ADVERTISEMENT

ಬಂಡೀಪುರ: ಸಫಾರಿಯ ಮಜಾ ಅನುಭವಿಸಿದ ಪ್ರವಾಸಿಗರು

ವಾರಾಂತ್ಯ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:57 IST
Last Updated 1 ಜೂನ್ 2025, 15:57 IST
ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಾನುವಾರ ಕಂಡು ಬಂದ ಪ್ರವಾಸಿಗರು
ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಾನುವಾರ ಕಂಡು ಬಂದ ಪ್ರವಾಸಿಗರು   

ಗುಂಡ್ಲುಪೇಟೆ: ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂಡೀಪುರ ಸಫಾರಿಯಲ್ಲಿ ಹೆಚ್ಚಿನ ಪ್ರವಾಸಿಗರು ಕಂಡುಬಂದರು.

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಭಕ್ತರು ಹಾಗು ಪ್ರವಾಸಿಗರು ಹೆಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಬೆಟ್ಟಕ್ಕೆ ತೆರಳಲು ತಪ್ಪಲಿನಿಂದ ಕೆಎಸ್‌ಆರ್‌ಟಿಸಿ ವತಿಯಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರುಗಳು, ಮಿನಿ ಟೆಂಪೊ, ಖಾಸಗಿ ಬಸ್ ಇತರೆ ವಾಹನಗಳಲ್ಲಿ ಆಗಮಿಸಿದ ಪ್ರವಾಸಿಗರಿಗೆ ಗೇಟ್‌ನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಜನ ಜಂಗುಳಿ ಹೆಚ್ಚಿದ್ದ ಕಾರಣ ಭಕ್ತರು ಹಾಗು ಪ್ರವಾಸಿಗರು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿ ಬೆಟ್ಟಕ್ಕೆ ಹೋದರು.

ಮಧ್ಯಾಹ್ನದ ವೇಳೆಗೆ ಜನರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ ಕಾರಣ ದೇವಸ್ಥಾನದ ಸುತ್ತಲು ಸರದಿಸಾಲಿನಲ್ಲಿ ನಿಂತ ಭಕ್ತರು ಗೋಪಾಲನ ದರ್ಶನ ಪಡೆದರು. ಆಗಾಗ್ಗೆ ಹಿಮ ಬಂದು ಹೋಗುತ್ತಿದ್ದ ಕಾರಣ ಜನರು ಚಳಿಯಲ್ಲಿಯೂ ಕೂಡ ಫೊಟೊ ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ದೇವಸ್ಥಾನದ ವತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ADVERTISEMENT

ಬಂಡೀಪುರ ಸಫಾರಿ ರಶ್: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದ ಸಫಾರಿಗೆ ವಾರಾಂತ್ಯದ ರಜೆ ಕಾರಣ ಅಧಿಕ ಮಂದಿ ಪ್ರವಾಸಿಗರು ಆಗಮಿಸಿದ್ದರು. ಸಫಾರಿ ಬೆಳಿಗ್ಗೆ ಮತ್ತು ಸಂಜೆ ಸಫಾರಿ ಆರಂಭವಾಗುವ ಮುಂಚೆಯೇ ಪ್ರವಾಸಿಗರು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀಸಿದರು. ಇದರಿಂದ ಸಫಾರಿ ಕೇಂದ್ರದ ಮುಂದೆ ಕಾರುಗಳು ಸಾಲುಗಟ್ಟಿ ನಿಂತಿದ್ದವು. ಅಭಯಾರಣ್ಯಕ್ಕೆ ಸಮೃದ್ಧ ಮಳೆಯಾಗಿರುವ ಹಿನ್ನೆಲೆಯಲ್ಲಿ ಸಫಾರಿ ವೇಳೆ ಪ್ರವಾಸಿಗರಿಗೆ ನವಿಲು, ಜಿಂಕೆ, ಕಾಡಾನೆ, ಕಡವೆ, ಹುಲಿ, ಚಿರತೆ ಸೇರಿದಂತೆ ಇತರೆ ವನ್ಯಪ್ರಾಣಿಗಳನ್ನು ಕಂಡು ಬಂದವು ಎಂದು ಪ್ರವಾಸಿಗರಾದ ರವಿ ಜಿ.ಆರ್, ಹರೀಶ್.ವಿ ತಿಳಿಸಿದರು.

ರಜೆ ಕಾರಣದಿಂದ ಹೆಚ್ಚಿನ ಪ್ರವಾಸಿಗರು ಸಫಾರಿಗೆ ಬರುತ್ತಿದ್ದಾರೆ. ಎಲ್ಲರಿಗೂ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಎಸಿಎಫ್ ನವೀನ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.