ADVERTISEMENT

ಹನೂರು | ರಾಜ್ಯ ಹೆದ್ದಾರಿ; ಮೃತ್ಯುವಿಗೆ ದಾರಿ; ಹೆಚ್ಚುತ್ತಿವೆ ಅಪಘಾತ ಪ್ರಮಾಣ

ಸುರಕ್ಷತಾ ಕ್ರಮಗಳ ಅನುಷ್ಠಾನದಲ್ಲಿ ಲೋಪ; ಹೆಚ್ಚುತ್ತಿವೆ ಅಪಘಾತ ಪ್ರಮಾಣ

ಬಿ.ಬಸವರಾಜು
Published 24 ನವೆಂಬರ್ 2025, 1:55 IST
Last Updated 24 ನವೆಂಬರ್ 2025, 1:55 IST
ಹನೂರು ತಾಲ್ಲೂಕಿನ ದೊಡ್ಡಿಂದುವಾಡಿ ರಸ್ತೆ
ಹನೂರು ತಾಲ್ಲೂಕಿನ ದೊಡ್ಡಿಂದುವಾಡಿ ರಸ್ತೆ   
ಅವೈಜ್ಞಾನಿಕ ಕಾಮಗಾರಿ ಅಪಘಾತಗಳಿಗೆ ಕಾರಣ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಮನವಿ

ಹನೂರು: ತಾಲ್ಲೂಕಿನ ನರೀಪುರದಿಂದ ಹನೂರು ಪಟ್ಟಣದವರೆಗೆ ಕೆಶಿಫ್ ಯೋಜನೆಯಡಿ ನೂತನವಾಗಿ ನಿರ್ಮಾಣವಾಗಿರುವ ರಾಜ್ಯ ಹೆದ್ದಾರಿಯಲ್ಲಿ ಅಪಘಾತಗಳ ಪ್ರಮಾಣ ಹೆಚ್ಚುತ್ತಿದ್ದು, ವಾಹನ ಸವಾರರು ಜೀವ ಕಳೆದುಕೊಳ್ಳುತ್ತಿದ್ದಾರೆ.

ಅತಿಯಾದ ವೇಗ, ಅಜಾಗರೂಕತೆಯ ಚಾಲನೆಯ ಜೊತೆಗೆ ಅಪಾಯಕಾರಿ ತಿರುವುಗಳಲ್ಲಿ ಸುರಕ್ಷತಾ ಕ್ರಮಗಳು ಇಲ್ಲದಿರುವುದು, ಎಚ್ಚರಿಕೆಯ ಫಲಕಗಳನ್ನು ಅಳವಡಿಸದಿರುವುದು ಹಾಗೂ ಅವೈಜ್ಞಾನಿಕ ಕಾಮಗಾರಿ ಅಪಘಾತಗಳಿಗೆ ಕಾರಣವಾಗುತ್ತಿವೆ ಎಂಬ ದೂರುಗಳು ವ್ಯಾಪಕವಾಗಿವೆ.

ಹನೂರು ಪಟ್ಟಣದಲ್ಲಿ ಹಾದುಹೋಗಿರುವ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಭವಿಸುತ್ತವೆ. ಹೀಗೆ ಸಂಚರಿಸುವಾಗ ನಿತ್ಯ ಅಪಘಾತಗಳು ಉಂಟಾಗುತ್ತಿದ್ದು, ಹಲವು ಸಾವು ನೋವುಗಳು ಸಂಭವಿಸುತ್ತಿವೆ.

ADVERTISEMENT

2022ರಲ್ಲಿ ಮಧುವನಹಳ್ಳಿಯಿಂದ ಹನೂರು ಪಟ್ಟಣದವರೆಗೆ ಮೊದಲ ಹಂತದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಯಿತು. ನಿಧಾನಗತಿಯಲ್ಲಿ ಸಾಗುತ್ತಾ ಹೋದ ಕಾಮಗಾರಿ ಪೂರ್ಣಗೊಂಡು ಅಂತೂ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಹೆದ್ದಾರಿ ನಿರ್ಮಾಣವಾದ ಮೇಲೆ ಅಪಘಾತಗಳ ಪ್ರಮಾಣ ಹೆಚ್ಚಾಗಿರುವುದು ವಾಹನ ಸವಾರರಲ್ಲಿ ಆತಂಕ ಉಂಟುಮಾಡಿದೆ.

ಕೊಳ್ಳೇಗಾಲ-ಬೆಂಗಳೂರು ರಸ್ತೆಯಿಂದ ಕೆಶಿಫ್ ಯೋಜನೆಯಡಿ ಹೊಸದಾಗಿ ನಿರ್ಮಾಣವಾಗಿರುವ ನರೀಪುರ-ಮಧುವನಹಳ್ಳಿ ಬೈಪಾಸ ರಸ್ತೆ ಹಾಗೂ ಮಧುವನಹಳ್ಳಿಯಿಂದ ಹನೂರು ಪಟ್ಟಣದವರೆಗೆ ನಿರ್ಮಾಣವಾಗಿರುವ ರಾಜ್ಯ ಹೆದ್ದಾರಿ 69 ಹಲವು ಗ್ರಾಮಗಳ ಮೇಲೆ ಹಾದುಹೋಗುತ್ತದೆ. ಹೆದ್ದಾರಿ ಬದಿಯಲ್ಲೇ ಉದ್ದಕ್ಕೂ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ವಾಣಿಜ್ಯ ಮಳಿಗೆಗಳು ಇವೆ. 

ಹೆದ್ದಾರಿ ಸಾಗುವ ಮಾರ್ಗದುದ್ದಕ್ಕೂ ಹಳ್ಳಿಗಳು ಹೆಚ್ಚಾಗಿರುವುದರಿಂದ ಹೆಚ್ಚು ವಾಹನಗಳ ದಟ್ಟಣೆ ಇದೆ. ಗ್ರಾಮಗಳಿಂದ ಹೆದ್ದಾರಿ ಸಂಪರ್ಕಿಸುವ ಕಡೆಗಳಲ್ಲಿ ಸಮರ್ಪಕವಾಗಿ ಎಚ್ಚರಿಕೆಯ ಫಲಕಗಳು ಇಲ್ಲದಿರುವುದು ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ದೂರುತ್ತಾರೆ ಗ್ರಾಮಸ್ಥರು. ಹೆದ್ದಾರಿಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. 

ಅಪಘಾತ ವಲಯಗಳು: ಮಧುವನಹಳ್ಳಿ ಹೊರವಲಯದಲ್ಲಿರುವ ಬೈಪಾಸ್ ರಸ್ತೆಯು ಹನೂರು, ಕೊಳ್ಳೇಗಾಲ, ಲೊಕ್ಕನಹಳ್ಳಿ ಹಾಗೂ ಬೆಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದಲ್ಲಿ ಅಪಾಯಕಾರಿ ತಿರುವುಗಳು ಇರುವುದರಿಂದ ವೇಗವಾಗಿ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಜಮೀನುಗಳಿಗೆ ನುಗ್ಗುತ್ತಿವೆ. ಹಲವು ವಾಹನಗಳು ವಾಣಿಜ್ಯ ಮಳಿಗೆಗಳಿಗೆ ಡಿಕ್ಕಿಯಾಗಿವೆ.

ದೊಡ್ಡಿಂದುವಾಡಿಯಲ್ಲಿರುವ ಸರ್ಕಲ್‌ನಲ್ಲಿ ನಾಲ್ಕು ದಿಕ್ಕಿಗೂ ರಸ್ತೆ ಇದ್ದು, ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಅಪಘಾತವಲಯವಾಗಿಯೂ ಗುರುತಿಸಿಕೊಂಡಿರುವ ವೃತ್ತದಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸುತ್ತಾರೆ ಸ್ಥಳೀಯರು.

ಸಿಂಗಾನಲ್ಲೂರು ಗ್ರಾಮದ ಮೇಲೆ ಬೈಪಾಸ್ ರಸ್ತೆ ಹಾದುಹೋಗಿದ್ದು ಗ್ರಾಮದಿಂದ ಹೆದ್ದಾರಿಗೆ ಬರುವ ವಾಹನಗಳು ಅಪಾಘತಕ್ಕೀಡಾಗುತ್ತಿವೆ. ಮುಖ್ಯ ರಸ್ತೆಯಿಂದ ಗ್ರಾಮಗಳ ಕಡೆಗೆ ಹೋಗುವಾಗಲೂ ಅಪಘಾತಗಳಾಗಿ ಸಾವು ಸಂಭವಿಸುತ್ತಿವೆ. ಕಳೆದ ವರ್ಷ ಮುಖ್ಯ ರಸ್ತೆಯಿಂದ ಗ್ರಾಮದ ರಸ್ತೆಗೆ ವಾಹನ ತಿರುಗಿಸುವಾಗ ಸಂಭವಿಸಿದ ಅಪಘಾತವಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೇವರಾಜು ಸ್ಥಳದಲ್ಲೇ ಮೃತಪಟ್ಟಿದ್ದರು.

‘ಕೊಂಗರಹಳ್ಳಿಯಿಂದ ಹೋಲಿಕ್ರಾಸ್ ಆಸ್ಪತ್ರೆವರೆಗೆ ಚಾಚಿಕೊಂಡಿರುವ ರಸ್ತೆಯಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ವಾಹನಗಳು ಅತಿ ವೇಗದಲ್ಲಿ ಸಾಗುತ್ತವೆ, ರಸ್ತೆಯೂ ಅಪಾಯಕಾರಿಯಾಗಿರುವುದು ಅಪಘಾತಗಳು ಹೆಚ್ಚಾಗಲು ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಪಘಾತ ವಲಯ ಎಂಬ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸುವರು.

ಕಾಮಗೆರೆ ಗ್ರಾಮದ ಹೋಲಿಕ್ರಾಸ್ ಆಸ್ಪತ್ರೆ ಬಳಿಯ ರಸ್ತೆ ಅತ್ಯಂತ ಅಪಾಯಕಾರಿಯಾಗಿದ್ದು, ಈ ರಸ್ತೆಯಲ್ಲಿ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಹನೂರು ಗ್ರಾಮೀಣ ಭಾಗವಾಗಿರುವುದರಿಂದ ಕಾರು, ಬಸ್‌ಗಳಿಗಿಂತ ಈ ರ‌ಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರವೇ ಹೆಚ್ಚು. ನ.15ರಂದು ಒಂದೇ ದಿನ ಕಾಮಗೆರೆಯಲ್ಲಿ ಮೂರು ಅಪಘಾತಗಳಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮಂಗಲ ಗ್ರಾಮದಿಂದ ಹನೂರಿಗೆ ತೆರಳುವ ಮಾರ್ಗದಲ್ಲಿ ರಸ್ತೆಯ ಎರಡು ಕಡೆಗಳಲ್ಲಿ  ಸುರಕ್ಷತಾ ತಡೆಗೋಡೆಗಳಿಲ್ಲ. ವೇಗದಿಂದ ಬರುವ ವಾಹನಗಳು ಚಾಲಕನ ನಿಯಂತ್ರಣಕ್ಕೆ ಸಿಗದೆ ರಸ್ತೆ ಬದಿಯ ಕದಂಕಕ್ಕೆ ಉರುಳಿ ಬೀಳುತ್ತಿವೆ.

ಅಪಘಾತದಲ್ಲಿ ಕೆಲವರು ಮೃತಪಟ್ಟರೆ ಹಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಕೆಲವರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಹುಲಸುಗುಡ್ಡೆ ಹಾಗೂ ಅಗ್ನಿಶಾಮಕ ಠಾಣೆ ಮುಂಭಾಗದ ರಸ್ತೆಯೂ ಅಪಘಾತಗಳ ವಲಯವಾಗಿ ಕುಖ್ಯಾತಿ ಪಡೆದಿದೆ.

ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಸುರಕ್ಷಿತ ಚಾಲನೆಗೆ ಪೂರಕವಾದ ಸೂಚನಾ ಫಲಕಗಳು ಇಲ್ಲದಿರುವುದು ಅಪಘಾತಗಳು ಹೆಚ್ಚಾಗಲು ಕಾರಣ ಎಂಬುದು ವಾಹನ ಸವಾರರ ಆರೋಪ. ಗ್ರಾಮಗಳಿಂದ ಮುಖ್ಯ ರಸ್ತೆಗೆ ಸಂಪರ್ಕಿಸುವ ಕಡೆಗಳಲ್ಲಿ ಎಚ್ಚರಿಕೆಯ ಫಲಕಗಳು, ಹಂಪ್‌, ರಾತ್ರಿ ಸಂಚಾರಕ್ಕೆ ಅನುಕೂಲವಾಗಲು ಹೈಮಾಸ್ಟ್ ದೀಪಗಳು, ವೇಗ ನಿಯಂತ್ರಕ, ಪ್ರತಿಫಲನ ಪಟ್ಟಿಗಳು ಹೆದ್ದಾರಿ ಸ್ಪಷ್ಟವಾಗಿ ಕಾಣುವಂತೆ ಬ್ಯಾನರ್, ಫ್ಲೆಕ್ಸ್‌ಗಳ ತೆರವುಗೊಳಿಸುವಂತಹ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.

ರಾಜ್ಯ ಹೆದ್ದಾರಿಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದರೂ ಕೆಶಿಪ್ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಪಾಲಿಸಲು ಮುಂದಾಗುತ್ತಿಲ್ಲ ಎಂಬುದು ಜನರ ಆರೋಪ. ಹೆಚ್ಚು ಅಪಘಾತಗಳು ನಡೆಯುವ ಸ್ಥಳಗಳನ್ನು ಗುರುತಿಸಿ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸಿದರೆ ಅಪಘಾತಗಳ ಪ್ರಮಾಣ ತಗ್ಗಿಸಬಹುದು ಎನ್ನುತ್ತಾರೆ ಸ್ಥಳೀಯರು.

ಹನೂರು ಪಟ್ಟಣದ ಕಾಮಗೆರೆ ರಸ್ತೆ
ಮಧುವನ ಹಳ್ಳಿಯಿಂದ ಹನೂರಿಗೆ ನಿರ್ಮಾಣವಾಗಿರುವ ಬೈಪಾಸ್ ರಸ್ತೆ
ಮುಖ್ಯ ರಸ್ತೆಯಲ್ಲಿ ಸೂಚನಾ ಫಲಕ ಅಳವಡಿಸುವಂತೆ ಕೆಶಿಪ್ ಮುಖ್ಯ ಕಚೇರಿಯಿಂದ ಸಂಬಂಧಪಟ್ಟ ಏಜೆನ್ಸಿಗೆ ಪತ್ರ ಬರೆಯಲಾಗಿದೆ. ತಿಂಗಳೊಳಗೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಆಸ್ಪತ್ರೆ ಶಾಲೆ ಮುಂದೆ ಸೂಚನಾ ಫಲಕ ಅಳವಡಿಸಲಾಗುವುದು
ಅಶ್ವಥ್ ಪ್ರಸಾದ್ ಎಇಇ ಕೆಶಿಪ್

Quote -

ಏನಾಂತರೆ ರಸ್ತೆ ಸುರಕ್ಷತಾ ಸಭೆಯಲ್ಲಿ ಚರ್ಚೆ

11 ತಿಂಗಳಲ್ಲಿ 22 ಸಾವು

ಮಧುವನಹಹಳ್ಳಿಯಿಂದ ಹನೂರು ಪಟ್ಟಣದವರೆಗೆ ಚಾಚಿಕೊಂಡಿರುವ ಹೆದ್ದಾರಿಯಲ್ಲಿ ಜನವರಿಯಿಂದ ನವೆಂಬರ್‌ವರೆಗೆ 11 ತಿಂಗಳಲ್ಲಿ 39 ಅಪಘಾತ ಸಂಭವಿಸಿವೆ. 66 ಮಂದಿ ಗಾಯಗೊಂಡಿದ್ದು 22 ಜನರು ಮೃತಪಟ್ಟಿದ್ದಾರೆ. ಈ ರಸ್ತೆಯಲ್ಲಿ ಅಂತರ ರಾಜ್ಯವಾಹನಗಳು ಹೆಚ್ಚು ಸಂಚರಿಸುತ್ತವೆ. ಅಮಾವಾಸ್ಯೆ ಹಾಗೂ ವಿಶೇಷ ದಿನಗಳಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ವಾಹನಗಳು ಇದೇ ರಸ್ತೆಯ ಮೂಲಕ ಮಲೆ ಮಹದೇಶ್ವರ ಸನ್ನಿಧಿಗೆ ತೆರಳುತ್ತವೆ. ಇನ್ನೂ ಎರಡು ವರ್ಷದ ಅವಧಿಯಲ್ಲಿ ಕಾಮಗೆರೆ ಗ್ರಾಮದ ಹೋಲಿಕ್ರಾಸ್ ಆಸ್ಪತ್ರೆ ಬಳಿ 12 ಅಪಘಾತಗಳು ಸಂಭವಿಸಿದ್ದು 6 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.