ADVERTISEMENT

ಚಾಮರಾಜನಗರ: ಚಿರತೆ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 15:45 IST
Last Updated 7 ಜನವರಿ 2021, 15:45 IST
ಹಳೇಪುರ ಗ್ರಾಮದಲ್ಲಿ ಪತ್ತೆಯಾದ ಚಿರತೆಯ ಮೃತದೇಹ
ಹಳೇಪುರ ಗ್ರಾಮದಲ್ಲಿ ಪತ್ತೆಯಾದ ಚಿರತೆಯ ಮೃತದೇಹ   

ಚಾಮರಾಜನಗರ: ತಾಲ್ಲೂಕಿನ ಹಳೇಪುರ ಗ್ರಾಮದ ಬಳಿಯ ಗಂಡು ಚಿರತೆಯೊಂದರ ಮೃತದೇಹ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ. ಹೃದಯ ಸ್ತಂಭನದಿಂದ ಅದು ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಹಳೇಪುರ ಹಾಗೂ ತಮ್ಮಡಹಳ್ಳಿಯ ಮಾರ್ಗಮಧ್ಯೆಯ ಕ್ವಾರೆಯ ಬಳಿಯಲ್ಲಿ ಮೃತದೇಹ ಕಂಡು ಬಂದಿದ್ದು, ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.ಸ್ಥಳಕ್ಕೆ ಭೇಟಿ ನೀಡಿದ ಸಿಬ್ಬಂದಿ ಪರಿಶೀಲನೆ ನಡೆಸಿದರು.

‘ಚಿರತೆಗೆ 7ರಿಂದ 8 ವರ್ಷ ವಯಸ್ಸಾಗಿದ್ದು, ದೇಹದಲ್ಲಿ ಯಾವುದೇ ಗಾಯಗಳ ಗುರುತು ಕಂಡು ಬಂದಿಲ್ಲ. ಹೃದಯ ಸ್ತಂಭನದಿಂದ ಅದು ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಬಂದಿದೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ ಕುಮಾರ್‌ ಅವರು ಹೇಳಿದ್ದಾರೆ.

ADVERTISEMENT

ಆರು ತಿಂಗಳಿಂದ ಉಪಟಳ: ಹವರೆ, ತಮ್ಮಡಹಳ್ಳಿ ಹಳೇಪುರ, ನಂಜದೇವನಪುರ, ವೀರನಪುರ ಭಾಗಗಳಲ್ಲಿ ಈ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ನಾಯಿಗಳು, ಆಡು ಕುರಿಗಳ ಮೇಲೆ ದಾಳಿ ಮಾಡಿ ಕೊಲ್ಲುತ್ತಿತ್ತು. ಇತ್ತೀಚೆಗೆ ಶನಿ ದೇವಸ್ಥಾನಕ್ಕೆ ಸೇರಿದ ಕುದುರೆಯ ಮೇಲೂ ದಾಳಿ ಮಾಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬೋನು ಇಟ್ಟು ಹೋಗುತ್ತಿದ್ದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.