ADVERTISEMENT

ಚಾಮರಾಜನಗರದಿಂದಲೇ ಜೆಡಿಯು ಕಟ್ಟುವ ಕೆಲಸ: ಮಹಿಮ ಪಟೇಲ್‌‌

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 14:33 IST
Last Updated 26 ಮಾರ್ಚ್ 2021, 14:33 IST
ಮಹಿಮ ಪಟೇಲ್‌
ಮಹಿಮ ಪಟೇಲ್‌   

ಚಾಮರಾಜನಗರ: ‘ರಾಜಕಾರಣ ಎಂಬುದು ವ್ಯಾಪಾರವಾಗಿದ್ದು, ಚುನಾವಣೆ ಎಂದರೆ ಹಣ ಹೂಡುವುದು, ವಾಪಸ್ ಪಡೆಯುವುದು ಎಂದಾಗಿದೆ. ಹಳ್ಳಿಗಳ ಉದ್ಧಾರದ ಮೂಲಕ ರಾಜಕಾರಣದ ಆರೋಗ್ಯವನ್ನು ಸುಧಾರಿಸುವ ಕೆಲಸ ಮಾಡಬೇಕಾಗಿದೆ’ ಎಂದು ಸಂಯುಕ್ತ ಜನತಾದಳದ (ಜೆಡಿಯು) ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪ‍ಟೇಲ್‌ ಅವರು ಶುಕ್ರವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ವರ್ಷಗಳ ಹಿಂದೆ ಜೆಡಿಯುನ ರಾಜ್ಯ ಅಧ್ಯಕ್ಷನಾಗಿ ಅಧಿಕಾರವಹಿಸಿದ್ದೇನೆ. ರಾಜ್ಯದಲ್ಲಿ ಮತ್ತೆ ಪಕ್ಷ ಕಟ್ಟಲು ನಿರ್ಧಾರ ಮಾಡಿದ್ದೇವೆ. ರಾಜ್ಯದಾದ್ಯಂತ ಪ್ರವಾಸ ನಡೆಸುತ್ತಿದ್ದೇವೆ. ನನ್ನ ತಂದೆ ಜೆ.ಎಚ್‌.ಪಟೇಲ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರ ಜಿಲ್ಲೆಯಾಗಿ ಘೋಷಣೆಯಾಯಿತು. ಈ ಜಿಲ್ಲೆಯಿಂದಲೇ ಪಕ್ಷ ಕಟ್ಟುವುದಕ್ಕೆ ಚಾಲನೆ ನೀಡುತ್ತೇವೆ’ ಎಂದು ಹೇಳಿದರು.

‘ನಾವು ಯಾವುದೇ ಪಕ್ಷದ ವಿರುದ್ಧ ಮಾತನಾಡುವುದಿಲ್ಲ. ಸರ್ಕಾರಗಳ ವಿರುದ್ಧ ಮಾತನಾಡುವುದಿಲ್ಲ. ಜನರ ಕಡೆಗೆ ಗಮನ ಕೇಂದ್ರೀಕರಿಸಿ ಕೆಲಸ ಮಾಡುವುದು ನಮ್ಮ ಉದ್ದೇಶ. ನಮಗೆ ಗುರಿಗಿಂತ ದಾರಿ ಬಹಳ ಮುಖ್ಯ. ಗುರಿ ತಲುಪುವುದು ಸ್ವಲ್ಪ ತಡವಾಗಬಹುದು. ಆದರೆ, ಒಳ್ಳೆಯ ದಾರಿಯಲ್ಲೇ ನಡೆಯುವುತ್ತೇವೆ’ ಎಂದು ಹೇಳಿದರು.

ADVERTISEMENT

‘ಗ್ರಾಮಗಳು, ಹಳ್ಳಿಗಳು ಉದ್ಧಾರವಾಗಬೇಕು. ಕಾರಿಗನೂರು ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿ ಮಾಡಲು ಯತ್ನಿಸುತ್ತಿದ್ದೇವೆ. ಸಹಜ ಹಾಗೂ ಸಾವಯವ ಕೃಷಿಗೆ ಒತ್ತು ನೀಡಿ ಕೆಲಸ ಮಾಡುತ್ತಿದ್ದೇವೆ. ರೈತರ ಜೊತೆ ಹೆಚ್ಚು ತೊಡಗಿಸಿಕೊಳ್ಳಲಾಗುತ್ತಿದೆ’ ಎಂದು ಮಹಿಮ ಪಟೇಲ್‌ ಅವರು ಹೇಳಿದರು.

‘ಇದೇ ಉದ್ದೇಶದಿಂದ ರಾಜ್ಯದಲ್ಲಿ ಪಾದಯಾತ್ರೆ ನಡೆಸುತ್ತಿದ್ದೇನೆ. ಕೋಲಾರದಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಕಾರಿಗನೂರಿನಲ್ಲಿರುವ ತಂದೆಯ ಸಮಾಧಿವರೆಗೆ, ಬೀದರ್‌ನಿಂದ ಬಸವ ಕಲ್ಯಾಣದವರೆಗೆ ಸೇರಿದಂತೆ 700 ಕಿ.ಮೀ ಪಾದಯಾತ್ರೆ ನಡೆಸಿದ್ದೇನೆ. ಚಾಮರಾಜನಗರಕ್ಕೂ ಪಾದಯಾತ್ರೆ ಬರುವ ಯೋಚನೆ ಇದೆ’ ಎಂದರು.

ಮರು ವ್ಯಾಖ್ಯಾನ: ‘ರಾಜಕಾರಣವನ್ನು ಮರು ವ್ಯಾಖ್ಯಾನ ಮಾಡಬೇಕಾಗಿದೆ. ಮೊದಲು ಬಾಂಧವ್ಯಕ್ಕೆ ಪ್ರಾಶಸ್ತ್ರ್ಯ ನೀಡಬೇಕಾಗಿದೆ. ನಂತರ ಆರೋಗ್ಯ, ಆ ಬಳಿಕವಷ್ಟೇ ಹಣಕ್ಕೆ ಆದ್ಯತೆ ನೀಡಬೇಕು’ ಎಂದರು.

ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಧನಂಜಯ್‌ ಲಕ್ಷ್ಮೀಕಾಂತ್‌, ಜಿಲ್ಲಾ ಸಂಚಾಲಕ ಗಂಗಾಧರ್‌ ಎಸ್‌. ಇದ್ದರು.

ಸ್ವತಂತ್ರ ಸ್ಪರ್ಧೆ

ಬಿಹಾರದಲ್ಲಿ ಪಕ್ಷವು ಅನಿವಾರ್ಯವಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿ ಕೊಂಡಿದೆ. ರಾಜ್ಯದಲ್ಲಿ ನಾವು ಸ್ವತಂತ್ರ್ಯವಾಗಿದ್ದೇವೆ.ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ವಿಧಾನಸಭಾ ಉಪ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲೂ ಸೂಕ್ತ ಅಭ್ಯರ್ಥಿ ಸಿಕ್ಕಿದರೆ ಪಕ್ಷದಿಂದ ಟಿಕೆಟ್‌ ನೀಡಲಾಗುವುದು ಎಂದು ಮಹಿಮ ಪಟೇಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.