ADVERTISEMENT

ಪ್ರವಾಸೋದ್ಯಮಕ್ಕಾಗಿ ಸಫಾರಿ ಆರಂಭ: ಶಾಸಕ ಎಚ್.ಎಂ.ಗಣೇಶಪ್ರಸಾದ್

ಗ್ರಾಮಗಳಲ್ಲಿ ಶಾಸಕ ಗಣೇಶ ಪ್ರಸಾದ್‌ ವಿವಿಧ ಕಾಮಗಾರಿಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 8:03 IST
Last Updated 26 ಫೆಬ್ರುವರಿ 2026, 8:03 IST
ಗುಂಡ್ಲುಪೇಟೆ ಬೆಟ್ಟದಮಾದಹಳ್ಳಿಯಲ್ಲಿ ಸಾಮಾನ್ಯ ವರ್ಗದ ಬೀದಿಯಲ್ಲಿ ಸಿಸಿ ರಸ್ತೆ-ಚರಂಡಿ ನಿರ್ಮಾಣಕ್ಕೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಗುದ್ದಲಿಪೂಜೆ ನೆರವೇರಿಸಿದರು.
ಗುಂಡ್ಲುಪೇಟೆ ಬೆಟ್ಟದಮಾದಹಳ್ಳಿಯಲ್ಲಿ ಸಾಮಾನ್ಯ ವರ್ಗದ ಬೀದಿಯಲ್ಲಿ ಸಿಸಿ ರಸ್ತೆ-ಚರಂಡಿ ನಿರ್ಮಾಣಕ್ಕೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಗುದ್ದಲಿಪೂಜೆ ನೆರವೇರಿಸಿದರು.   

ಗುಂಡ್ಲುಪೇಟೆ: ‘ ಆಡಳಿತ ರೈತ ವಿರೋಧಿಯಲ್ಲ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ’ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಸ್ಪಷ್ಟಪಡಿಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ  ಚಾಲನೆ ನೀಡಿ ಅವರು ಮಾತನಾಡಿದರು.  ಪ್ರವಾಸೋದ್ಯಮದ ಜೊತೆಗೆ ತಾಲ್ಲೂಕಿನ ಜನರ ಆದಾಯ ಹೆಚ್ಚಳವಾಗಲಿ ಎಂಬ ಉದ್ದೇಶದಿಂದ ಸಫಾರಿ ಆರಂಭಿಸಲಾಗಿದೆ ಎಂದು ತಿಳಿಸಿದರು.

‘ಕಾಡಿನಲ್ಲಿ ಲಾಂಟಾನ ಹೆಚ್ಚಿನ ರೀತಿಯಲ್ಲಿ ಬೆಳೆದಿರುವುದರಿಂದ ಆಹಾರ ಅರಸಿ ಪ್ರಾಣಿಗಳು ಹೊರಗೆ ಬರುತ್ತಿವೆ ಎಂದು ತಜ್ಞರು ವರದಿ ನೀಡಿದ್ದಾರೆ. ಲಾಂಟಾನ ಕಡಿಮೆ ಮಾಡಬೇಕು ಎಂದು ಸಚಿವರು ಕೂಡ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾಡು ಪ್ರಾಣಿಗಳು ನಾಡಿಗೆ ಬರದಂತೆ ಮಾಡಲು  ಶಾಶ್ವತ ಪರಿಹಾರ ನೀಡಲು ತಾಂತ್ರಿಕವಾಗಿ ಯೋಜನೆ ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಮೂರು ತಿಂಗಳು ಸಫಾರಿ ನಿಲ್ಲಿಸಿದ್ದರೂ ಕಾಡುಪ್ರಾಣಿಗಳ ಹೊರ ಬಂದ ನಿದರ್ಶನಗಳಿದೆ. ಮಾದಾಪಟ್ಟಣದಲ್ಲಿ ಇತ್ತೀಚೆಗೆ ಹುಲಿ ಹಸುವನ್ನು ಸಾಯಿಸಿದೆ. ಅನಧಿಕೃತ ಹೋಂ ಸ್ಟೇ ತೆರವಿಗೆ ಸರ್ಕಾರ ಮುಂದಾಗಿದೆ. ನಿಯಮಾನುಸಾರ ಅನುಮತಿ ನೀಡಿರುವುದಕ್ಕೆ ಯಾವುದೇ ಸಮಸ್ಯೆ ಇಲ್ಲ.  ಅನಧಿಕೃತ ಹೋಂ ಸ್ಟೇ ತೆರವಿಗೆ  ಕ್ರಮ ವಹಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

 ಕಾಮಗಾರಿಗೆ ಚಾಲನೆ: ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಚಿಕ್ಕಹುಂಡಿ ಗ್ರಾಮದ ಸಾಮಾನ್ಯ ವರ್ಗದ ಬೀದಿಯಲ್ಲಿ ₹30 ಲಕ್ಷ ವೆಚ್ಚದ ಸಿಸಿ ರಸ್ತೆ-ಚರಂಡಿ ನಿರ್ಮಾಣ, ಬೆಳಚಲವಾಡಿಯಲ್ಲಿ ಬಾಬು ಜಗಜೀವನ ರಾಂ ಭವನದ ₹20 ಲಕ್ಷದ ಕಾಮಗಾರಿ, ಬೆಟ್ಟದಮಾದಹಳ್ಳಿಯಲ್ಲಿ ಸಿಸಿ ರಸ್ತೆ-ಚರಂಡಿ ನಿರ್ಮಾಣ, ತಗ್ಗಲೂರು ಗ್ರಾಮದಲ್ಲಿ ₹30 ಲಕ್ಷ  ವೆಚ್ಚದ ಸಿಸಿ ರಸ್ತೆ-ಚರಂಡಿ, ರಾಘವಾಪುರ ಗ್ರಾಮದಲ್ಲಿ ₹40 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ-ಚರಂಡಿ, ಹಕ್ಕಲಪುರದಲ್ಲಿ ₹40 ಲಕ್ಷ ವೆಚ್ಚದ ಸಿಸಿ ರಸ್ತೆ-ಚರಂಡಿ, ನಿಟ್ರೆ ಗ್ರಾಮದಲ್ಲಿ ಬಾಬು ಜಗಜೀವನ್ ರಾಂ ಹಾಗೂ ಅಂಬೇಡ್ಕರ್ ಭವನ ನಿರ್ಮಾಣಗಳಿಗೆ ಚಾಲನೆ ನೀಡಲಾಗಿದೆ ಎಂದು ಶಸಕರು ಹೇಳಿದರು.

ಎಪಿಎಂಸಿ ಅಧ್ಯಕ್ಷ ರಂಗೂಪುರ ನಾಗರಾಜು, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಕೋಟೆಕೆರೆ ಫ್ಯಾಕ್ಸ್ ಅಧ್ಯಕ್ಷ ಮಹದೇವಸ್ವಾಮಿ, ರಾಜು, ಕಾಂಗ್ರೆಸ್  ಪ್ರಮುಖರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.