ADVERTISEMENT

ಕೊಳ್ಳೇಗಾಲ: ಪಾಳ್ಯ ಗ್ರಾಮದ ದೊಡ್ಡೆಕೆರೆ ಏರಿ ಒಡೆದು ನೂರಾರು ಎಕರೆ ಭೂಮಿ ಜಲಾವೃತ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 12:37 IST
Last Updated 19 ಸೆಪ್ಟೆಂಬರ್ 2020, 12:37 IST
ಏರಿ ಒಡೆದು ಜಲಾವೃತ ಆಗಿರುವ ಕೃಷಿ ಜಮೀನಿನಲ್ಲಿ ಯುವಕರು ಮೀನು ಹಿಡಿದರು
ಏರಿ ಒಡೆದು ಜಲಾವೃತ ಆಗಿರುವ ಕೃಷಿ ಜಮೀನಿನಲ್ಲಿ ಯುವಕರು ಮೀನು ಹಿಡಿದರು   

ಕೊಳ್ಳೇಗಾಲ: ತಾಲ್ಲೂಕಿನ ಪಾಳ್ಯ ಗ್ರಾಮದ ದೊಡ್ಡಕೆರೆ ಏರಿಯು (ನಾಲೆ) ಶುಕ್ರವಾರ ರಾತ್ರಿ ಒಡೆದಿದ್ದು, ನೂರಾರು ಎಕರೆ ಕೃಷಿ ಜಮೀನು ಜಲಾವೃತಗೊಂಡಿದೆ. ನೀರಿನಿಂದಾಗಿ ಬೆಳೆ ಹಾನಿಯಾಗುವ ಆತಂಕದಲ್ಲಿ ರೈತರಿದ್ದಾರೆ.

ತಿಂಗಳಿನಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ ಹಾಗೂ ಇದರ ಜೊತೆಗೆ ಕಬಿನಿ ಜಲಾಶಯದಿಂದಲೂ ನೀರು ಬಿಡಲಾಗುತ್ತಿದೆ. ಇದರಿಂದಾಘಿ 727 ಎಕರೆ ವಿಸ್ತೀರ್ಣವಿರುವ ದೊಡ್ಡಕೆರೆ ತುಂಬಿತ್ತು.

ಶುಕ್ರವಾರ ರಾತ್ರಿ ಸಮಯದಲ್ಲಿ ಏರಿ ಒಡೆದಿದೆ. ಕೆರೆಯಲ್ಲಿದ್ದ ಭಾರಿ ಪ್ರಮಾಣದ ನೀರು ಪಕ್ಕದಲ್ಲೇ ಇದ್ದ 500 ಎಕರೆಗೂ ಹೆಚ್ಚು ಕೃಷಿ ಭೂಮಿಗೆ ನುಗ್ಗಿ, ಜಲಾವೃತವಾಗಿದೆ.

ADVERTISEMENT

ಈ ಭಾಗದ ರೈತರು ಎರಡು ವಾರಗಳ ಹಿಂದೆ ಭತ್ತ ನಾಟಿ ಮಾಡಿದ್ದರು. ಇನ್ನೂ ಕೆಲವರು ಜೋಳ ಬಿತ್ತನೆ ಮಾಡಿದ್ದಾರೆ. ನೀರು ನಿಂತಿರುವುದರಿಂದ ಬೆಳೆಹಾನಿಯಾಗುವ ಭಯ ಅವರನ್ನು ಕಾಡುತ್ತಿದೆ.

ಅಧಿಕಾರಿಗಳೇ ಕಾರಣ: ‘ವಾರದಿಂದ ಪಾಳ್ಯ ಗ್ರಾಮದ ದೊಡ್ಡಕೆರೆಯ ಏರಿಗೆ ಹಾನಿಯಾಗಿರುವ ಬಗ್ಗೆ ಸ್ಥಳೀಯರು ಕಾವೇರಿ ನೀರಾವರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ, ಯಾವ ಅಧಿಕಾರಿಗಳೂ ತಲೆಕೆಡಿಸಿಕೊಳ್ಳಲಿಲ್ಲ. ಶನಿವಾರ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಮಾಹಿತಿ ನೀಡಿದ್ದರೂ, ಅಧಿಕಾರಿಗಳು ಬಂದು ನೋಡಲಿಲ್ಲ, ಕೆರೆ ನೀರು ನಿಲ್ಲಿಸುವ ಕೆಲಸವನ್ನು ಮಾಡಲಿಲ್ಲ. ಇದರಿಂದ ನೂರಾರು ಎಕರೆ ಜಾಲಾವೃತಗೊಂಡಿದೆ’ ಎಂದು ರೈತ ಲಿಂಗರಾಜು ದೂರಿದರು.

ಶಾಸಕ ಭೇಟಿ: ಹನೂರು ಶಾಸಕ ಆರ್.ನರೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳೆ ನಾಶವಾಗಿದ್ದರೆ, ಕೃಷಿ ಅಧಿಕಾರಿಗಳ ಜೊತೆ ಸಮಾಲೋಚಿಸಿ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು. ಕೃಷಿ ಸಚಿವರ ಜೊತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಯೂ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು.

ಮೀನು ಹಿಡಿದರು: ಜಮೀನುಗಳಲ್ಲಿ ನಿಂತಿದ್ದ ನೀರಿನಲ್ಲಿ ಗ್ರಾಮದ ಯುವಕರು ಮೀನು ಹಿಡಿದರು. ಇದರಿಂದಲೂ ಬೆಳೆ ನಾಶವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.