ADVERTISEMENT

ನಿರಾಣಿ ಕುರಿತ ಈಶ್ವರಪ್ಪ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 12:09 IST
Last Updated 1 ಡಿಸೆಂಬರ್ 2021, 12:09 IST
ಬಿ.ವೈ.ವಿಜಯೇಂದ್ರ (ಸಂಗ್ರಹ ಚಿತ್ರ)
ಬಿ.ವೈ.ವಿಜಯೇಂದ್ರ (ಸಂಗ್ರಹ ಚಿತ್ರ)   

ಚಾಮರಾಜನಗರ: ‘ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆಯೇ ವಿನಾ, ಈ ಅವಧಿಯಲ್ಲಿ ಅಲ್ಲ. ಈಶ್ವರಪ್ಪ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬುಧವಾರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಅವಧಿ ಮುಗಿದ ಮೇಲೆ ಸಿ.ಎಂ ಆಗುವ ಅವಕಾಶಗಳಿವೆ ಎಂದು ಹೇಳಿದ್ದಾರೆ. ವಿರೋಧ ಪಕ್ಷಗಳು ಜನರನ್ನು ದಿಕ್ಕು ತಪ್ಪಿಸುತ್ತಿದ್ದು,ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರ ಸುಭದ್ರವಾಗಿದೆ.ಬೊಮ್ಮಾಯಿ ಅವರು ಅವಧಿ ಪೂರೈಸಲಿದ್ದಾರೆ’ ಎಂದರು.

‘ವಿಧಾನಪರಿಷತ್‌ಗೆ ಚುನಾವಣೆ ನಡೆಯಲಿರುವ 25 ಕ್ಷೇತ್ರಗಳ ಪೈಕಿ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ.ನಾವು ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಅಭಿವೃದ್ಧಿಯ ವಿಚಾರ ಇಟ್ಟಕೊಂಡು ಪ್ರಚಾರ ಮಾಡುತ್ತಿದ್ದೇವೆ.ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ಈಗಿನ ಸಿ.ಎಂ ಬೊಮ್ಮಾಯಿ ಸರ್ಕಾರದ ಸಾಧನೆ, ಕಾರ್ಯಕ್ರಮಗಳ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ.ಕಾಂಗ್ರೆಸ್‌ಗೆ ಮತ ಕೇಳಲು ಯಾವ ಸಾಧನೆಯೂ ಇಲ್ಲ’ ಎಂದು ಉತ್ತರಿಸಿದರು.

ಹೈಕಮಾಂಡ್‌ ನಿರ್ಧಾರ: ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ‘ಪಕ್ಷ ನನಗೆ ಎಲ್ಲಿ ಟಿಕೆಟ್‌ ನೀಡಿದರೂ ಸ್ಪರ್ಧಿಸುತ್ತೇನೆ. ಎಲ್ಲಿ ಅವಕಾಶ ಕೊಟ್ಟರೂ ಸ್ಪರ್ಧಿಸುವ ಆಸೆ ಇದೆ. ಆದರೆ ನಾನು ಸ್ಪರ್ಧಿಸುವ ಬಗ್ಗೆ ಹಾಗೂ ಎಲ್ಲಿ ನಿಲ್ಲಬೇಕು ಎಂಬುದನ್ನು ಪಕ್ಷದ ಹೈಕಮಾಂಡ್‌ ನಿರ್ಧರಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.