ADVERTISEMENT

'ಮೈತ್ರಿ‘ ಕಪ್: ಯೋಜನೆಗೆ ಬಿಳಿಗಿರಿರಂಗನಬೆಟ್ಟದಲ್ಲಿ ಚಾಲನೆ

ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆ, ದಕ್ಷಿಣ ಕನ್ನಡ, ಚಾಮರಾಜನಗರದಲ್ಲಿ ಪ್ರಾಯೋಗಿಕವಾಗಿ ಜಾರಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 3:47 IST
Last Updated 5 ಜುಲೈ 2022, 3:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ, ಹದಿಹರೆಯದ ಹೆಣ್ಣುಮಕ್ಕಳಿಗೆ ಮೆನ್‌ಸ್ಟ್ರುವಲ್‌ ಕಪ್‌ (ಮುಟ್ಟಿನ ಕಪ್‌) ವಿತರಿಸುವ ಯೋಜನೆಗೆ ಜಿಲ್ಲೆಯಲ್ಲಿ ಬುಧವಾರ (ಜುಲೈ 6) ಚಾಲನೆ ಸಿಗಲಿದೆ.

ಮಧ್ಯಪ್ರದೇಶದ ಮಾದರಿಯಲ್ಲಿ ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್‌ ವಿತರಿಸುವ ಯೋಜನೆಯನ್ನು ಪ್ರಾಯೋಗಿಕವಾಗಿ ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ ಭಾಷಣದಲ್ಲಿ ಘೋಷಿಸಿದ್ದರು.

ಈ ಯೋಜನೆಗೆ ‘ಮೈತ್ರಿ’ ಕಪ್‌ ಎಂದು ಹೆಸರಿಡಲಾಗಿದ್ದು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರುಬುಧವಾರ ಜಿಲ್ಲೆಯ ಬಿಳಿಗಿರಿರಂಗಬೆಟ್ಟದಲ್ಲಿ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಸರ್ಕಾರದ ಶುಚಿ ಕಾರ್ಯಕ್ರಮದ ಯೋಜನೆಯಡಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಈ ಹಿಂದಿನಿಂದಲೂ ಸ್ಯಾನಿಟರಿ ನ್ಯಾಪ್‍ಕಿನ್‌ಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಈ ರಾಜ್ಯಾದ್ಯಂತ 19 ಲಕ್ಷ ಹೆಣ್ಣು ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತಿವರ್ಷ ಸರಾಸರಿ 2.23 ಕೋಟಿ ಸ್ಯಾನಿಟರಿ ನ್ಯಾಪ್‍ಕಿನ್‌ಗಳನ್ನು ವಿತರಿಸಲಾಗುತ್ತಿದೆ.

ಕಾರ್ಯಕ್ರಮದ ಮುಂದುವರಿದ ಹೆಜ್ಜೆಯಾಗಿ, ನೂತನ ಹಾಗೂ ಪರಿಸರ ಸ್ನೇಹಿ ಮುಟ್ಟಿನ ಕಪ್‌ ಅನ್ನು ಹೆಣ್ಣು ಮಕ್ಕಳಿಗೆ ವಿತರಿಸಲಾಗುತ್ತಿದೆ. ಇದನ್ನು ಮರುಬಳಕೆ ಮಾಡಬಹುದಾಗಿದೆ.

ಎಲ್ಲ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ನೋಂದಾಯಿತ 16 ರಿಂದ 18 ವರ್ಷ ವಯಸ್ಸಿನ ಹದಿಹರೆಯದ ಹೆಣ್ಣುಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದು,ಎರಡೂ ಜಿಲ್ಲೆಗಳಲ್ಲಿ10 ಸಾವಿರ ಫಲಾನುಭವಿಗಳಿಗೆ ವಿತರಿಸುವ ಗುರಿ ಹೊಂದಲಾಗಿದೆ.

‘ಮೈತ್ರಿ ಮುಟ್ಟಿನ ಕಪ್ ಅನ್ನು ವೈದ್ಯಕೀಯ ದರ್ಜೆಯ ಸಿಲಿಕಾನ್‍ನಿಂದ ಮಾಡಲಾಗಿದ್ದು, ಸುರಕ್ಷಿತವಾಗಿದೆ. ಮುಟ್ಟಿನ ಸಮಯದಲ್ಲಿನ ನೈರ್ಮಲ್ಯ ಕಾಪಾಡಲು ಬಳಸಬಹುದಾದಂತಹ ಹಾಗೂ ಸ್ಯಾನಿಟರಿ ಪ್ಯಾಡ್‍ಗಳ ಪರ್ಯಾಯ ಸಾಧನ’ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

10 ವರ್ಷಗಳವರೆಗೆ ಮರುಬಳಕೆ ಸಾಧ್ಯ

ವಯಸ್ಸಿಗೆ ಅನುಗುಣವಾಗಿ ಈ ಸಾಧನವು ಹದಿಹರೆಯದ ಹೆಣ್ಣು ಮಕ್ಕಳ ಹಾಗೂ ಮಹಿಳೆಯರು ಸುಲಭವಾಗಿ ಬಳಸಬಹುದು. ವಾಡಿಕೆಯಂತೆ ಬಳಸಲಾಗುವ ಸ್ಯಾನಿಟರಿ ಪ್ಯಾಡ್ ಹಾಗೂ ಟ್ಯಾಂಪೂನ್‍ಗಳಿಗಿಂತಲೂ ಇದು ಪರಿಣಾಮಕಾರಿ ಹಾಗೂ ಕಲಿಕಾ ವಾತಾವರಣದಲ್ಲಿ ಬಳಕೆಗೆ ಅನುಕೂಲ. ಈ ಕಪ್‌ಗಳನ್ನು ಅಧಿಕ ಸಮಯದವರೆಗೆ ಅಂದರೆ 8 ರಿಂದ 12 ಗಂಟೆಗಳ ಅವಧಿಯವರೆಗೆ ಬಳಸಬಹುದು. ಸಮರ್ಪಕವಾಗಿ ನಿರ್ವಹಣೆ ಮಾಡಿದರೆ 8 ರಿಂದ 10 ವರ್ಷಗಳವರೆಗೆ ಸಮರ್ಥನೀಯವಾಗಿ ಮರುಬಳಕೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.