
ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಹುಲಿ ಸೆರೆ ಕಾರ್ಯಾಚರಣೆಗೆ ಕರೆತರಲಾಗಿದ್ದ ಸಾಕಾನೆ ‘ಪಾರ್ಥಸಾರಥಿ’ ಶುಕ್ರವಾರ ಸಂಜೆ ದಿಕ್ಕಾಪಾಲಾಗಿ ಪಟ್ಟಣದೊಳಗೆ ಓಡಾಡಿದ ಪರಿಣಾಮ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.
ಪಟ್ಟಣದೊಳಗೆ ಹಾದುಹೋಗಿರುವ ಹೆದ್ದಾರಿಯ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದೊಳಗೆ ನುಗ್ಗಿದ ಆನೆ ರಂಪಾಟ ನಡೆಸಿತು. ಆನೆಯನ್ನು ಕಂಡ ಪ್ರಯಾಣಿಕರು ಭೀತಿಯಿಂದ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಿಹೋದರು. ಸವಾರರು ರಸ್ತೆಯ ಮಧ್ಯೆಯೇ ವಾಹನಗಳನ್ನು ಬಿಟ್ಟು ಓಡಿದರು. ಅದೃಷ್ಟವಶಾತ್ ಸಾರ್ವಜನಿಕರು ಎದುರಿಗೆ ಬಂದರೂ ಆನೆ ದಾಳಿ ಮಾಡಿಲ್ಲ.
ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಬಳಿ ಹುಲಿ ಸೆರೆ ಹಿಡಿಯಲು ಸಾಕಾನೆ ‘ಪಾರ್ಥಸಾರಥಿ’ಯನ್ನು ಕರೆತರಲಾಗಿತ್ತು. ನೀರು ಕುಡಿಯಲು ಕರೆದೊಯ್ದಿದ್ದಾಗ ಆನೆಗೆ ಹೆಜ್ಜೆನು ಕಡಿದಿದ್ದು ನೋವು ತಾಳಲಾರದೆ ಮಾವುತನ ಮಾತು ಕೇಳದೆ ಪಟ್ಟಣದೊಳಗೆ ನುಗ್ಗಿದೆ. ಸಾರಿಗೆ ಬಸ್ ನಿಲ್ದಾಣದೊಳಗೆ ನುಗ್ಗಿದ ಆನೆ ನಂತರ ಅಶ್ವಿನಿ ಬಡಾವಣೆ, ಜೆಎಸ್‍ಎಸ್ ನಗರದ ಕಡೆಗೂ ಹೋಗಿ ಭೀತಿ ಹುಟ್ಟಿಸಿದೆ.
ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರ ಸಹಕಾರ ಪಡೆದು ಮಡಹಳ್ಳಿ ರಸ್ತೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹಾಕಿ ಆನೆಯನ್ನು ಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಗುಂಡ್ಲುಪೇಟೆ ಉಪ ವಿಭಾಗದ ಎಸಿಎಫ್ ಸುರೇಶ್, ಆರ್‌ಎಫ್‍ಒ ಶಿವಕುಮಾರ್ ಕಾರ್ಯಾಚರಣೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.