ADVERTISEMENT

ಹನೂರು: ಪಿಯು ವಿದ್ಯಾರ್ಥಿ, ಶಿಕ್ಷಕನಿಗೆ ಕೋವಿಡ್‌ ದೃಢ

ಗಡಿಜಿಲ್ಲೆಯಲ್ಲಿ ಒಂದೇ ದಿನ ಎಂಟು ಪ್ರಕರಣಗಳು, 26 ಮಂದಿ ಸೋಂಕಿತರು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 16:51 IST
Last Updated 19 ಮಾರ್ಚ್ 2021, 16:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹನೂರು (ಚಾಮರಾಜನಗರ): ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಸೇಂಟ್‌ ಮೆರೀಸ್‌ ತಮಿಳು ಮಾಧ್ಯಮ ಶಾಲೆಯ ಶಿಕ್ಷಕರೊಬ್ಬರಿಗೆ ಹಾಗೂ ಅವರ ಮಗ, ಸೇಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗೆ ಕೋವಿಡ್‌–19 ದೃಢಪಟ್ಟಿದ್ದು, ಶಾಲೆ ಹಾಗೂ ಕಾಲೇಜಿಗೆ ಎರಡು ದಿನ ರಜೆ ಘೋಷಿಸಲಾಗಿದೆ.

ಶಿಕ್ಷಕರ ತಾಯಿಗೂ ಸೋಂಕು ತಗುಲಿದ್ದು, ಮೂವರಿಗೂ ಚಾಮರಾಜನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿಕ್ಷಕರ ತಾಯಿ ಕೆಲವು ದಿನಗಳ ಹಿಂದೆ ತಮಿಳುನಾಡಿನಿಂದ ಬಂದಿದ್ದರು. ಎರಡು ದಿನಗಳ ಹಿಂದೆ, ಶಿಕ್ಷಕರಿಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಬಳಿಕ ಅವರ ಗಂಟಲು ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಬಳಿಕ ಅವರ ಮಗ ಹಾಗೂ ತಾಯಿ ಇಬ್ಬರನ್ನೂ ಪರೀಕ್ಷೆಗೊಳ‍ಪಡಿಸಿದಾಗ, ಸೋಂಕು ಇರುವುದು ದೃಢಪಟ್ಟಿದೆ. ಕಾಲೇಜು ಹಾಗೂ ಶಾಲೆಗಳು ಒಂದೇ ಆವರಣದಲ್ಲಿವೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಎಸ್‌.ಕೃಷ್ಣಮೂರ್ತಿ, ‘ಪ್ರಕರಣ ದೃಢಪಡುತ್ತಲೇ ಕಾಲೇಜಿಗೆ ಎರಡು ದಿನಗಳ ರಜೆ ಘೋಷಿಸಲು ಸೂಚಿಸಲಾಗಿದೆ. ಇಡೀ ಕಾಲೇಜು ಆವರಣವನ್ನು ಸ್ಯಾನಿಟೈಸ್‌ ಮಾಡಲು ಸೂಚಿಸಿದ್ದೇವೆ. ಸೋಂಕಿತರ ಸಂಪರ್ಕಕ್ಕೆ ಬಂದವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದರು.

ಎಂಟು ಪ್ರಕರಣ: ಈ ಮಧ್ಯೆ, ಹನೂರು ತಾಲ್ಲೂಕಿನಲ್ಲಿ ನಾಲ್ಕು ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ಎಂಟು ಮಂದಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 26ಕ್ಕೆ ಏರಿದೆ.

ಜಿಲ್ಲೆಯಲ್ಲಿ ಈವರೆಗೆ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 7000 ದಾಟಿದೆ. 7007 ಮಂದಿಗೆ ಸೋಂಕು ತಗುಲಿದೆ.

ಶುಕ್ರವಾರ ಒಬ್ಬರು ಗುಣಮುಖರಾಗಿದ್ದು, ಇದುವರೆಗೆ 6,849 ಮಂದಿ ಸೋಂಕು ಮುಕ್ತರಾಗಿದ್ದಾರೆ.

ಶುಕ್ರವಾರ 753 ಕೋವಿಡ್‌ ಪರೀಕ್ಷಾ ವರದಿಗಳು ಬಂದಿವೆ. ಈ ಪೈಕಿ 750 ಮಂದಿಯ ವರದಿ ನೆಗೆಟಿವ್‌ ಬಂದಿವೆ.

ಸೋಂಕಿತರ ಪೈಕಿ ನಾಲ್ವರು ಹನೂರು ತಾಲ್ಲೂಕಿನವರು. ಇಬ್ಬರು ಗುಂಡ್ಲುಪೇಟೆ ತಾಲ್ಲೂಕಿನವರು. ಇನ್ನಿಬ್ಬರ ಪೈಕಿ ಒಬ್ಬರು ಚಾಮರಾಜನಗರ ತಾಲ್ಲೂಕಿನವರಾಗಿದ್ದರೆ, ಇನ್ನೊಬ್ಬರು ಹೊರ ಜಿಲ್ಲೆಯವರು.

‘ನಿಯಮ ಪಾಲನೆ ಕಡ್ಡಾಯ’
ಶಾಲೆಗಳಲ್ಲಿ ಕೋವಿಡ್‌ ಮುಂಜಾಗ್ರತಾ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಈಗಾಗಲೇ ಎಲ್ಲ ಶಾಲೆಗಳಿಗೂ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಮಾಸ್ಕ್‌ ಧರಿಸುವುದು ಕಡ್ಡಾಯ. ವೈಯಕ್ತಿಕ ಅಂತರವನ್ನು ಕಾಪಾಡಿಕೊಂಡೇ ಶಾಲೆಗಳಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಮಕ್ಕಳು ಪಾಠ ಕೇಳಬೇಕು. ಸ್ಯಾನಿಟೈಸರ್‌ ಬಳಕೆಯನ್ನೂ ಕಡ್ಡಾಯಗೊಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅನಾರೋಗ್ಯ ಇದ್ದರೆ ಬರಬೇಡಿ: ‘ಪದವಿ ಪೂರ್ವ ಕಾಲೇಜುಗಳಲ್ಲಿ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳು ಅಥವಾ ಬೋಧಕರು ಕೆಮ್ಮು ನೆಗಡಿ, ಶೀತ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಕಾಲೇಜಿಗೆ ಬರಬಾರದು ಎಂದು ಈಗಾಗಲೇ ಸೂಚನೆ ನೀಡಲಾಗಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಎಸ್‌.ಕೃಷ್ಣಮೂರ್ತಿ ತಿಳಿಸಿದರು.

5 ದಿನಗಳಿಗೊಮ್ಮೆ ಪರೀಕ್ಷೆ ಮಾಡಿಸಲು ಸಲಹೆ
ಮಾರ್ಟಳ್ಳಿಯ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು 15 ದಿನಗಳಿಗೊಮ್ಮೆ ಪರೀಕ್ಷೆ ಮಾಡಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಅದರಂತೆ ಎಲ್ಲರೂ ಆಗಾಗ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಕೋವಿಡ್‌ ತಡೆ ನಿಯಮಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಶಾಲಾ ಕಾಲೇಜುಗಳಲ್ಲಿ ಮುಂಜಾಗ್ರತೆ ವಹಿಸುವುದು ಅವಶ್ಯಕ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.