ಗುಂಡ್ಲುಪೇಟೆ: ‘ರಾಜ್ಯದಲ್ಲಿ ಲಕ್ಷಾಂತರ ಬಗರ್ ಹುಕುಂ ಫಲಾನುಭವಿಗಳು ಅರ್ಜಿ ಹಾಕಿದ್ದಾರೆ. ಎಲ್ಲರಿಗೂ ಕೊಡಲು ಆಗುವುದಿಲ್ಲ. 1.58 ಲಕ್ಷ ಅರ್ಜಿಗಳು ಅರಣ್ಯ ವ್ಯಾಪ್ತಿಯಲ್ಲಿ ಅರ್ಜಿ ಹಾಕಿದ್ದಾರೆ. ಜಿಲ್ಲೆಯಲ್ಲಿ 30 ವರ್ಷದ ಹಿಂದೆ ಕೊಟ್ಟಿರುವ ಸಾಗುವಳಿಯನ್ನೇ ಅರಣ್ಯ ಇಲಾಖೆ ಒಪ್ಪುತ್ತಿಲ್ಲ. ಇಂಥ ಜಮೀನು ಕೊಡಲು ಬರುವುದಿಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಬಗರ್ ಹುಕುಂ ಸಾಗುವಳಿ ಚೀಟಿ ವಿತರಣೆ, ಪಹಣಿ ಪತ್ರಿಕೆ, ಪೋಡಿ ದಾಖಲೆ ಮತ್ತು ಕಂದಾಯ ಗ್ರಾಮಗಳ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಂದಾಯ ಇಲಾಖೆ, ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿತ್ತು. ‘ರೈತರು ಭೂಮಿಯನ್ನು ಮಾರಾಟ ಮಾಡದೆ, ಕೃಷಿ ಚಟುವಟಿಕೆಯಲ್ಲಿ ತೊಡಗಿ ಅಭಿವೃದ್ಧಿ ಹೊಂದಬೇಕು’ ಎಂದು ತಿಳಿಸಿದರು.
‘ಬಗರ್‌ಹುಕುಂ ಸಾಗುವಳಿಗಾಗಿ 57ರಡಿ ಅರ್ಜಿ ಹಾಕಿರುವ ರೈತರಿಗೆ ಜಮೀನು ಮಂಜೂರು ಮಾಡುವ ಪ್ರಕ್ರಿಯೆಗೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಚಾಲನೆ ಕೊಡಲಾಗಿದ್ದು, ಕನಿಷ್ಢ 4 ಮಂದಿ ರೈತರಿಗೆ ಸಾಗುವಳಿ ಚೀಟಿ ನೀಡಬೇಕು ಎಂಬುದು ನಮ್ಮ ಉದ್ದೇಶ’ ಎಂದರು.
‘30-40 ವರ್ಷದ ಹಿಂದೆ ರೈತರಿಗೆ ಬಗರ್ ಹುಕುಂ, ಉಳುವವನೇ ಭೂಮಿಯ ಒಡೆಯ ಸೇರಿದಂತೆ ನಾನಾ ಯೋಜನೆಗಳಲ್ಲಿ ಜಮೀನು ಮಂಜೂರಾಗಿದ್ದರೂ ಇಂದಿಗೂ ದುರಸ್ತು(ಪೋಡಿ) ಆಗಿಲ್ಲ. ಇದರಿಂದ ರೈತರು ಬ್ಯಾಂಕ್ ಸಾಲ ಪಡೆಯಲು, ಮಾರಾಟ ಮಾಡಲು, ಸವಲತ್ತು ಪಡೆಯಲು ಕಷ್ಟವಾಗಿದೆ. ಜಮೀನಿನ ಪಹಣಿಯಲ್ಲಿ ಹೆಸರಿದ್ದು, ಕೇವಲ ಉಳುಮೆ ಮಾಡಬಹುದು ಎಂಬಂತಾಗಿದೆ. 60ರ ದಶಕದಲ್ಲಿ ಮಂಜೂರಾಗಿದ್ದರೂ ಸರ್ಕಾರ ಕೆಲಸ ಪೂರೈಸಿಲ್ಲ. ರೈತರು ತ್ರಿಶಂಕು ಪರಿಸ್ಥಿತಿಯಲ್ಲಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ಜಿಲ್ಲೆಯಲ್ಲಿ ಇಂತಹ 68 ವಸತಿ ಪ್ರದೇಶವಿದೆ. ಅದರಡಿ 50 ಗ್ರಾಮಗಳ ಹಕ್ಕು ಪತ್ರ ತಯಾರು ಮಾಡಲಾಗಿದೆ. ಇವರಿಗೆ ಮನೆಗೆ ಬೇಕಾದ ಎಲ್ಲಾ ದಾಖಲೆಗಳನ್ನು ನೀಡಲು ಕ್ರಮ ವಹಿಸಲಾಗಿದೆ’ ಎಂದು ಹೇಳಿದರು.
ಗುಂಡ್ಲುಪೇಟೆ ತಹಶೀಲ್ದಾರ್-ಶಾಸಕರಿಗೆ ಮೆಚ್ಚುಗೆ: ಬಗರ್ ಹುಕುಂ ಅಡಿಯಲ್ಲಿ ರೈತರಿಗೆ ಸಾಗುವಳಿ ನೀಡಲು ಗುಂಡ್ಲುಪೇಟೆ ತಹಶೀಲ್ದಾರ್ ಟಿ.ರಮೇಶ್ ಬಾಬು ಹಾಗೂ ಶಾಸಕ ಗಣೇಶಪ್ರಸಾದ್ ಶ್ರಮವಹಿಸಿ, ಸಭೆ ನಡೆಸಿ, ಸಾಗುವಳಿ ದಾಖಲೆ ವಿತರಣೆಗೆ ಕ್ರಮ ವಹಿಸಿದ್ದಾರೆ. ಗುಂಡ್ಲುಪೇಟೆಯಲ್ಲಿ ತಹಶೀಲ್ದಾರ್ ಇಚ್ಛಾಶಕ್ತಿಯಿಂದ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ಹೆಚ್ಚು ಮಂದಿಗೆ ಸಾಗುವಳಿ ನೀಡಬೇಕು ಎಂಬ ಉದ್ದೇಶದಿಂದ ಹಲವು ಬಾರಿ ಸಭೆ ನಡೆಸಿ, ಮಂಜೂರಾತಿ ಪತ್ರ ವಿತರಿಸಲಾಗುತ್ತಿದೆ. ಗೋಮಾಳ, ಅರಣ್ಯ ಭೂಮಿಯಲ್ಲಿ ಸಾಗುವಳಿ ಮಂಜೂರು ಕೊಡಬೇಕು ಎಂಬಹಲವು ಅರ್ಜಿಗೆ, ಕಾನೂನಿನಲ್ಲಿ ಅವಕಾಶವಿಲ್ಲ. ಅವಕಾಶ ಇರುವ ಕಡೆ ಪ್ರಯತ್ನ ಮಾಡಲಾಗುವುದು ಎಂದು ಅಭಯ ನೀಡಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು. ಜಿಲ್ಲೆಯ ಹಲವು ಮಂದಿ ರೈತರಿಗೆ ಬಗರ್‌ಹುಕುಂ ಸಾಗುವಳಿ ಚೀಟಿ ವಿತರಣೆ, ಪಹಣಿ ಪತ್ರಿಕೆ,ಪೋ ದಾಖಲೆ ಮತ್ತು ಕಂದಾಯ ಗ್ರಾಮಗಳ ಹಕ್ಕು ಪತ್ರ ವಿತರಣೆ ಮಾಡಲಾಯಿತು.
ಪುರಸಭೆ ಅಧ್ಯಕ್ಷ ಜಿ.ಎಸ್.ಕಿರಣ್, ಉಪಾಧ್ಯಕ್ಷೆ ಹೀನಾ ಕೌಶರ್, ಬಗರ್ ಹುಕುಂ ಸಮಿತಿ ಸದಸ್ಯರಾದ ಮಹದೇವಪ್ಪ, ಕಲಾವತಿ, ನಾಗರಾಜು, ಪುರಸಭೆ ಸದಸ್ಯ ಶ್ರೀನಿವಾಸ್ ಕಣ್ಣಪ್ಪ, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕಬ್ಬಹಳ್ಳಿ ಮಹೇಶ್, ಜಿಪಂ ಮಾಜಿ ಸದಸ್ಯರಾದ ಬೊಮ್ಮಯ್ಯ, ಕೆರೆಗಳ್ಳಿ ನವೀನ್, ಭೂ ದಾಖಲೆಗಳ ಉಪ ನಿರ್ದೇಶಕರಾದ ಎಂ.ಬಿ.ವಿದ್ಯಾಯಿನಿ, ಕೊಳ್ಳೆಗಾಲ ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಸೀಲ್ದಾರ್ ಟಿ.ರಮೇಶ್ ಬಾಬು, ಟಿಎಚ್‍ಒ ಡಾ.ಅಲೀಂ ಪಾಷಾ, ಶಿರಸ್ತೇದಾರ್ ಮಹೇಶ್ ,ಅಧಿಕಾರಿಗಳು, ರೈತರು ಭಾಗವಹಿಸಿದ್ದರು.
‘ನಾಡ ಕಚೇರಿಗೂ 2 ಸಿಸ್ಟಂ’
ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ ‘ಗುಂಡ್ಲುಪೇಟೆ ತಾಲೂಕಿನಲ್ಲಿ ಬಗರ್‌ಹುಕುಂ ಮೂಲಕ 94 ಮಂದಿಗೆ ಸಾಗುವಳಿ ಚೀಟಿ ವಿತರಣೆ ಮಾಡಲಾಗುತ್ತಿದೆ. ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿ ಆರ್‌ಟಿಸಿ ಕೊಡಲಾಗುತ್ತಿದೆ. ಗುಂಡ್ಲುಪೇಟೆಯಲ್ಲಿ 1:5 ಅಡಿಯಲ್ಲಿ 23 ಮಂದಿಗೆ ಆರ್‌ಟಿಸಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 67 ಹೊಸ ಕಂದಾಯ ಗ್ರಾಮಗಳು ರಚನೆಯಾಗಿದ್ದು 285 ಹಕ್ಕು ಪತ್ರ ವಿತರಣೆಗೆ ಸಿದ್ಧವಾಗಿವೆ. ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ನಮೂದಿಸಲಾಗಿದೆ. ಜೊತೆಗೆ ಚಾಮರಾಜನಗರ ಇ-ಆಫೀಸ್‌ನಲ್ಲಿ ಮಂಜೂಣಿಯಲ್ಲಿದ್ದು ನಾಡಕಚೇರಿಗಳಿಗೂ ವಿಸ್ತರಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಅನುದಾನದಲ್ಲಿ ಕಂದಾಯ ಇಲಾಖೆ ವಿಎ ಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಎಲ್ಲಾ ನಾಡ ಕಚೇರಿಗಳಿಗೆ ಎರಡು ಸಿಸ್ಟಂ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.