ADVERTISEMENT

ಕಬಿನಿ ಜಲಾಶಯ ಭರ್ತಿ: ನಾಲೆಗಳಲ್ಲಿ ಜಲ ವೈಭವ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 16:11 IST
Last Updated 29 ಜೂನ್ 2025, 16:11 IST
ಯಳಂದೂರು ಸಮೀಪದ ಗೂಳಿಪುರ ಗ್ರಾಮದ ಕಬಿನಿ ನಾಲೆಯಲ್ಲಿ ನೀರು ಹರಿಯುತ್ತಿದೆ.
ಯಳಂದೂರು ಸಮೀಪದ ಗೂಳಿಪುರ ಗ್ರಾಮದ ಕಬಿನಿ ನಾಲೆಯಲ್ಲಿ ನೀರು ಹರಿಯುತ್ತಿದೆ.   

ಯಳಂದೂರು: ರಾಜ್ಯದಲ್ಲಿ ಮೊದಲು ಭರ್ತಿ ಭಾಗ್ಯ ಕಂಡಿರುವ ಜಲಾಶಯ ಕಬಿನಿ. ಕಬಿನಿ ನದಿಯು ಕಾವೇರಿಯ ಉಪನದಿಯೂ ಹೌದು. ಕೇರಳ ಭಾಗದಲ್ಲಿ ಸುರಿದ ಮಳೆಗೆ ಜಲಾಶಯ ತುಂಬಿದ್ದು, ಹೆಚ್ಚಿನ ನೀರನ್ನು ನಾಲೆಗಳಲ್ಲಿ ಹರಿಯಬಿಡಲಾಗಿದೆ. ಮಳೆ ಕೊರತೆಯಿಂದ ಭಣಗುಡುವ ಬಯಲು ಪ್ರದೇಶಗಳ ಕಾಲುವೆಗಳಿಗೂ ನೀರು ಹರಿದಿದೆ. ಇದರಿಂದ ಈ ಭಾಗಗಳಲ್ಲಿ ಬಹುಬೇಗ ಅಂತರ್ಜಲ ವೃದ್ಧಿ, ಕೃಷಿಕರಿಗೆ ನೀರಿನ ಕೊರತೆಯೂ ನೀಗುವ ನಿರೀಕ್ಷೆ ಮೂಡಿದೆ. 

ತಾಲ್ಲೂಕಿನ ಚಿಕ್ಕ ಮತ್ತು ದೊಡ್ಡ ಕಬಿನಿ ಕಾಲುವೆಗಳಲ್ಲಿ ನೀರು ಹರಿಯುತ್ತಿದೆ. ಎಚ್.ಡಿ.ಕೋಟೆ ಬೀಚನಹಳ್ಳಿ ಡ್ಯಾಂನಿಂದ ಹೆಚ್ಚುವರಿ ನೀರು ಹರಿಯುತ್ತಿದ್ದು, ಪರಿಸರ ತಂಪಾಗಿಸಿದೆ. ಆದರೆ, ಕೆರೆಕಟ್ಟೆ ತುಂಬುವಷ್ಟು ನೀರು ಕಾಲುವೆಗಳಲ್ಲಿ ಹರಿದು ಬರುತ್ತಿಲ್ಲ. ಜನರ ಬಳಕೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಗತ್ಯತೆ ನೀಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಸದ್ಯ ತಾಲ್ಲೂಕಿನಲ್ಲಿ ಹದಿನೈದು ದಿನಗಳ ಹಿಂದೆ ಹದ ಮಳೆಯಾಗಿದೆ. ಸಾಗುವಳಿ ಭೂಮಿಯಲ್ಲಿ ಉದ್ದು, ಹೆಸರು, ಭತ್ತ, ರಾಗಿ ಕೊಯ್ಲಾಗುತ್ತಿದೆ. ಮುಂಗಾರು ಹಂಗಾಮಿನ ಚಟುವಟಿಕೆಯೂ ನಡೆಯುತ್ತಿದೆ. ಹಾಗಾಗಿ, ಸದ್ಯ ನೀರಿಗೆ ಬೇಡಿಕೆ ಬಂದಿಲ್ಲ. ಪ್ರಸಕ್ತ ವರ್ಷ ಮಾನ್ಸೂನ್ ಋತುವೂ ಕೃಷಿಕರನ್ನು ಕೈಯಿಡಿಯುವ ನಿರೀಕ್ಷೆ ಮೂಡಿಸಿದೆ. ಕಾಲುವೆಗಳಲ್ಲಿ ನೀರು ಹರಿಸುವ ಮೊದಲು ನಾಲೆ ಸುತ್ತಮುತ್ತ ಬೆಳೆದಿರುವ ಪೊದೆ ಸಸ್ಯ, ಮುಳ್ಳು ಗಿಡಗಳನ್ನು ತೆರವುಗೊಳಸಬೇಕು ಎನ್ನುತ್ತಾರೆ ರೈತ ವೈ.ಕೆ.ಮೋಳೆ ನಾಗರಾಜು.

ADVERTISEMENT

ಜಲಮೂಲ ಶುದ್ಧೀಕರಿಸಿ:

ಕಬಿನಿ ಕಾಲುವೆಯಲ್ಲಿ ಬಹುಬೇಗ ನೀರು ಹರಿದು ಬಂದಿದೆ. ಇದರ ಸದ್ಬಳಕೆ ಮಾಡಿಕೊಂಡು ಕೆರೆ, ಕಟ್ಟೆ ಭರ್ತಿ ಮಾಡುವತ್ತ ಗಮನ ಹರಿಸಬೇಕು. ಜಲಾವರಗಳಲ್ಲಿ ತುಂಬಿರುವ ಹೂಳು ಮತ್ತು ಕಳೆ ಸಸ್ಯಗಳನ್ನು ತೆರವುಗೊಳಿಸಿ, ಕಾಲುವೆ ನೀರು ಸಂಗ್ರಹಿಸುವತ್ತ ನೀರಾವರಿ ಇಲಾಖೆ ಆದ್ಯತೆ ನೀಡಲಿ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಒತ್ತಾಯಿಸಿದರು.

ಇನ್ನೂ ಮಾಹಿತಿ ಬಂದಿಲ್ಲ:

ಕಾಲುವೆಗಳಲ್ಲಿ ಇದೇ ಮೊದಲ ಬಾರಿ ನಿರೀಕ್ಷೆಗೂ ಮೀರಿ ನೀರು ಹರದು ಬಂದಿದೆ. ಕೇರಳ ಸುತ್ತಮುತ್ತ ಹೆಚ್ಚಿನ ಮಳೆ ಸುರಿದಿದ್ದು, ಕಬಿನಿ ಜಲಾಶಯ ತುಂಬಿದೆ. ಹೆಚ್ಚುವರಿ ನೀರು ಕಾವೇರಿ ನದಿ ಮತ್ತು ಸಣ್ಣಪುಟ್ಟ ನಾಲೆಗಳತ್ತ ಹರಿದಿದೆ. ನಾಲೆಗಳಿಗೆ ನೀರು ಹರಿಸುವ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ವೆಂಕಟರಂಗಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.