
ಚಾಮರಾಜನಗರ: ಕರ್ನಾಟಕ ಪ್ರವಾಸೋದ್ಯಮ ನೀತಿ 2024–2029ರಡಿ ಜಿಲ್ಲೆಯ 6 ನೂತನ ಪ್ರವಾಸಿ ತಾಣಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಹಳೆಯ 32 ತಾಣಗಳೊಂದಿಗೆ ಇವು ಹೆಚ್ಚುವರಿಯಾಗಿ ಸೇರಿವೆ. ಈಚೆಗೆ ರಾಜ್ಯ ಸರ್ಕಾರ ಪ್ರವಾಸೋದ್ಯಮ ನೀತಿಯಡಿ ಹೊಸ ಸೇರ್ಪಡೆಗೆ ಅವಕಾಶ ನೀಡಿತ್ತು.
ಚಾಮರಾಜನಗರ ತಾಲ್ಲೂಕಿನ ಮಂಗಲದಲ್ಲಿರುವ ಶಂಕರದೇವರ ಬೆಟ್ಟ, ಯಳಂದೂರು ತಾಲ್ಲೂಕಿನಲ್ಲಿರುವ ಹೊಂಗನೂರು ಸಮೀಪದ ಹಿರಿಕೆರೆ ಕುಂತಿಕಲ್ಲು ಮತ್ತು ಆನೆಕಲ್ಲು ಸ್ಥಳಗಳು, ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನ, ಹನೂರು ತಾಲ್ಲೂಕಿನ ಬಿಆರ್‌ಟಿ ಸಫಾರಿ (ಗುಂಡಾಲ್ ಜಲಾಶಯದ ಹತ್ತಿರ), ಅಜ್ಜಿಪುರ ಬಳಿಯ ಉಡುತೊರೆ ಜಲಾಶಯ, ಲೊಕ್ಕನಹಳ್ಳಿ ಪಿ.ಜಿ.ಪಾಳ್ಯ ಸಫಾರಿ ವಲಯವನ್ನು ಹೊಸ ಪ್ರವಾಸಿತಾಣಗಳನ್ನಾಗಿ ಗುರುತಿಸಿ ಸೇರಿಸಲಾಗಿದೆ.
ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಹಾಗೂ ಹೊಸ ರೂಪ ಕೊಡುವ ನಿಟ್ಟಿನಲ್ಲಿ 2024–2029ರ ಪ್ರವಾಸೋದ್ಯಮ ನೀತಿ ರೂಪಿಸಿ ಜಾರಿಗೆ ತರಲಾಗಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಜಾಗತಿಕ ಪ್ರವಾಸಿಗರ ಆಕರ್ಷಣೆ, ಬಂಡವಾಳ ಹೂಡಿಕೆ, ಹೆಚ್ಚು ಪರಿಚಿತವಲ್ಲದ ಪ್ರವಾಸಿತಾಣಗಳನ್ನು ಗುರುತಿಸಿ ಪ್ರವಾಸಿಗರನ್ನು ಸೆಳೆಯುವುದು, ಸ್ಥಳೀಯ ಸಂಸ್ಕೃತಿ, ಸಂಪ್ರದಾಯ, ಆಚಾರ–ವಿಚಾರ, ಆಹಾರ ಪದ್ಧತಿಗೆ ಉತ್ತೇಜನ ನೀಡುವುದು ನೂತನ ಪ್ರವಾಸೋದ್ಯಮ ನೀತಿಯ ಪ್ರಮುಖ ಉದ್ದೇಶ.
‘ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಚಾಮರಾಜನಗರ ನೈಸರ್ಗಿಕ ಹಾಗೂ ಧಾರ್ಮಿಕವಾಗಿ ಶ್ರೀಮಂತ ಜಿಲ್ಲೆ. ಹೊಸ ನೀತಿಯು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲ ತುಂಬಿ ಸರ್ವಾಂಗೀಣ ಪ್ರಗತಿಗೂ ಕಾರಣವಾಗಬಲ್ಲದು’ ಎನ್ನುವರು ಹೋಟೆಲ್ ಉದ್ಯಮಿ ರೋಹನ್.
ಹಳೆಯ ತಾಣಗಳು:
ಚಾಮರಾಜನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಚಾಮರಾಜೇಶ್ವರ ದೇವಸ್ಥಾನ ಕನಕಗಿರಿ ಶ್ರೀಕ್ಷೇತ್ರ, ಚಿಕ್ಕಹೊಳೆ ಜಲಾಶಯ, ಕರಿವರದರಾಜಸ್ವಾಮಿ ಬೆಟ್ಟ, ಸುವರ್ಣಾವತಿ ಜಲಾಶಯ, ಹೊನ್ನಮೇಟಿ ಅತ್ತಿಖಾನೆ, ನರಸಮಂಗಲ ರಾಮೇಶ್ವರ ದೇವಸ್ಥಾನ, ಚನ್ನಪ್ಪನಪುರದ ವೀರಭದ್ರೇಶ್ವರ ದೇವಸ್ಥಾನಗಳನ್ನು ಪ್ರವಾಸಿ ತಾಣಗಳಾಗಿ ಗುರುತಿಸಲಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಕ್ಷೇತ್ರದ ಸಫಾರಿ ವಲಯ, ಹುಲುಗನಮರಡಿ ವೆಂಕಟರಮಣಸ್ವಾಮಿ ದೇವಸ್ಥಾನ, ತ್ರಯಂಭಕಪುರದ ತ್ರಯಂಭಕೇಶ್ವರ ದೇವಸ್ಥಾನ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಲಕ್ಷ್ಮೀ ವರದರಾಜ ಸ್ವಾಮಿ ದೇವಸ್ಥಾನ, ವಿಜಯ ನಾರಾಯಣ ಸ್ವಾಮಿ ದೇವಸ್ಥಾನ, ಒಣಕನಪುರದ ಓಂಕಾರೇಶ್ವರ ದೇವಸ್ಥಾನ, ಪಾರ್ವತಿಬೆಟ್ಟ ಪ್ರವಾಸಿ ಕ್ಷೇತ್ರಗಳಿವೆ.
ಯಳಂದೂರು ತಾಲ್ಲೂಕಿನಲ್ಲಿ ಬಳೆ ಮಂಟಪ, ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ, ಕ್ಯಾತದೇವರ ಗುಡಿ (ಕೆ.ಗುಡಿ), ದಿವಾನ್ ಪೂರ್ಣಯ್ಯ ಮ್ಯೂಸಿಯಂ ಇದ್ದರೆ, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಮರಡಿಗುಡ್ಡ, ಹನೂರು ತಾಲ್ಲೂಕಿನಲ್ಲಿ ಮಲೆ ಮಹದೇಶ್ವರ ಬೆಟ್ಟ, ದೇವಸ್ಥಾನ, ಒಡೆಯರ ಪಾಳ್ಯ ಟಿಬೇಟಿಯನ್ ಕ್ಯಾಂಪ್, ಗುಂಡಾಲ್ ಜಲಾಶಯ, ಹೊಗೇನಕಲ್ ಫಾಲ್ಸ್, ಭರಚುಕ್ಕಿ ಜಲಾಶಯ, ಹಜರತ್ ಅಲಿ ದರ್ಗಾ, ವೆಸ್ಲೆ ಸೇತುವೆ, ಮಧ್ಯರಂಗನಾಥಸ್ವಾಮಿ ದೇವಸ್ಥಾನ, ಚಕ್ರಾಂಕಿತ ಪ್ರಸನ್ನ ಮೀನಾಕ್ಷಿ ಮತ್ತು ಸೋಮೇಶ್ವರ ದೇವಸ್ಥಾನ, ಶಿವನಸಮುದ್ರ ಮಾರಮ್ಮ ದೇವಸ್ಥಾನಗಳಿವೆ.
ಅಧಿಕಾರಿಗಳ ಯಡವಟ್ಟು
ರಾಜ್ಯ ಸರ್ಕಾರದ ನೂತನ ಪ್ರವಾಸೋದ್ಯಮ ನೀತಿಯಡಿ ಈಚೆಗೆ ಬಿಡುಗಡೆಯಾದ ಜಿಲ್ಲಾವಾರು ಪ್ರವಾಸಿತಾಣಗಳ ಪಟ್ಟಿಯಲ್ಲಿ ಚಾಮರಾಜನಗರ ಜಿಲ್ಲೆಯ ಹಳೆಯ ಪ್ರವಾಸಿ ತಾಣಗಳನ್ನು ಕೈಬಿಟ್ಟು ಹೊಸ ತಾಣಗಳನ್ನು ಮಾತ್ರ ಸೇರ್ಪಡೆಗೊಳಿಸಲಾಗಿದೆ. ಪಟ್ಟಿಯ ಪ್ರಕಾರ ರಾಜ್ಯದಲ್ಲೇ ಅತಿ ಕಡಿಮೆ ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆ ಚಾಮರಾಜನಗರವಾದರೆ (ಕೇವಲ 6) ಅತಿ ಹೆಚ್ಚು ತಾಣಗಳನ್ನು ಹೊಂದಿರುವ ಜಿಲ್ಲೆ ಮಂಡ್ಯ (106). ಅಧಿಕಾರಿಗಳ ನಡುವಿನ ಸಂವಹನ ಸಮಸ್ಯೆಯಿಂದ ದೋಷಪೂರಿತ ಪಟ್ಟಿ ಪ್ರಕಟವಾಗಿದೆ.
‘ಪರಿಷ್ಕೃತ ಪಟ್ಟಿ ಸಲ್ಲಿಕೆ’
‘ಜಿಲ್ಲೆಯಲ್ಲಿರುವ ಹೊಸ ಪ್ರವಾಸಿ ತಾಣಗಳನ್ನು ಗುರುತಿಸುವಂತೆ ಹಿರಿಯ ಅಧಿಕಾರಿಗಳಿಂದ ನಿರ್ದೇಶನ ಬಂದ ಹಿನ್ನೆಲೆಯಲ್ಲಿ 6 ಹೊಸ ತಾಣಗಳನ್ನು ಗುರುತಿಸಿ ಪಟ್ಟಿ ಸಲ್ಲಿಸಲಾಗಿತ್ತು. ಜಿಲ್ಲಾವಾರು ಪಟ್ಟಿ ಬಿಡುಗಡೆಯಾದಾಗ ಜಿಲ್ಲೆಯ ಹಳೆಯ 32 ತಾಣಗಳು ಇರಲಿಲ್ಲ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಹಳೆಯ 32 ಹಾಗೂ ಹೊಸ 6 ಪ್ರವಾಸಿತಾಣಗಳ ಪರಿಷ್ಕೃತ ಪಟ್ಟಿಯನ್ನು ಸಲ್ಲಿಸಲಾಗಿದ್ದು ಪಟ್ಟಿಯಲ್ಲಿ ಸೇರ್ಪಡೆಯಾಗಲಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ತಮಣಗೌಡ ಪಾಟೀಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.