ADVERTISEMENT

ಕೊಳ್ಳೇಗಾಲ: ಸಾಮಂದಗೇರಿ, ಕಸ ವಿಲೇವಾರಿ ಅಸಮರ್ಪಕ

7ನೇ ವಾರ್ಡ್‌ನಲ್ಲಿ ಹಲವು ಸಮಸ್ಯೆ, ಹಾಳಾದ ಮುಖ್ಯರಸ್ತೆ

ಅವಿನ್ ಪ್ರಕಾಶ್
Published 21 ಸೆಪ್ಟೆಂಬರ್ 2022, 19:30 IST
Last Updated 21 ಸೆಪ್ಟೆಂಬರ್ 2022, 19:30 IST
ವಕೀಲ ರಾಮಯ್ಯ ಬಡಾವಣೆಯ ಪೀಸ್ ಪಾರ್ಕ ರಸ್ತೆ ಹದಗೆಟ್ಟಿರುವುದು
ವಕೀಲ ರಾಮಯ್ಯ ಬಡಾವಣೆಯ ಪೀಸ್ ಪಾರ್ಕ ರಸ್ತೆ ಹದಗೆಟ್ಟಿರುವುದು   

ಕೊಳ್ಳೇಗಾಲ: ಇಲ್ಲಿನ ನಗರಸಭೆಯ 7ನೇ ವಾರ್ಡ್ ವ್ಯಾಪ್ತಿಗೆ ಬರುವ ಸಾಮಂದಗೇರಿ, ವಕೀಲ ರಾಮಯ್ಯ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದ್ದು ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ.

ಈ ವಾರ್ಡ್‍ನಿಂದ ಆಯ್ಕೆಯಾಗಿದ್ದ ನಾಸೀರ್ ಶರೀಫ್ ಅವರ ಸದಸ್ಯತ್ವ ಪಕ್ಷದ ವಿಪ್ ಉಲ್ಲಂಘನೆ ಪ್ರಕರಣದಲ್ಲಿ ಅನರ್ಹಗೊಂಡಿದೆ.

ಬಡಾವಣೆಯಲ್ಲಿ 700ಕ್ಕೂ ಹೆಚ್ಚು ಕುಟುಂಬಗಳಿದ್ದು 2,200 ಮಂದಿ ವಾಸವಿದ್ದಾರೆ. ವಾರ್ಡ್‍ನಲ್ಲಿ ಮಧ್ಯಮ ಬಡವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ, ಲಿಂಗಾಯತ, ಬ್ರಾಹ್ಮಣ, ಶೆಟ್ಟರು, ವಿಶ್ವಕರ್ಮರು, ನಾಯಕ ಸಮುದಾಯವರು ಇದ್ದಾರೆ.

ADVERTISEMENT

‘ವಾರ್ಡ್‍ನ ಕೆಲವು ಅಡ್ಡ ರಸ್ತೆಗಳು ಮತ್ತು ಚರಂಡಿಗಳು ಉತ್ತಮವಾಗಿವೆ. ಮುಖ್ಯ ರಸ್ತೆಗಳು ಅಭಿವೃದ್ದಿಯಾಗಿಲ್ಲ. ಶಾಸಕರು ರಸ್ತೆ ಅಭಿವೃದ್ದಿಗೆ ಹಣವನ್ನು ಹಾಕಿದ್ದಾರೆ. ಈಗ ರಸ್ತೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ ಎಂದು ವಾರ್ಡ್‌ನ ಮಾಜಿ ಸದಸ್ಯರು ಹೇಳುತ್ತಾರೆ. ಬೀದಿ ದೀಪಗಳ ಕೊರತೆ ಇದೆ. ಜೊತೆಗೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಇದನ್ನು ಮೊದಲು ತಪ್ಪಿಸಬೇಕು’ ಎಂದು ಹೇಳುತ್ತಾರೆ ನಿವಾಸಿಗಳು.

ಕಸದ ರಾಶಿಗಳು: ವಾರ್ಡ್‍ನಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಅಲ್ಲಲ್ಲಿ ಕಾಣುವ ಕಸದ ರಾಶಿ ಇದನ್ನು ಸಾರಿ ಹೇಳುತ್ತವೆ.

ನಗರಸಭೆ ಸಿಬ್ಬಂದಿ ಕಸ ಸಂಗ್ರಹಿಸಲು ಬರುತ್ತಾರೆ. ಹಾಗಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳು ರಾರಾಜಿಸುತ್ತಿರುತ್ತವೆ.

‘ವಾರ್ಡ್‍ನಲ್ಲಿ ನಗರಸಭೆಯವರು ಸರಿಯಾಗಿ ಕಸ ತೆಗೆಯುವುದಿಲ್ಲ’ ಎಂದು ನಿವಾಸಿ ರಾಜು ದೂರಿದರು.

‘ರಸ್ತೆಯ ತಿರುವುಗಳಲ್ಲಿ ಜನರು ಕಸ ಹಾಕುತ್ತಾರೆ. ನಗರಸಭೆಯವರು ಕಸವನ್ನು ತೆರವು ಮಾಡುವುದಿಲ್ಲವೇನೋ ಎಂಬಂತಹ ಪರಿಸ್ಥಿತಿ ಇದೆ. ಆಯುಕ್ತರನ್ನು ಕೇಳಿದರೆ ಪ್ರತಿನಿತ್ಯ ಕಸ ತೆಗೆಯುತ್ತೇವೆ ಎಂದು ಹೇಳುತ್ತಾರೆ. ಬಡಾವಣೆಯಲ್ಲಿ ಕೇಳಿದರೆ ಸರಿಯಾಗಿ ಬರುವುದಿಲ್ಲ ಎಂದು ಹೇಳುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿದ್ದಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ’ ಎಂದು ನಿವಾಸಿ ಮಹಮದ್ ಅಯಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕುಡುಕರ ಹಾವಳಿ: ಈ ಬಡಾವಣೆಯಲ್ಲಿ ಉದ್ಯಾನ ಇದೆ. ತಕ್ಕ ಮಟ್ಟಿಗೆ ಚೆನ್ನಾಗಿದೆ. ಆದರೆ, ಸಂಜೆಯಾಗುತ್ತಲೇ ಉದ್ಯಾನದಲ್ಲಿ ಮದ್ಯ ವ್ಯಸನಿಗಳ ಕುಳಿತಿರುತ್ತಾರೆ. ಮದ್ಯ ಸೇವನೆಯನ್ನೂ ಮಾಡುತ್ತಾರೆ. ಬಾಟಲಿಗಳನ್ನು ಒಡೆದು ಹಾಕುತ್ತಾರೆ. ಬೆಳಗ್ಗೆ ಬರುವ ವಾಯುವಿಹಾರಿಗಳಿಗೆ ನಿತ್ಯವೂ ಇದರಿಂದ ತೊಂದರೆಗೀಡಾಗುತ್ತಿದ್ದಾರೆ. ಉದ್ಯಾನದ ಸುತ್ತ ಲಾರಿಗಳನ್ನು ನಿಲ್ಲಿಸಲಾಗುತ್ತಿದೆ. ಇದು ಕೂಡ ಇಲ್ಲಿಗೆ ಬರುವ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

‘ನಿತ್ಯವೂ ಕಸ ಸಂಗ್ರಹ’

ವಾರ್ಡ್‌ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ನಗರಸಭೆ ಆಯುಕ್ತ ಸಂಜುಂಡಸ್ವಾಮಿ, ‘ಕಸವನ್ನು ನಿತ್ಯವೂ ಸಂಗ್ರಹಿಸುತ್ತೇವೆ. ಪೌರ ಕಾರ್ಮಿಕರು ರಜೆ ಹಾಕಿದರೆ ಮಾತ್ರ ಕಸ ಸಂಗ್ರಹಕ್ಕೆ ಸ್ವಲ್ಪ ತೊಂದರೆಯಾಗುತ್ತದೆ. ಉದ್ಯಾನದಲ್ಲಿ ಮದ್ಯ ವ್ಯಸನಿಗಳ ಹಾವಳಿ ಇರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.