ADVERTISEMENT

ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ: 3.77 ಲಕ್ಷ ಮಂದಿ ತಪಾಸಣೆ ಗುರಿ

ನ.24ರಿಂದ ಡಿ.9ರವರೆಗೆ ಜಿಲ್ಲೆಯಾದ್ಯಂತ ಕುಷ್ಠರೋಗ ಪತ್ತೆ ಅಭಿಯಾನ: ಜಿಲ್ಲಾಧಿಕಾರಿ ಶಿಲ್ಪಾ ನಾಗ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 7:49 IST
Last Updated 21 ಅಕ್ಟೋಬರ್ 2025, 7:49 IST
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ಕುಷ್ಠರೋಗ ಪತ್ತೆಹಚ್ಚುವ ಅಭಿಯಾನ, ಸಮಗ್ರ ರೋಗಗಳ ಜಿಲ್ಲಾ ಕಣ್ಗಾವಲು ಸಮನ್ವಯ ಸಮಿತಿ ಸಭೆಯಲ್ಲಿ ಆರೋಗ್ಯ ಇಲಾಖೆ ಹೊರತಂದಿರುವ ಪೋಸ್ಟರ್ ಅನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಬಿಡುಗಡೆ ಮಾಡಿದರು
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ಕುಷ್ಠರೋಗ ಪತ್ತೆಹಚ್ಚುವ ಅಭಿಯಾನ, ಸಮಗ್ರ ರೋಗಗಳ ಜಿಲ್ಲಾ ಕಣ್ಗಾವಲು ಸಮನ್ವಯ ಸಮಿತಿ ಸಭೆಯಲ್ಲಿ ಆರೋಗ್ಯ ಇಲಾಖೆ ಹೊರತಂದಿರುವ ಪೋಸ್ಟರ್ ಅನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಬಿಡುಗಡೆ ಮಾಡಿದರು   

ಚಾಮರಾಜನಗರ: ‘ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ ಎರಡನೇ ಹಂತದಲ್ಲಿ ಜಿಲ್ಲೆಯ ಆಯ್ದ ಗ್ರಾಮಗಳು ಹಾಗೂ ವಾರ್ಡ್‌ಗಳಲ್ಲಿ ನ.24ರಿಂದ ಡಿ.9ರವರೆಗೆ ನಡೆಯಲಿದ್ದು ಅಭಿಯಾನಕ್ಕೆ ಸಂಬಂಧಪಟ್ಟ ಇಲಾಖೆಗಳು ಕೈಜೋಡಿಸಬೇಕು’ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ಕುಷ್ಠರೋಗ ಪತ್ತೆಹಚ್ಚುವ ಅಭಿಯಾನ, ಸಮಗ್ರ ರೋಗಗಳ ಜಿಲ್ಲಾ ಕಣ್ಗಾವಲು ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ, ಕಳೆದ ಐದು ವರ್ಷಗಳಲ್ಲಿ ಕುಷ್ಠರೋಗ ಪ್ರಕರಣಗಳು ಕಂಡುಬಂದಿರುವ ಗ್ರಾಮಗಳು ಹಾಗೂ ವಾರ್ಡ್‌ಗಳಲ್ಲಿ ಕುಷ್ಠರೋಗ ಪತ್ತೆ ಅಭಿಯಾನ ನಡೆಸಲಾಗುತ್ತಿದೆ.

‘14 ದಿನಗಳ ಅಭಿಯಾನದಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಮನೆ–ಮನೆಗೆ ಭೇಟಿನೀಡಿ ಕುಟುಂಬ ಸದಸ್ಯರನ್ನು ತಪಾಸಣೆ ಮಾಡಲಿದ್ದಾರೆ. ರೋಗ ಲಕ್ಷಣಗಳು ಕಂಡುಬಂದು ಕುಷ್ಠರೋಗ ದೃಢಪಟ್ಟರೆ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸಲಾಗುತ್ತದೆ’ ಎಂದರು.

ADVERTISEMENT

‘ಅಭಿಯಾನದಲ್ಲಿ 316 ತಂಡಗಳು, 32 ಮೇಲ್ವಿಚಾರಕರು ಕಾರ್ಯ ನಿರ್ವಹಿಸಲಿದ್ದು, ಒಂದು ತಂಡ ದಿನಕ್ಕೆ 20 ಮನೆಗಳಂತೆ 14 ದಿನಗಳಲ್ಲಿ 88,378 ಮನೆಗಳಿಗೆ ಭೇಟಿನೀಡಿ 3,77,705 ಜನರನ್ನು ತಪಾಸಣೆ ನಡೆಸಲು ಗುರಿ ಹೊಂದಲಾಗಿದೆ. ಜನರು ಸ್ವಯಂಪ್ರೇರಿತರಾಗಿ ತಪಾಸಣೆಗೆ ಒಳಗಾಗಲು ವ್ಯಾಪಕ ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಸಮಗ್ರ ರೋಗಗಳ ಜಿಲ್ಲಾ ಕಣ್ಗಾವಲು ಹಾಗೂ ಆರೋಗ್ಯ ಇಲಾಖೆಯ ಇತರೆ ಕಾರ್ಯಕ್ರಮಗಳ ಕುರಿತು ಪರಾಮರ್ಶೆ ನಡೆಸಿದ ಜಿಲ್ಲಾಧಿಕಾರಿ ‘ಕುಡಿಯುವ ನೀರು ಹಾಗೂ ಆಹಾರದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿ ಶುದ್ದತೆ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೀರಿನ ಮೂಲಗಳಲ್ಲಿ ಶುಚಿತ್ವ ಇದೆಯೇ ಎಂದು ಪರಿಶೀಲಿಸಬೇಕು. ಜಲಮೂಲಗಳಲ್ಲಿ ನೈರ್ಮಲ್ಯ ಕಾಪಾಡಿಕೊಂಡು ಕಲುಷಿತ ನೀರು ಪೂರೈಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

ಇದೇವೇಳೆ ಕುಷ್ಠರೋಗ ಪತ್ತೆ ಅಭಿಯಾನ ಸಂಬಂಧ ಆರೋಗ್ಯ ಇಲಾಖೆಯಿಂದ ಹೊರತರಲಾಗಿರುವ ಪೋಸ್ಟರ್ ಅನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು.

ಡಿಎಚ್‌ಒ ಡಾ.ಎಸ್. ಚಿದಂಬರ, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ.ಚಂದ್ರಶೇಖರ್, ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ. ರವಿಕುಮಾರ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ. ಸುಂದರೇಶ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸುಧಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಡಾ.ತನುಜಾ, ತಾಲ್ಲೂಕು ಪಂಚಾಯಿತಿ ಇಒ ಗುರುಶಾಂತಪ್ಪ ಬೆಳ್ಳುಂಗಡಿ ಸಭೆಯಲ್ಲಿ ಇದ್ದರು.

Highlights - 14 ದಿನಗಳ ಕಾಲ ನಡೆಯುವ ಅಭಿಯಾನ 316 ತಂಡ, 32 ಮೇಲ್ವಿಚಾರಕರ ನಿಯೋಜನೆ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಸಲಹೆ

Cut-off box - ‘ಶುದ್ಧ ಕುಡಿಯುವ ನೀರು ಪೂರೈಸಿ’ ಶಾಲೆ ಅಂಗನವಾಡಿ ಹಾಸ್ಟೆಲ್‌ಗಳಲ್ಲಿ ಸ್ವಚ್ಚತೆಗೆ ಒತ್ತು ನೀಡಬೇಕು ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳಿಗೆ ಶುದ್ದ ಕುಡಿಯುವ ನೀರು ಪೂರೈಸಬೇಕು. ಕಾಯಿಸಿ ಆರಿಸಿದ ನೀರು ಅಥವಾ ಶುದ್ದ ನೀರಿನ ಘಟಕದಿಂದಲೇ ನೀರು ಒದಗಿಸಬೇಕು. ಹಾವು ನಾಯಿ ಕಡಿತ ಪ್ರಕರಣಗಳಲ್ಲಿ ತುರ್ತು ಲಸಿಕೆ ಹಾಕಿ ಔಷಧೋಪಚಾರ ಮಾಡಬೇಕು. ನಾಯಿ ಕಡಿತದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ಪಶು ಪಾಲನಾ ಇಲಾಖೆಯಿಂದ ನಾಯಿಗಳಿಗೆ ಲಸಿಕೆ ಹಾಕಬೇಕು ಲಸಿಕಾಕರಣಕ್ಕೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.