ಗುಂಡ್ಲುಪೇಟೆ: ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು, ದಕ್ಷಿಣ ಭಾಗದ ಚಾಮರಾಜನಗರ ಜಿಲ್ಲೆಯಿಂದ ಉತ್ತರ ಭಾಗದ ಬೀದರ್‌ವರೆಗೆ ನಡೆಯಲಿರುವ ಬೈಕ್ ಜಾಥಾಗೆ ಶುಕ್ರವಾರ ಇಲ್ಲಿ ಚಾಲನೆ ದೊರೆಯಿತು.
ಕೇಂದ್ರ ಸರ್ಕಾರದ ‘ನಶಾ ಮುಕ್ತ ಭಾರತ ಅಭಿಯಾನ’ದ ಅಂಗವಾಗಿ ಆ.31ರವರೆಗೆ ನಡೆಯುವ ಜಾಥಾದಲ್ಲಿ ವಿವಿಧ ಜಿಲ್ಲೆಗಳ 20 ಬೈಕ್ ಸವಾರರು ಭಾಗವಹಿಸಿದ್ದಾರೆ.
ಜಾಥಾ ಸಾಗುವ ಮಾರ್ಗ ಮಧ್ಯೆ ಶಾಲಾ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಜ್ಞಾವಿಧಿ ಸ್ವೀಕರಿಸಲಿರುವುದು ವಿಶೇಷ.
ದೇಶದಾದ್ಯಂತ 1 ಲಕ್ಷ ಕಿ.ಮೀ ಸೈಕ್ಲಿಂಗ್ ಮಾಡಿರುವ ರೈಡರ್ ನಂದಿನಿ ಮಿಥುನ್ ಜಾಥಾದಲ್ಲಿ ಭಾಗವಹಿಸಿ ಅನುಭವ ಹಂಚಿಕೊಳ್ಳಲಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅರಣ್ಯ, ಗೃಹ, ಪ್ರವಾಸೋದ್ಯಮ ಇಲಾಖೆ, ಎನ್.ಎಸ್.ಎಸ್, ಎನ್.ಸಿ.ಸಿ ಸೇರಿ 15 ಅಧಿಕಾರಿಗಳ ತಂಡವೂ ಭಾಗವಹಿಸಿದೆ.
960 ಕಿ.ಮೀ ದೂರದ ಜಾಥಾ ಮೊದಲ ದಿನ ಬೆಂಗಳೂರಿನಲ್ಲಿ, ಎಡರನೇ ದಿನ ವಿಜಯನಗರದ ಹಂಪಿಯಲ್ಲಿ ತಂಗಲಿದ್ದು, ಮೂರನೇ ದಿನವಾದ 31ರಂದು ಬೀದರ್ ತಲುಪಲಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಕೇಂದ್ರದ ಬಳಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಹಸಿರು ನಿಶಾನೆ ತೋರಿಸಿದರು. ಎನ್.ಎಸ್.ಎಸ್ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.