ADVERTISEMENT

ಕಾಡಾನೆಗೆ ಪ್ರಸಾದ ನೀಡಿದ ಐಎಎಸ್‌ ಅಧಿಕಾರಿ: ವಿಡಿಯೊ ವೈರಲ್‌

ವನ್ಯಜೀವಿ ಸಂರಕ್ಷಣಾ ನಿಯಮ ಉಲ್ಲಂಘನೆ ಆರೋಪ; ಪರಿಶೀಲಿಸಿ ಕ್ರಮ–ಹುಲಿ ಯೋಜನೆ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 12:38 IST
Last Updated 15 ಜನವರಿ 2021, 12:38 IST
ವೈರಲ್‌ ಆಗಿರುವ ಫೋಟೊ
ವೈರಲ್‌ ಆಗಿರುವ ಫೋಟೊ   

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಪೌರಾಡಳಿತ ನಿರ್ದೇಶಕಿ ಬಿ.ಬಿ.ಕಾವೇರಿ ಅವರು ತಾಲ್ಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಾಡಾನೆಗೆ ದೇವಾಲಯದ ಪ್ರಸಾದ ನೀಡುತ್ತಿರುವ ಫೋಟೊ ವೈರಲ್‌ ಆಗಿದ್ದು, ಪರಿಸರವಾದಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.

‌ಇಲಾಖೆ ಕರ್ತವ್ಯಕ್ಕಾಗಿ ಬುಧವಾರ (ಜ.13) ಕಾವೇರಿ ಅವರು ಗುಂಡ್ಲುಪೇಟೆಗೆ ಭೇಟಿ ನೀಡಿದ್ದರು. ಸಂಜೆ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿದ್ದರು.

ಅವರು ಭೇಟಿ ನೀಡಿದ್ದ ಸಮಯದಲ್ಲಿ ದೇವಾಲಯದ ಆವರಣದ ಬಳಿ ಸಲಗವೊಂದಿತ್ತು.ದೇವಾಲಯದ ಅರ್ಚಕರು ಆನೆಗೆ ತೆಂಗಿನಕಾಯಿ ತೋರಿಸಿ ದೇವಾಲಯದ ಹತ್ತಿರಕ್ಕೆ ಬರುವಂತೆ ಮಾಡುವ ವಿಡಿಯೊ ಕೂಡ ವೈರಲ್‌ ಆಗಿದ್ದು, ದೇವಾಲಯದ ಬಳಿ ಬಂದ ಆನೆಗೆ ಕಾವೇರಿ ಅವರು ಪ್ರಸಾದ (ಬೆಲ್ಲ, ಬಾಳೆಹಣ್ಣು‌) ತಿನಿಸಿದ್ದಾರೆ.

ADVERTISEMENT

ಹಿಮವದ್‌ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ವನ್ಯಜೀವಿಗಳಿಗೆ ಆಹಾರ ನೀಡುವುದು ವನ್ಯಜೀವಿ ಸಂರಕ್ಷಣಾ ನಿಯಮಗಳ ಉಲ್ಲಂಘನೆಯಾಗುತ್ತದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌ ಅವರು, ‘ವೈರಲ್‌ ಆಗಿರುವ ವಿಡಿಯೊ, ಫೋಟೊ ಗಮನಿಸಿದ್ದೇನೆ. ಕಾವೇರಿ ಅವರು ಬರುವ ಮಾಹಿತಿ ನಮಗೆ ಇರಲಿಲ್ಲ. ಆ ಸಮಯದಲ್ಲಿ ಅಲ್ಲಿ ನಮ್ಮ ಸಿಬ್ಬಂದಿಯೂ ಅಲ್ಲಿರಲಿಲ್ಲ. ವನ್ಯಪ್ರಾಣಿಗಳಿಗೆ ಆಹಾರ ನೀಡುವಂತಿಲ್ಲ. ಈ ಪ್ರಕರಣದಲ್ಲಿ ದೇವಾಲಯದ ಸಿಬ್ಬಂದಿ ಪಾತ್ರದ ಬಗ್ಗೆ ಪರಿಶೀಲನೆ ನಡೆಲಾಗುತ್ತಿದೆ. ಮುಂದೆ ಯಾವ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದರು.

‘ಎರಡು ವರ್ಷಗಳ ಹಿಂದೆಯೂ ದೇವಾಲಯದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ನಂತರ ಆನೆಯನ್ನು ಕಾಡಿಗೆ ಓಡಿಸಲಾಗಿತ್ತು’ ಎಂದು ಅವರು ಹೇಳಿದರು.

ಪರಿಚಿತ ಆನೆ: ಈ ಆನೆಯು ದೇವಾಲಯದ ಆವರಣದಲ್ಲಿ ಸುತ್ತಾಡುತ್ತಿರುತ್ತದೆ. ಆಗಾಗ ಪ್ರವಾಸಿಗರಿಗೂ ಕಾಣಸಿಗುತ್ತದೆ. ಈ ಹಿಂದೆಯೂ ಆನೆಗೆ ದೇವಾಲಯದ ಪ್ರಸಾದವನ್ನು ನೀಡುತ್ತಿರುವ ಬಗ್ಗೆ ವಿವಾದ ಉಂಟಾಗಿತ್ತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಕಾಡಿಗೆ ಓಡಿಸಿದ್ದರು. ಈಗ ಮತ್ತೆ ಕಾಣಿಸಿಕೊಳ್ಳಲು ಆರಂಭಿಸಿದೆ. ಇದುವರೆಗೂ ಆನೆ ಯಾರಿಗೂ ತೊಂದರೆ ಮಾಡಿಲ್ಲ.

‘ಕಾಡಿನಲ್ಲಿ ಇರುವ ಆನೆಗಳು ಸಾಕಾನೆಗಳ ರೀತಿ ಅಲ್ಲ. ಸ್ನೇಹದಿಂದ ವರ್ತಿಸಿದಂತೆ ಕಂಡರೂ ಯಾವ ಕ್ಷಣದಲ್ಲಿ ಏನು ಮಾಡುತ್ತವೆಯೋ ಎಂದು ಹೇಳುವುದಕ್ಕೆ ಆಗುವುದಿಲ್ಲ. ಹಾಗಾಗಿ, ಅರ್ಚಕರಾಗಲಿ, ಪ್ರವಾಸಿಗರಾಗಲಿ ಯಾರೂ ಆನೆಯ ಬಳಿ ಹೋಗಬಾರದು. ಆಹಾರ ನೀಡಲೇಬಾರದು’ ಎಂದು ಹೇಳುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

‘ಅರಣ್ಯ ಇಲಾಖೆ ಇಂತಹದ್ದಕ್ಕೆ ಅವಕಾಶ ನೀಡಬಾರದು. ದೇವಾಲಯದ ಸಿಬ್ಬಂದಿ ಆನೆ ಅಥವಾ ಇನ್ಯಾವುದೇ ಪ್ರಾಣಿಗಳಿಗೆ ಆಹಾರಗಳನ್ನು ನೀಡುವುದಕ್ಕೆ ನಿರ್ಬಂಧ ವಿಧಿಸಬೇಕು’ ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.