ADVERTISEMENT

ಚಾಮರಾಜನಗರ: ಹೊಸ ಕೋವಿಡ್‌ ಪ್ರಕರಣ 100ಕ್ಕಿಂತ ಕಡಿಮೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 15:27 IST
Last Updated 15 ಜೂನ್ 2021, 15:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ಅಬ್ಬರಿಸಲು ಆರಂಭವಾಗಿ ಹಲವು ವಾರಗಳ ಬಳಿಕ ಇದೇ ಮೊದಲ ಬಾರಿಗೆ ಒಂದು ದಿನದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 100ಕ್ಕಿಂತ ಕಡಿಮೆ ವರದಿಯಾಗಿದೆ.

ಮಂಗಳವಾರ 1,400 ಮಂದಿ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 1,314 ಮಂದಿಯ ವರದಿ ನೆಗೆಟಿವ್‌ ಬಂದು, 86 ಮಂದಿಗೆ ಮಾತ್ರ ಸೋಂಕು ತಗುಲಿರುವುದು ಖಚಿತವಾಗಿದೆ. ಹಳೆಯ ಏಳು ಪ್ರಕರಣಗಳು ಸೇರಿದಂತೆ 93 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಡಳಿತ ತನ್ನ ವರದಿಯಲ್ಲಿ ಹೇಳಿದೆ.

128 ಜನರು ಗುಣಮುಖರಾಗಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದು, ಇಬ್ಬರು ಕೋವಿಡ್‌ನಿಂದ ಹಾಗೂ ಉಳಿದ ಮೂವರು ಕೋವಿಡ್‌ಯೇತರ ಕಾರಣದಿಂದ ನಿಧನರಾಗಿದ್ದಾರೆ ಎಂದು ಕೋವಿಡ್‌ ಆಸ್ಪತ್ರೆಯು ವರದಿಯಲ್ಲಿ ತಿಳಿಸಿದೆ.

ADVERTISEMENT

ಸಕ್ರಿಯ ಪ್ರಕರಣಗಳ ಸಂಖ್ಯೆ 1,233ಕ್ಕೆ ಇಳಿದಿದೆ. ಈ ಪೈಕಿ 48 ಮಂದಿ ಐಸಿಯುನಲ್ಲಿದ್ದಾರೆ. 45 ಸೋಂಕಿತರು ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಕೋವಿಡ್‌ ಕೇರ್‌ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿದ್ದಾರೆ.

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 29,730ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 28 ಸಾವಿರ ದಾಟಿದೆ. ಈವರೆಗೆ 28,014 ಮಂದಿ ಸೋಂಕು ಮುಕ್ತರಾಗಿದ್ದಾರೆ.

ಗುಂಡ್ಲುಪೇಟೆಯಲ್ಲಿ ಹೆಚ್ಚು
ದೃಢಪಟ್ಟ 93 ಪ್ರಕರಣಗಳ ಪೈಕಿ ಗುಂಡ್ಲುಪೇಟೆಯಲ್ಲಿ ಅತಿ ಹೆಚ್ಚು ಅಂದರೆ 35 ಪ್ರಕರಣಗಳು ವರದಿಯಾಗಿವೆ. ಚಾಮರಾಜನಗರ ತಾಲ್ಲೂಕಿನಲ್ಲಿ 28, ಕೊಳ್ಳೇಗಾಲದಲ್ಲಿ ಒಂಬತ್ತು, ಹನೂರಿನಲ್ಲಿ 16, ಯಳಂದೂರು ತಾಲ್ಲೂಕಿನ ನಾಲ್ಕು ಹೊರ ಜಿಲ್ಲೆಯ ಒಂದು ಪ್ರಕರಣ ದೃಢಪಟ್ಟಿವೆ.

ಕೋವಿಡ್‌ ಆಸ್ಪ‍ತ್ರೆಗಳಲ್ಲಿದ್ದ 23, ಕೋವಿಡ್‌ ಕೇರ್‌ ಕೇಂದ್ರಗಳಲ್ಲಿದ್ದ 98, ಹೋಂ ಐಸೊಲೇಷನ್‌ನಲ್ಲಿದ್ದ ಏಳು ಮಂದಿ ಸೇರಿದಂತೆ 128 ಮಂದಿ ಮಂಗಳವಾರ ಗುಣಮುಖರಾಗಿದ್ದಾರೆ. ಇವರಲ್ಲಿ ಚಾಮರಾಜನಗರ ತಾಲ್ಲೂಕಿನ 54, ಗುಂಡ್ಲುಪೇಟೆಯ 20, ಕೊಳ್ಳೇಗಾಲ ಹಾಗೂ ಹನೂರಿನ ತಲಾ 22, ಯಳಂದೂರು ತಾಲ್ಲೂಕಿನ ಏಳು ಹಾಗೂ ಹೊರ ಜಿಲ್ಲೆಯ ಮೂವರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.