ADVERTISEMENT

ಚಾಮರಾಜನಗರ | ಮುಳುಗಿದ ಯಳಂದೂರು ಪಟ್ಟಣ: ಗ್ರಾಮ ಜನಜೀವನ ತಲ್ಲಣ

ಅಗರ- ಮಾಂಬಳ್ಳಿ ಗ್ರಾಮ ಜಲಾವೃತ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 4:15 IST
Last Updated 30 ಆಗಸ್ಟ್ 2022, 4:15 IST
ಯಳಂದೂರಿನ ಪಟ್ಟಣದ ಬಳೇಪೇಟೆ ಜಲಾವೃತವಾಗಿರುವುದು
ಯಳಂದೂರಿನ ಪಟ್ಟಣದ ಬಳೇಪೇಟೆ ಜಲಾವೃತವಾಗಿರುವುದು   

ಯಳಂದೂರು (ಚಾಮರಾಜನಗರ): ತಾಲ್ಲೂಕಿನ ಎಲ್ಲ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಭರ್ಜರಿ ಮಳೆಯಾಗಿದೆ.

ಕೆರೆ ಕಟ್ಟೆಗಳಲ್ಲಿ ತುಂಬಿದ ನೀರು, ಕೃಷಿ ಜಮೀನುಗಳತ್ತ ಹರಿದು ಗ್ರಾಮಗಳನ್ನು ಪ್ರವೇಶಿಸಿದೆ.ಯಳಂದೂರು ಪಟ್ಟಣದಲ್ಲಿ ರಾತ್ರಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಶಾಲೆ ಕಾಲೇಜುಗಳು ಮುಳುಗಿದ್ದು, ಜನರು ಸಂಚರಿಸಲು ಪರಿತಪಿಸಿದರು.

ನದಿಯಲ್ಲಿ ಹೆಚ್ಚಳವಾದ ನೀರು ಹಾಗೂ ಕೆರೆ ಕಟ್ಟೆಗಳ ತೂಬನ್ನು ಒಡೆದು ನೀರು ಹೊರಬಿಟ್ಟ ಪರಿಣಾಮ ಬಹುತೇಕ ಫಸಲು ನಾಶವಾಗಿದೆ.

ADVERTISEMENT

ಮುಂಜಾನೆ ಮಾಂಬಳ್ಳಿ ಪೊಲೀಸ್ ಠಾಣೆಗೆ ನೀರು ನುಗ್ಗಿ ಸಿಬ್ಬಂದಿ ಪರದಾಡಿದರು.

ಅಗರದಲ್ಲಿ ಇನ್ನೂರಕ್ಕೂ ಹೆಚ್ಚು ಮನೆಗಳು ತಡರಾತ್ರಿ ಜಲಾವೃತವಾದವು. ಜನರನ್ನು ಗ್ರಾಮದ ಹಿರಿಯರು ಎಚ್ಚರಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದರು.

'30 ವರ್ಷಗಳ ನಂತರ ಗ್ರಾಮ ಮುಳುಗಿದೆ. ಮಣ್ಣಿನ ಮನೆಗಳು ಕುಸಿಯುವ ಅಂತ ತಲುಪುವೆ. ನಸುಕಿನ ಸಂದರ್ಭದಲ್ಲಿ ಜಾನುವಾರುಗಳನ್ನು ರಸ್ತೆ ಬದಿಗೆ ತರುವಲ್ಲಿ ಪ್ರಾಯಸ ಪಟ್ಟರು' ಎಂದು ಯಜಮಾನರಾದ ಮೂರ್ತಿ ಸಿದ್ದರಾಜ ನಾಯಕ ಹಾಗೂ ವೆಂಕಟೇಶ ನಾಯಕ ಅಲವತ್ತುಕೊಂಡರು.

ಮದ್ದೂರು ಕೆರೆ ನೀರು ನುಗ್ಗಿ ಫಸಲು ನಾಶ:ಮಳೆ ಬರುತ್ತಿರುವುದರಿಂದ ಮದ್ದೂರು ಕೆರೆಯ ತೂಬನ್ನು ತೆರೆದು ಹೆಚ್ಚುವರಿ ನೀರನ್ನು ಹೊರಗಡೆ ಬಿಡಲಾಗಿದೆ. ಇದರಿಂದ ಮಲ್ಲಿಗೆಹಳ್ಳಿ ಅಗರ ಮಾಂಬಳ್ಳಿ ಗ್ರಾಮಗಳ ಸುತ್ತಮುತ್ತ ನೀರು ಆವರಿಸಿದೆ. ಟೊಮೆಟೊ ಕಬ್ಬು ಬೆಳೆಗಳು ಜಲಾವೃತವಾಗಿದ್ದು ಕೊಳೆಯುವ ಆತಂಕ ಸೃಷ್ಟಿಸಿದೆ.

'ಕೆರೆ ಕಾಲುವೆಗಳ ಸುತ್ತಮುತ್ತ ಹೂಳು ತೆಗೆಯದ ಕಾರಣ ನೀರು ಗ್ರಾಮಗಳ ನುಗ್ಗಿ, ಅನಾಹುತ ಸೃಷ್ಟಿಸಿದೆ. ಸಂಬಂಧಪಟ್ಟ ಎಂಜಿನಿಯರ್‌ಗಳು ಕ್ರಮವಹಿಸದ ಕಾರಣ ಇಷ್ಟೆಲ್ಲ ರಾದ್ದಾಂತವಾಗಲು ಕಾರಣವಾಗಿದೆ. ಕಣ್ಣೆದುರೆ ಕೈಗೆ ಬಂದ ಫಸಲುನಾಶವಾಗಿದೆ' ಎಂದು ಮಲ್ಲಿಗೆಹಳ್ಳಿ ಗ್ರಾಮದ ಮಹದೇವ ಶೆಟ್ಟಿ ಹಾಗೂ ಮಹೇಶ್ ಕಣ್ಣೀರಾದರು.

'ಯಳಂದೂರು ಹೊರವಲಯದ ಬಳೆಪೇಟೆ, ಉಪ್ಪಿನ ಮೊಳೆ ಕೃಷ್ಣಾಪುರ ಗ್ರಾಮಗಳತ್ತಲು ಹೆಚ್ಚಿನ ಪ್ರಮಾಣದ ನೀರು ಕೃಷಿ ಭೂಮಿಯನ್ನು ಆವರಿಸಿದೆ' ಎಂದು ವೈ ಕೆ ಮೋಳೆ ಗ್ರಾಮದ ಪುಟ್ಟರಾಜು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.