ADVERTISEMENT

ಗುಂಡ್ಲುಪೇಟೆ: ನಾಡಿನತ್ತ ಪ್ರಾಣಿಗಳ ಲಗ್ಗೆ; ಜನ–ಜಾನುವಾರು ಜೀವಕ್ಕೆ ಕಂಟಕ

ತಿಂಗಳಲ್ಲಿ 20ಕ್ಕೂ ಹೆಚ್ಚು ವನ್ಯಜೀವಿ ದಾಳಿ ಪ್ರಕರಣ; ಆತಂಕದಲ್ಲಿ ಕಾಡಂಚಿನ ಗ್ರಾಮಸ್ಥರು

ಮಲ್ಲೇಶ ಎಂ.
ಎಚ್.ಬಾಲಚಂದ್ರ
Published 25 ಡಿಸೆಂಬರ್ 2025, 7:20 IST
Last Updated 25 ಡಿಸೆಂಬರ್ 2025, 7:20 IST
<div class="paragraphs"><p>ಅರಣ್ಯದೊಳಗೆ ಸಂಚರಿಸುತ್ತಿರುವ ಹುಲಿ </p></div>

ಅರಣ್ಯದೊಳಗೆ ಸಂಚರಿಸುತ್ತಿರುವ ಹುಲಿ

   

(ಸಂಗ್ರಹ ಚಿತ್ರ)

ಚಾಮರಾಜನಗರ/ಗುಂಡ್ಲುಪೇಟೆ: ಜಿಲ್ಲೆಯಲ್ಲಿ ಮಾನವ–ವನ್ಯಜೀವಿ ಸಂಘರ್ಷ ಮಿತಿಮೀರಿದ್ದು ಕಾಡುಪ್ರಾಣಿಗಳ ದಾಳಿಗೆ ಜಾನುವಾರುಗಳು ಬಲಿಯಾಗುತ್ತಿವೆ. ವನ್ಯಜೀವಿಗಳ ದಾಳಿ ಭಯದಿಂದ ಕಾಡಂಚಿನ ರೈತರು ಜಮೀನುಗಳಿಗೆ ತೆರಳಲು ಆತಂಕ ಪಡುವ ಸ್ಥಿತಿಯಲ್ಲಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ರಾಸುಗಳನ್ನು ಕಳೆದುಕೊಂಡು ಹೈನುಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಬಿಳಿಗಿರಿ ರಂಗನಾಥ ಸ್ವಾಮಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಧಾಮಗಳಿದ್ದು ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಯತ್ತಿದ್ದು 1 ತಿಂಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ದಾಳಿ ಪ್ರಕರಣಗಳು ನಡೆದಿವೆ.

ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಹನೂರು ತಾಲ್ಲೂಕುಗಳಲ್ಲಿ ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಿದ್ದು ಪ್ರಾಣಿಗಳ ದಾಳಿಗೆ ಹಸು, ಕರು, ಕುರಿ, ಮೇಕೆಗಳು ಬಲಿಯಾಗಿವೆ. ಹುಲಿ, ಚಿರತೆಗಳು ಕಾಡಂಚಿನಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದು ಗ್ರಾಮಸ್ಥರು ಭೀತಿಯಲ್ಲಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹೆಚ್ಚಿನ ಗ್ರಾಮಗಳು ಕಾಡಂಚಿನಲ್ಲಿವೆ. ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೊಳಪಡುವ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಮದ್ದೂರು, ಕುಂದುಕರೆ ಹಾಗೂ ಓಂಕಾರ ವಲಯಗಳ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಿದೆ ಎನ್ನುತ್ತಾರೆ ರೈತರು.

ಡಿಸೆಂಬರ್‌ ತಿಂಗಳಲ್ಲೇ ಗುಂಡ್ಲುಪೇಟೆ ತಾಲ್ಲೂಕಿನ ಬೆಟ್ಟದ ಮಾದಹಳ್ಳಿ, ಕಿಲಗೆರೆ, ಬೊಮ್ಮಲಾಪುರ, ದೇಪಾಪುರದಲ್ಲಿ ಹುಲಿ ದಾಳಿಗೆ 4 ಹಸುಗಳು ಸತ್ತಿವೆ. ಮುಡಗೂರಿನಲ್ಲಿ ಹುಲಿ ದಾಳಿಗೆ ಎರಡು ಹಸುಗಳು ಸಾವನ್ನಪ್ಪಿವೆ. ಭೀಮನಮಡು ಗ್ರಾಮದಲ್ಲಿ ಹುಲಿ ದಾಳಿಗೆ ಹಸುಗಳು ಗಾಯಗೊಂಡಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆಯಲ್ಲಿ ಹುಲಿ ದಾಳಿಗೆ ರೈತ ಮಲಿಯಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಕರಕಲ ಮಾದಹಳ್ಳಿಯಲ್ಲಿ ಚಿರತೆ ದಾಳಿಗೆ ಕರು ಸಾವನ್ನಪ್ಪಿದೆ.

ಹನೂರು ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಮೇಕೆ ಬಲಿಯಾಗಿದ್ದರೆ, ಕೊಪ್ಪ ಗ್ರಾಮದಲ್ಲಿ ಹಸುವಿಗೆ ಗಂಭೀರ ಗಾಯವಾಗಿದೆ. ಚಾಮರಾಜನಗರ ತಾಲ್ಲೂಕಿನ ವೆಂಕಟಯ್ಯನ ಛತ್ರ ಹೊಸೂರು ಗ್ರಾಮದಲ್ಲಿ ಚಿರತೆ ದಾಳಿಗೆ ವೃದ್ಧ ಶಿವಮಲ್ಲಪ್ಪ ಗಂಭೀರ ಗಾಯಗೊಂಡಿದ್ದಾರೆ. ಶಿವಪುರ ಕೆಕೆ ಹುಂಡಿ ಹಾಗೂ ಯಳಂದೂರು ತಾಲ್ಲೂಕಿನ ಚಾಮಲಾಪುರ ಹಾಗೂ ಗಂಗವಾಡಿ ಗ್ರಾಮಗಳಲ್ಲಿ ಚಿರತೆ ದಾಳಿಗೆ ಕರುಗಳು ಬಲಿಯಾಗಿವೆ. ಹೀಗೆ ಜಿಲ್ಲೆಯಾದ್ಯಂತ ಕಾಡುಪ್ರಾಣಿಗಳ ದಾಳಿ ಎಗ್ಗಿಲ್ಲದೆ ನಡೆಯುತ್ತಿದೆ.

ಹುಲಿ ಸೃಷ್ಟಿಸಿದ ಆತಂಕ: ಸಾಮಾನ್ಯವಾಗಿ ಕಾಡಿನಿಂದ ಹುಲಿಗಳು ನಾಡಿಗೆ ಬರುವುದು ಅಪರೂಪವಾಗಿತ್ತು. ಆದರೆ, ಈಚೆಗೆ ಹುಲಿಗಳು ನಾಡಿನತ್ತ ನುಗ್ಗಿ ದಾಳಿ ಮಾಡುತ್ತಿರುವುದು ಆತಂಕ ಸೃಷ್ಟಿಸಿದೆ. ನಿರಂತರ ದಾಳಿಯಿಂದ ಕಾಡಂಚಿನ ಗ್ರಾಮಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದ್ದು ರಾತ್ರಿಯ ಹೊತ್ತು ಮನೆಯಿಂದ ಹೊರಬರಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. 

ಹಗಲಿನ ಹೊತ್ತು ಕೂಡ ರೈತರು ಬೆಳೆಗಳಿಗೆ ನೀರು ಹಾಯಿಸಲು ಹೆದರುತ್ತಿದ್ದಾರೆ. ಬೆಳಗಿನ ಜಾವದ ಸಮಯ ತ್ರೀ ಫೇಸ್ ವಿದ್ಯುತ್ ಲಭ್ಯವಿದ್ದರೂ ಪ್ರಾಣಿಗಳ ದಾಳಿ ಭಯದಿಂದ ಗ್ರಾಮದಿಂದ ದೂರವಿರುವ ಜಮೀನುಗಳತ್ತ ಹೋಗಲು ಭಯಪಡುವಂತಾಗಿದೆ ಎನ್ನುತ್ತಾರೆ ರೈತರು.

ಬಂಡೀಪುರ ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರತಿದಿನ ಹುಲಿ–ಚಿರತೆಗಳು ಕಾಣಿಸಿಕೊಳ್ಳುತ್ತಿವ ಬಗ್ಗೆ ಕರೆಗಳು ಬರುತ್ತಿವೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದುವರೆಗೆ 21 ಹುಲಿಗಳನ್ನು ಸೆರೆ ಹಿಡಿಯಲಾಗಿದೆ. ಆದರೂ ತಾಲ್ಲೂಕಿನ ಭೀಮನಬೀಡು ಮತ್ತು ಪರಮಾಪುರ ಗ್ರಾಮದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿದ್ದು ಸೆರೆ ಕಾರ್ಯಚರಣೆ ನಡೆಯುತ್ತಿದೆ.

ನವೆಂಬರ್‌ನಿಂದ ಜನವರಿವರೆಗೆ ಹುಲಿಗಳ ಸಂತಾನೋತ್ಪತ್ತಿ ಸಮಯವಾಗಿದ್ದು ಹುಲಿಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ಬಂಡೀಪುರ ಅರಣ್ಯದ ಎಸಿಎಫ್ ನವೀನ್ ಕುಮಾರ್.

‌ಕೆಲವರು ಹುಲಿ–ಚಿರತೆ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆಯ ದಾರಿ ತಪ್ಪಿಸುತ್ತಿದ್ದಾರೆ. ಇಂತಹ ಹುಸಿ ಕರೆಗಳ ಪರಿಣಾಮ ಕಾರ್ಯಾಚರಣೆಗೆ ತೊಡಕಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಅರಣ್ಯ ಇಲಾಖೆ ಅಧಿಕಾರಿಗಳು.‌

ಗ್ರಾಮಗಳ ಸುತ್ತಮುತ್ತ ಹುಲಿ ಚಿರತೆ ಕಾಣಿಸಿಕೊಂಡ ಬಗ್ಗೆ ದೂರುಗಳು ಬಂದ ಕೂಡಲೇ ಸ್ಪಂದಿಸಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಜನ ಜಾನುವಾರುಗಳ ಜೀವ ರಕ್ಷಣೆಗೆ ಆದ್ಯತೆ ನೀಡಲಾಗಿದೆ.
ಪ್ರಭಾಕರನ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಬಫರ್ ಜೋನ್ ವಲಯದ ವ್ಯಾಪ್ತಿ ಕಡಿಮೆಯಾಗಿರುವುದರಿಂದ ಕಾಡಿನೊಳಗೆ ಬಲಹೀನ ಹುಲಿಗಳು ಜೀವ ಉಳಿಸಿಕೊಳ್ಳಲು ಕಾಡಿನಿಂದ ನಾಡಿನತ್ತ ಮುಖ ಮಾಡಿರುವುದು ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಲು ಕಾರಣ
ಆರ್.ಕೆ.ಮಧು ವನ್ಯಜೀವಿ ಛಾಯಾಗ್ರಹಕ

ತ್ಯಾಜ್ಯ ಅರಸಿ ಬರುತ್ತಿರುವ ಪ್ರಾಣಿಗಳು

ಕಾಡಂಚಿನ ಗ್ರಾಮಗಳಲ್ಲಿ ರೈತ ಜಮೀನುಗಳನ್ನು ಖರೀದಿ ಮಾಡಿರುವ ಉದ್ಯಮಿಗಳು ಹೋಂಸ್ಟೇ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದು ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ರೆಸಾರ್ಟ್‌ಗಳ ಸುತ್ತಮುತ್ತ ಜಿಂಕೆಗಳ ಸಂಚಾರ ಹೆಚ್ಚಾಗಿದೆ. ಜಿಂಕೆಗಳನ್ನು ಬೇಟೆಯಾಡಲು ಬರುತ್ತಿರುವ ಚಿರತೆ ಹುಲಿಗಳು ಗ್ರಾಮಗಳಿಗೆ ನುಗ್ಗಿ ಜಾನುವಾರುಗಳ ಬೇಟೆಯಾಡುತ್ತಿವೆ. ಕೆಲವು ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಪ್ರವಾಸಿಗರನ್ನು ಆಕರ್ಷಿಸಲು ಜಿಂಕೆಗಳನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರಾದ ರಾಬಿನ್ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.