
ಚಾಮರಾಜನಗರ: ಬುದ್ಧ, ಬಸವ, ಅಂಬೇಡ್ಕರ್ ಅವರಂತೆ ಸಮಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ಮಹನೀಯರ ಪೈಕಿ ದಾಸಶ್ರೇಷ್ಠ ಕನದಾಸರು ಒಬ್ಬರು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಭಕ್ತಶ್ರೇಷ್ಠ ಕನಕದಾಸರ 538ನೇ ಜಯಂತಿಯಲ್ಲಿ ಮಾತನಾಡಿದ ಶಾಸಕರು, ಕೃಷ್ಣನ ಪರಮಭಕ್ತರಾಗಿದ್ದ ಕನಕದಾಸರು ಭಕ್ತಿಗೆ ಪರ್ಯಾಯವಾಗಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದ ಕನಕದಾಸರು ವ್ಯಾಕರಣಬದ್ಧವಾಗಿ ಜನರಿಗೆ ಅರ್ಥವಾಗುವಂತಹ ಸರಳ ಕೀರ್ತನೆಗಳನ್ನು ರಚಿಸಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.
ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಮೇಲು-ಕೀಳು ಎಂಬ ತಾರತಮ್ಯ ಹೋಗಲಾಡಿಸಲು ಅವಿರತವಾಗಿ ದುಡಿದ ಕನಕದಾಸರು ಕರ್ನಾಟಕ ಮಾತ್ರವಲ್ಲದೆ ದೇಶದುದ್ದಗಲಕ್ಕೂ ಸಂಚರಿಸಿ ಜನರಲ್ಲಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದುಹಾಕಲು ಶ್ರಮಿಸಿದರು. ಕೆಳಸ್ತರದಲ್ಲಿದ್ದ ಸಮಾಜವನ್ನು ಮೇಲ್ಪಂಕ್ತಿಗೆ ತಂದು ನಿಲ್ಲಿಸಿದರು ಎಂದರು.
ಜಿಲ್ಲೆಯಲ್ಲಿ ಹಲವು ಸಮುದಾಯಗಳಿಗೆ ಪೂರಕವಾಗಿ ಸರ್ಕಾರದ ಅನುದಾನದಲ್ಲಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಕೆಲವು ಸಮಾಜಗಳ ಸಮುದಾಯ ಭವನವು ನಿರ್ಮಾಣ ಹಂತದಲ್ಲಿದೆ. ಗಂಗಾ ಕಲ್ಯಾಣ ಯೋಜನೆ, ಸಾರಥಿ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಹಿಂದುಳಿದ ಸಮುದಾಯಗಳಿಗೆ ತಲುಪಿಸಲಾಗಿದೆ ಎಂದು ಪುಟ್ಟರಂಗಶೆಟ್ಟಿ ಹೇಳಿದರು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ 15–16ನೇ ಶತಮಾನದ ದಾಸಶ್ರೇಷ್ಠರಲ್ಲಿ ಕನಕದಾಸರು ಪ್ರಮುಖರು. ತಿಮ್ಮಪ್ಪನಾಯಕನಿಂದ ಕನಕದಾಸಗಿ ಶ್ರೇಷ್ಠ ಚಿಂತನೆಗಳನ್ನು ಸಾರುವ ಸರಳ ಕೀರ್ತನೆಗಳನ್ನು ರಚಿಸಿ ನಾಡಿನುದ್ದಕ್ಕೂ ಪಸಿರಿಸಿದ ಕನಕದಾಸರು ಸಮಾಜವನ್ನು ತಿದ್ದಿ ಸಮಾನತೆ ತಂದರು. 316 ಕೀರ್ತನೆಗಳನ್ನು ರಚಿಸಿ ಜಾತೀಯ ಸಂಕೋಲೆಗಳಿಗೆ ಸಿಲುಕಿದ್ದ ಜನರಿಗೆ ಸಮಾನತೆಯ ಸಂದೇಶ ಸಾರಿದರು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ಮಾನಸ ಮಾತನಾಡಿ, ಸರಳ ಕೀರ್ತನೆಗಳ ಮೂಲಕ ಸಮಾಜಕ್ಕೆ ಮನ್ವಂತರದ ಹಾದಿ ತೋರಿದವರಲ್ಲಿ ಕನಕದಾಸರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕನಕದಾಸ ಎಂಬುದು ಹೆಸರು ಮಾತ್ರವಲ್ಲ; ಬೆಳಕು, ದಿವ್ಯತ್ವ ಹಾಗೂ ಜೀವತ್ವವೂ ಆಗಿದೆ ಎಂದರು.
ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ಅವರಂತೆ ಕನಕದಾಸರೂ ನೆಲದ ವಿಸ್ಮಯವಾಗಿದ್ದು ಶಕ್ತಿಯಾಗಿ ಬೆಳೆದಿದ್ದಾರೆ. ನಾಡಿಗೆ, ಜ್ಞಾನದ ಬೆಳಕನ್ನು ಪಸರಿಸಿದ್ದಾರೆ ಎಂದರು.
ಮಹನೀಯರ ಜಯಂತಿಗಳು ನಮ್ಮಲ್ಲಿರುವ ಅಹಂ, ಕೀಳರಿಮೆ ತೊಡೆದುಹಾಕಿ ಬೆಳಕಿನಲ್ಲಿ ಸಾಗುವಂತೆ ಮಾಡುತ್ತವೆ. ನಮ್ಮೊಳಗೆ ನಾನು ಹಾಗೂ ಜೇನು ಅಡಗಿದ್ದು ನಾನತ್ವವನ್ನು ಉದ್ದೀಪನೆಗೊಳಿಸದೆ ಜೇನು ಸವಿಯಬೇಕು. ಬದುಕಿನ ಸರಳತೆ, ಭವ್ಯತೆಯನ್ನು ಅರ್ಥ ಮಾಡಿಕೊಂಡರೆ ಜೀವನ ಹಸನಾಗಲಿದೆ. ದಾರ್ಶನಿಕರು, ಚಿಂತಕರು, ಸಾಧು-ಸಂತರು, ಮಹಾತ್ಮರು, ಸಮಾಜ ಸುಧಾರಕರು ಸದಾ ದಾರಿದೀಪವಾಗಬೇಕು ಎಂದರು.
ಮೋಹನ ತರಂಗಿಣಿ, ನಳ ಚರಿತೆ, ಹರಿಭಕ್ತಿ ಸಾರ, ರಾಮಧ್ಯಾನ ಚರಿತೆಯಂತಹ ಶ್ರೇಷ್ಠ ಕೃತಿಗಳನ್ನು ಕನಕದಾಸರು ರಚಿಸಿದ್ದಾರೆ. ರಾಮಧ್ಯಾನ ಚರಿತೆ ಜಗತ್ತಿನ ಎಲ್ಲ ಭಾಷೆಗಳಲ್ಲೂ ತರ್ಜುಮೆಯಾಗಬೇಕಾದ ಶ್ರೇಷ್ಠ ಕೃತಿ. ಕನಕದಾಸರ ಕೀರ್ತನೆಗಳು ನಮ್ಮನ್ನು ಒರೆಗೆ ಹಚ್ಚಲಿದ್ದು ಪ್ರತಿ ಕೀರ್ತನೆಯೂ ಸಂಶೋಧನೆ ಮಾಡುವಷ್ಟು ಸಾರವನ್ನು ಹೊಂದಿವೆ ಎಂದು ಮಾನಸ ಹೇಳಿದರು.
ಚುಡಾ ಅದ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಎಸ್‌ಪಿ ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಿ.ಸಿ.ಶೃತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇಶಕ ರಾಜು, ಸಮಾಜದ ತಾಲ್ಲೂಕು ಅಧ್ಯಕ್ಷ ಉಮೇಶ್, ಮುಖಂಡರಾದ ಬೆಳ್ಳೇಗೌಡ, ಗುರುಸ್ವಾಮಿ ಕಾರ್ಯಕ್ರಮದಲ್ಲಿ ಇದ್ದರು.
ಅದ್ಧೂರಿ ಮೆರವಣಿಗೆ
ಕನಕದಾಸರ 538ನೇ ಜಯಂತಿ ಅಂಗವಾಗಿ ನಗರದ ಪ್ರವಾಸಿ ಮಂದಿರದಿಂದ ಕನಕದಾಸರ ಭಾವಚಿತ್ರದ ಅದ್ಧೂರಿ ಮೆರವಣಿಗೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ನೀಡಿದವು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಮಾಪನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.