ADVERTISEMENT

ಚಾಮರಾಜನಗರ: ‘ಬೈರಾಗಿ’ಗೆ ಅದ್ದೂರಿ ಸ್ವಾಗತ, ಶಿವಣ್ಣನ ಕಂಡು ಹುಚ್ಚೆದ್ದು ಕುಣಿದ ಜನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 16:09 IST
Last Updated 25 ಜೂನ್ 2022, 16:09 IST
ಚಾಮರಾಜನಗರ: 'ಬೈರಾಗಿ'ಗೆ ಅದ್ದೂರಿ ಸ್ವಾಗತ
ಚಾಮರಾಜನಗರ: 'ಬೈರಾಗಿ'ಗೆ ಅದ್ದೂರಿ ಸ್ವಾಗತ   

ಚಾಮರಾಜನಗರ: ಜುಲೈ 1ರಂದು ಬಿಡುಗಡೆಯಾಗಲಿರುವ ‘ಬೈರಾಗಿ’ ಚಲನಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಲು ಶನಿವಾರ ಚಾಮರಾಜನಗರಕ್ಕೆ ಭೇಟಿ ನೀಡಿದ ನಟ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರನ್ನು ನಗರದ ಸಂತೇಮರಹಳ್ಳಿ ವೃತ್ತದಲ್ಲಿ ಅಭಿಮಾನಿಗಳು, ಚಿತ್ರ ರಸಿಕರು ಅದ್ದೂರಿಯಾಗಿ ಸ್ವಾಗತಿಸಿದರು.

ಶಿವರಾಜ್‌ಕುಮಾರ್‌ ಜೊತೆಗೆ ಸಹನಟರಾದ ಡಾಲಿ ಧನಂಜಯ್‌, ಪೃಥ್ವಿ ಅಂಬರ್‌ ಅವರೂ ಇದ್ದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಚಿತ್ರ ರಸಿಕರು ನೆಚ್ಚಿನ ನಟರನ್ನು ಕಂಡು ಹುಚ್ಚೆದ್ದು ಕುಣಿದರು. ಪೊಲೀಸರ ಲಾಠಿ ಏಟನ್ನೂ ಲೆಕ್ಕಿಸದೆ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಡಾಲಿ ಧನಂಜಯ್‌ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ಸೇಬಿನ ಬೃಹತ್‌ ಹಾರ:ಮೈಸೂರಿನಿಂದ ನಂಜನಗೂಡು ಮೂಲಕ ನಗರಕ್ಕೆ ಬರಲಿದ್ದ ಶಿವರಾಜ್‌ಕುಮಾರ್‌ ಹಾಗೂ ಚಿತ್ರ ತಂಡವನ್ನು ಸಂತೇಮರಹಳ್ಳಿ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದರು.

ADVERTISEMENT

200 ಕೆ.ಜಿ ತೂಕದ ಬೃಹತ್‌ ಸೇಬಿನ ಹಾರವನ್ನು ಕ್ರೇನ್‌ನಲ್ಲಿ ಕಟ್ಟಿ, ಎರಡು ಜೆಸಿಬಿಗಳಲ್ಲಿ ಹೂವು ಹಿಡಿದುಕೊಂಡು ಕಾದಿದ್ದರು. ಮಧ್ಯಾಹ್ನ 12.35ರ ಸುಮಾರಿಗೆ ಶಿವರಾಜ್‌ಕುಮಾರ್‌ ಅವರು ನಗರ ಪ್ರವೇಶಿಸಿದರು. ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ಬಂದಿದ್ದರು.

ಅವರ ಹಿಂದಿನಿಂದ ಡಾಲಿ ಧನಂಜಯ್‌ ಸೇರಿದಂತೆ ಇತರರು ಬಂದರು. ಸಂತೇಮರಹಳ್ಳಿ ವೃತ್ತದಲ್ಲಿ ಸೇರಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ, ಚಪ್ಪಾಳೆ, ಶಿಳ್ಳೆ ಹೊಡೆದು ಸ್ವಾಗತಿಸಿದರು.

ಬಳಿಕ ಸಿನಿಮಾದ ಪ್ರಚಾರ ವಾಹನದ ಟಾಪ್‌ ಮೇಲೆ ನಿಂತ ಶಿವರಾಜ್‌ಕುಮಾರ್‌, ಡಾಲಿ ಧನಂಜಯ್‌ ಅವರಿಗೆ ಕ್ರೇನ್‌ ಮೂಲಕ ಮೂಲಕ ಬೃಹತ್‌ ಸೇಬಿನ ಹಾರವನ್ನು ಹಾಕಲಾಯಿತು. ಅಭಿಮಾನಿಗಳು ಪುಷ್ಪವೃಷ್ಟಿಯನ್ನೇ ಮಾಡಿದರು.

‘ಚಾಮರಾಜನಗರ ನಂದು’ ಎಂದು ಮಾತು ಆರಂಭಿಸಿದ ಶಿವರಾಜ್‌ಕುಮಾರ್‌, ‘ಇಲ್ಲಿ ನಾಯಿ ಪ್ರವೇಶಿಸುವುದಕ್ಕೂ ನನ್ನ ಅನುಮತಿ ಪಡೆಯಬೇಕು’ ಎಂಬ ಜೋಗಿ ಸಿನಿಮಾದ ಸಂಭಾಷಣೆ ಹೇಳಿದರು.

ಎಲ್ಲರಿಗೂ ಧನ್ಯವಾದ ಅರ್ಪಿಸಿದ ಶಿವಣ್ಣ, ‘ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭೇಟಿಯಾಗೋಣ’ ಎಂದರು. ಅಭಿಮಾನಿಗಳ ಕೋರಿಕೆ ಮೇರೆಗೆ ಬೈರಾಗಿ ಚಿತ್ರದ ಸಂಭಾಷಣೆ ಹೇಳಿ, ವಾಹನದ ಟಾಪ್‌ನಲ್ಲೇ ನೃತ್ಯ ಮಾಡಿದಾಗ ಅಭಿಮಾನಿಗಳ ಶಿಳ್ಳೆ ಚಪ್ಪಾಳೆ, ಅರಚಾಟ ಮೇರೆ ಮೀರಿತ್ತು.

ಲಾಠಿ ಬೀಸಿದ ಪೊಲೀಸರು: ಮೆಚ್ಚಿನ ನಟನನ್ನು ನೋಡುವುದಕ್ಕಾಗಿ ಬೆಳಿಗ್ಗೆ 10.30 ಗಂಟೆಯಿಂದಲೇ ಅಭಿಮಾನಿಗಳು, ಚಿತ್ರ ರಸಿಕರು, ವಿದ್ಯಾರ್ಥಿಗಳು ಸಂತೇಮರಹಳ್ಳಿ ವೃತ್ತದಲ್ಲಿ ಜಮಾವಣೆಗೊಳ್ಳಲು ಆರಂಭಿಸಿದರು. 12 ಗಂಟೆಯ ಹೊತ್ತಿಗೆ ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಸುತ್ತಮುತ್ತಲಿನ ಕಟ್ಟಡಗಳು, ಮನೆಗಳ ಮಹಡಿಗಳಲ್ಲೂ ಜನರಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಲಾಠಿಯನ್ನೂ ಬೀಸಬೇಕಾಯಿತು.

ದೊಡ್ಡ ಗಾಜನೂರಿಗೆ ಭೇಟಿ
ನಂತರ ಶಿವರಾಜ್‌ಕುಮಾರ್‌ ಅವರು, ಡಾ.ರಾಜ್‌ಕುಮಾರ್‌ ಅವರ ಹುಟ್ಟೂರು ತಾಳವಾಡಿಯಲ್ಲಿರುವ ದೊಡ್ಡಗಾಜನೂರಿಗೆ ತೆರಳಿ, ಸೋದರತ್ತೆ ನಾಗಮ್ಮ ಅವರ ಆರೋಗ್ಯ ವಿಚಾರಿಸಿದರು. ಅವರೊಂದಿಗೆ ಚಿತ್ರ ತಂಡವೂ ಜೊತೆಗಿತ್ತು. ಪುನೀತ್‌ ರಾಜ್‌ಕುಮಾರ್‌ ಅವರು ನಿಧನರಾದ ನಂತರ ಗಾಜನೂರಿಗೆ ನೀಡುತ್ತಿರುವ ಮೊದಲ ಭೇಟಿ ಇದು.

ಸಂಜೆ ಅಲ್ಲಿಂದ ಹೊರಟುರಾತ್ರಿ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಬೈರಾಗಿ ಚಿತ್ರ ಬಿಡುಗಡೆ ಪೂರ್ವ ಸಮಾರಂಭದಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.