಬೆ ಹೂ, ಬಿಳಿಹುಂಡಿ ಹೂ) ಕಟ್ಟುಗಳನ್ನು ಕಟ್ಟಲಾಗುತ್ತದೆ. ರಾಗಿ ಹುಲ್ಲಿನ ಮೆದೆ ಹಾಗೂ ದನದ ಕೊಟ್ಟಿಗೆ ಸಹಿತ ಹಲವು ಕಡೆಗಳಲ್ಲಿ ಕಾಪು ಕಟ್ಟಲಾಗುತ್ತದೆ. ರಾಗಿ ಮೆದೆಗೆ ಪೂಜೆ ಸಲ್ಲಿಸಿ ಮನೆ ಮಂದಿ ಹಾಗೂ ನೆರೆಯ ಹೊರೆಯವರಿಗೆ ಎಳ್ಳು, ಬೆಲ್ಲ ಹಂಚಿ ಸಂಭ್ರಮಿಸಲಾಗುತ್ತದೆ.

ಎರಡನೇ ದಿನ ತುಂಬಿದ ಹಬ್ಬವಾಗಿ ಆಚರಿಸಲಾಗುತ್ತದೆ. ಅಂದು ಬೆಳಗಿನಿಂದಲೇ ಉಪವಾಸವಿದ್ದು, ಮನೆಯಲ್ಲಿ ಪೂಜೆ ನೆರವೇರಿಸಿ ಬಗೆಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿ ಪೂರ್ವಜರಿಗೆ ಎಡೆ ಇಟ್ಟು, ಹೊಸ ಬಟ್ಟೆಗಳನ್ನು ಸಮರ್ಪಿಸಿ ನಂತರ ಮನೆಯವರು ಒಟ್ಟಾಗಿ ಆಹಾರ ಸೇವಿಸುತ್ತಾರೆ.

ಮೂರನೇ ದಿನ ಗೋವುಗಳಿಗೆ ಮೀಸಲು. ‌ಗೋವುಗಳನ್ನು ಸಾಕಿರುವವರು ಬೆಳಿಗ್ಗೆ ಅವುಗಳ ಮೈ ತೊಳೆದು ಶೃಂಗಾರ ಮಾಡಿ ವಿಶೇಷ ಪೂಜೆ ಮಾಡುತ್ತಾರೆ. ಹಬ್ಬದ ಅಡುಗೆ ಸಿದ್ಧಪಡಿಸಿ ಮೊದಲು ಹಸುವಿಗೆ ನೀಡಿ, ಕೊಟ್ಟಿಗೆಯಿಂದ ಹೊರ ಹೋಗುವ ದಾರಿಯಲ್ಲಿ ಒನಕೆ ಇಟ್ಟು ಗೋವುಗಳನ್ನು ದಾಟಿಸಿ ಮೇಯಲು ಬಿಡುತ್ತಾರೆ. ನಂತರ ಸಂಜೆಯವರೆಗೆ ಗೋವುಗಳನ್ನು ಮೇಯಿಸಿ ಹಾದಿ ಮಧ್ಯೆ ಬೆಂಕಿ ಹಾಕಿ ಕಿಚ್ಚು ಹಾಯಿಸಿ ಗೋವುಗಳನ್ನು ಕೊಟ್ಟಿಗೆಯೊಳಗೆ ಬರಮಾಡಿಕೊಳ್ಳುತ್ತಾರೆ.

ನಾಲ್ಕನೇ ದಿನ ‘ಮನುಷ್ಯರ ಹಬ್ಬ’ ಎಂದು ಆಚರಿಸಲಾಗುತ್ತದೆ. ಈ ದಿನ ಮನೆ ಮಂದಿ ಎಲ್ಲರೂ ಇಷ್ಟವಾದ ಆಹಾರ ಸೇವನೆ ಮಾಡಲಾಗುತ್ತದೆ. ಮಾಂಸಾಹಾರಿಗಳೂ ಮಾಂಸಾಹಾರ ಹಾಗೂ ಸಸ್ಯಾಹಾರಿಗಳು ಸಸ್ಯಾಹಾರ ಸೇವಿಸಿ ಹಬ್ಬಕ್ಕೆ ಮಂಗಳ ಹಾಡುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.