
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ವಿಸ್ತರಣೆ ಹೆಸರಿನಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯದೆ 27 ಬೃಹತ್ ಮರಗಳನ್ನು ಕಡಿದು ಹಾಕಲಾಗಿದ್ದು, ಪರಿಸರವಾದಿಗಳು ಹಾಗೂ ರೈತ ಸಂಘಟನೆ ಪ್ರಮುಖರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕಾಂಕ್ರೀಟ್ ರಸ್ತೆ ಮಾಡುವ ಉದ್ದೇಶದಿಂದ ಮಹದೇಶ್ವರ ಬೆಟ್ಟದ ಹಳೆ ಕುಟೀರಗಳ ಬಳಿ ಬೆಳೆದಿದ್ದ 30 ರಿಂದ 40 ವರ್ಷಗಳಷ್ಟು ಹಳೆಯದಾದ ಮರಗಳನ್ನು ಕಡಿದು ಹಾಕಲಾಗಿದೆ. ರಸ್ತೆ ವಿಸ್ತರಣೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡುವ ಮುನ್ನ ಅರಣ್ಯ ಇಲಾಖೆಯಿಂದ ಮರ ಕಡಿತಲೆಗೆ ಅನುಮತಿ ಪಡೆಯಬೇಕು ಎಂಬ ನಿಯಮವಿದೆ. ಅನುಮತಿ ಪಡೆಯದೆ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನ ನಡೆಸಿರುವುದು ಖಂಡನೀಯ. ಮರಗಳ ಮಾರಣ ಹೋಮ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಸಬೇಕು’ ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
‘40 ವರ್ಷಗಳ ಹಿಂದೆ ಭಕ್ತರಿಗೆ ನೆರಳು ಹಾಗೂ ತಂಪಾದ ಗಾಳಿ ಸಿಗಲಿ ಎಂಬ ಉದ್ದೇಶದಿಂದ ಗಿಡಗಳನ್ನು ನೆಟ್ಟು ಬೆಳೆಸಲಾಗಿತ್ತು. ಜಾತ್ರೆ ಹಾಗೂ ವಿಶೇಷ ಸಂದರ್ಭದಲ್ಲಿ ಬೆಟ್ಟಕ್ಕೆ ಆಗಮಿಸುವ ಭಕ್ತರು ಬಿಸಿಲಿನ ಝಳದಿಂದ ರಕ್ಷಣೆ ಪಡೆಯಲು ಮರಗಳ ಕೆಳಗೆ ನಿಂತು ಧಣಿವಾರಿಸಿಕೊಳ್ಳುತ್ತಿದ್ದರು. ಯಾರಿಗೂ ತೊಂದರೆ ಮಾಡದೆ ಬೆಳೆದು ನಿಂತಿದ್ದ ಮರಗಳ ಕಡಿತಲೆ ಮಾಡಿರುವುದು ಭಕ್ತರಿಗೂ ನೋವುಂಟು ಮಾಡಿದೆ. ಹಾಗೂ ಪರಿಸರಕ್ಕೂ ಹಾನಿಯಾಗಿದೆ’ ಎಂದು ಆರೋಪಿಸುತ್ತಾರೆ ಪರಿಸರವಾದಿಗಳು.
ಹಚ್ಚ ಹಸಿರಿನಿಂದ ಆವರಿಸಿಕೊಂಡಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಮಾದಪ್ಪನ ದರ್ಶನ ಪಡೆಯುವ ಭಕ್ತರು ದೇಗುಲದ ಸುತ್ತಲಿನ ಬೆಟ್ಟ ಗುಡ್ಡಗಳು ಹಾಗೂ ಹಸಿರ ಸಿರಿಯನ್ನೂ ಕಣ್ತುಂಬಿಕೊಳ್ಳುತ್ತಾರೆ. ಮಹದೇಶ್ವರನ ಬೆಟ್ಟಕ್ಕೆ ಕಳಶವಿಟ್ಟಂತೆ ಇರುವ ಹಸಿರು ಹೊದಿಕೆಗೆ ಧಕ್ಕೆ ತರುವಂತಹ ಕಾರ್ಯ ಸಲ್ಲದು.
ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದು ಬೆಟ್ಟದ ಪರಿಸರವನ್ನು ಹಾಳು ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಈಚೆಗೆ ಸಚಿವ ಸಂಪುಟ ಸಭೆ ನಡೆಯುವಾಗಲೂ ತೆಂಗಿನಮರಗಳನ್ನು ಕಡಿದು ಹಾಕಲಾಗಿತ್ತು. ಈಗ ಭಕ್ತರಿಗೆ ನೆರಳು ಕೊಡುವ ಮರಗಳನ್ನು ಕಡಿದು ಹಾಕಿರುವುದು ಖಂಡನೀಯ . ಅರಣ್ಯ ಇಲಾಖೆ ಕಠಿಣ ಕ್ರಮ ಜರುಗಿಸಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ.
ರೈತರಿಗೊಂದು ನ್ಯಾಯ; ಬೇರೆಯವರಿಗೊಂದು ನ್ಯಾಯ: ‘ರೈತರು ಜಮೀನಿನಲ್ಲಿ ಬೆಳೆದಿರುವ ಮರಗಳನ್ನು ಕಡಿದರೆ ದಂಡ ವಿಧಿಸುವ ಪ್ರಕರಣ ದಾಖಲಿಸುವ ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ಪಡೆಯದೆ 27 ಮರಗಳ ಹನನ ಮಾಡಿರುವವರ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು. ಈ ಮೂಲಕ ಕಾನೂನು ಎಲ್ಲರಿಗೂ ಒಂದೇ ಎಂದು ತೋರಿಸಬೇಕು’ ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಒತ್ತಾಯಿಸಿದ್ದಾರೆ.
ಅಧಿಕಾರಿಗಳು ಏನಂತಾರೆ: ‘ಕಾಂಕ್ರಿಟ್ ರಸ್ತೆ ನಿರ್ಮಿಸುವ ಸಲುವಾಗಿ 32 ಮರಗಳನ್ನು ಕಡಿಯಲು ಅನುಮತಿ ಕೋರಿ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನ.13ರಂದು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಅರ್ಜಿ ಇನ್ನೂ ಪರಿಶೀಲನೆ ಹಂತದಲ್ಲಿದ್ದು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಹಜರು ಮಾಡುವ ಮುನ್ನವೇ ಹಿಟಾಚಿ ಹಾಗೂ ಜೆಸಿಬಿಗಳನ್ನು ಬಳಸಿಕೊಂಡು ನ.26ರಂದು ಮರಗಳನ್ನು ಕಡಿಯಲಾಗಿದೆ’ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.
‘ಅರಣ್ಯ ಇಲಾಖೆಯ ನಿಯಮ ಉಲ್ಲಂಘನೆ ಆರೋಪದ ಮೇಲೆ ಮರ ಕಡಿಯಲು ಬಳಸಿದ್ದ ಹಿಟಾಚಿ ಹಾಗೂ ಜೆಸಿಬಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ವಾಹನ ಚಾಲಕರು ಹಾಗೂ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಪ್ರಾಧಿಕಾರದ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು’ ಎಂದು ಮಲೆ ಮಹದೇಶ್ವರ ವನ್ಯಧಾಮದ ಮಹದೇಶ್ವರ ಬೆಟ್ಟ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲೆ ಅಹಿರೆ ‘ಪ್ರಜಾವಾಣಿಗೆ’ ತಿಳಿಸಿದರು.
ಮರಗಳ ಕಡಿತಲೆ ಕುರಿತು ಪ್ರತಿಕ್ರಿಯೆ ಪಡೆಯಲು ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಅವರನ್ನು ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ. ಕ್ರಮಕ್ಕೆ ಸೂಚನೆ ಮಹದೇಶ್ವರ ಬೆಟ್ಟದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿರುವುದು ಗಮನಕ್ಕೆ ಬಂದಿದೆ. ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಲೆಮಹದೇಶ್ವರ ವನ್ಯಧಾಮದ ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.