ಚಾಮರಾಜನಗರ: ‘ವೀರಶೈವ ಲಿಂಗಾಯತ ಸಮಾಜ ಪ್ರಬಲವಾಗಿರುವ ಜಿಲ್ಲೆಯಲ್ಲಿ ಬಸವಭವನ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದು ಬೇಸರದ ವಿಚಾರ; ಮುಂದಿನ ಬಸವ ಜಯಂತಿಯೊಳಗೆ ಸಮುದಾಯದ ಎಲ್ಲರ ಸಹಕಾರದೊಂದಿಗೆ ಬಸವ ಭವನ ಉದ್ಘಾಟನೆಯಾಗಬೇಕು’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಕರೆ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಶನಿವಾರ ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಹಮ್ಮಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರಿಗೆ ಹಾಗೂ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಸವ ಭವನ ಸಮುದಾಯದ ಆಸ್ತಿಯಾಗಿದ್ದು ಸಮಾಜಕ್ಕೆ ಬಳಕೆಯಾಗಲಿದ್ದು ಪ್ರತಿಯೊಬ್ಬರೂ ಆರ್ಥಿಕ ಸಹಕಾರ ನೀಡಬೇಕು. ಬಸವ ಭವನಕ್ಕಾಗಿ ಜಿಲ್ಲೆಯಾದ್ಯಂತ ಜೋಳಿಗೆ ಹಿಡಿಯಲು ಸಿದ್ಧ’ ಎಂದರು.
‘ವೀರಶೈವ ಲಿಂಗಾಯತ ಸಮಾಜ ಸ್ವ–ಅಭಿವೃದ್ಧಿಯಾಗಬೇಕೆ ಹೊರತು ಅನ್ಯಧರ್ಮ, ಸಮುದಾಯಗಳಿಂದ ಸಾಧ್ಯವಿಲ್ಲ. ಪರಸ್ಪರ ಒಗ್ಗಟ್ಟು, ಸಹಕಾರ, ಪ್ರೀತಿ, ವಿಶ್ವಾಸ, ಗೌರವದಿಂದ ಮುನ್ನಡೆದರೆ ಮಾತ್ರ ಅಭಿವೃದ್ಧಿ ಸಾಧ್ಯ. ಜೈನರು ಹಾಗೂ ಸಿಖ್ಖರು ಆದಾಯದ ಶೇ 10ರಷ್ಟು ಪಾಲನ್ನು ಧರ್ಮದ ಅಭಿವೃದ್ಧಿಗೆ ವಿನಿಯೋಗಿಸುತ್ತಾರೆ. ಶೆಟ್ಟರು, ಬ್ರಾಹ್ಮಣರು ಕೂಡ ಶೇ 5ರಷ್ಟು ಆದಾಯವನ್ನು ಸಮುದಾಯಗಳ ಅಭಿವೃದ್ಧಿಗೆ ನೀಡುತ್ತಾರೆ. ಹಿಂದುಳಿದಿರುವ ಮುಸ್ಲಿಮರು ಕೂಡ ವರ್ಷಕ್ಕೆ ಶೇ 2.5 ಆದಾಯವನ್ನು ಜಕಾತ್ ರೂಪದಲ್ಲಿ ಕೊಡುತ್ತಾರೆ. ಆರ್ಥಿಕ ನೆರವು ನೀಡುವ ವಿಚಾರದಲ್ಲಿ ಸಮುದಾಯ ಹಿಂದೆ ಬಿದ್ದಿರುವುದು ಉತ್ತಮ ಬೆಳವಣಿಗೆಯಲ್ಲ. ಮಹಸಾಭಾ ಪದಾಧಿಕಾರಿಗಳು ದುಡಿಮೆಯ ಶೇ 2ರಷ್ಟು, ಸಾಮಾನ್ಯರು ಶೇ 1ರಷ್ಟು ಆರ್ಥಿಕ ನೆರವು ನೀಡಬೇಕು. ಸಂಪನ್ಮೂಲ ಕ್ರೋಡೀಕರಣ ಕಾರ್ಯವನ್ನು ಆಯಾ ಜಿಲ್ಲೆಗಳ ಮಹಾಸಭಾದ ಜಿಲ್ಲಾಧ್ಯಕ್ಷರು ಕಟ್ಟುನಿಟ್ಟಾಗಿ ಮಾಡಬೇಕು’ ಎಂದು ಬಿದರಿ ಸಲಹೆ ನೀಡಿದರು.
‘ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದುವರಿಯದ ಸಮಾಜಗಳು ಎಂದಿಗೂ ಅಭಿವೃದ್ಧಿ ಹೊಂದುವುದಿಲ್ಲ. ಗೌರವವೂ ಸಿಗುವುದಿಲ್ಲ. 1998ರಲ್ಲಿ ಎಸ್.ಆರ್.ಬೊಮ್ಮಾಯಿ ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾದ ನಂತರ ಇದುವರೆಗೂ ಸಮಾಜದವರಿಗೆ ಪ್ರಾತಿನಿಧ್ಯ ದೊರೆತಿಲ್ಲ. ಬಿ.ಡಿ.ಜತ್ತಿ ಅವರ ನಂತರ ರಾಜ್ಯಪಾಲರಾಗಿಲ್ಲ. ಯುವಜನತೆ ಕೂಡ ಉನ್ನತ ಹುದ್ದೆಗಳನ್ನು ಪಡೆಯುವಲ್ಲೂ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಸಂಸ್ಕಾರದ ಕೊರತೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡದಿರುವುದು ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.
ಉಳ್ಳವರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಬೇಕು, ವಸತಿ ನಿಲಯಗಳನ್ನು ಸ್ಥಾಪಿಸಿ ವಿದ್ಯಾರ್ಥಿ ವೇತನ ಕೊಡಬೇಕು. ಧರ್ಮಸ್ಥಳದ ಸ್ವಸಹಾಯ ಸಂಘಗಳ ಮಾದರಿಯಲ್ಲಿ ಸಮುದಾಯ ಕೂಡ ಸ್ವಸಹಾಯ ಮಾಡಬೇಕು ಎಂದರು.
ಸನ್ಮಾನ:
ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅಂತರರಾಷ್ಟ್ರೀಯ ಕೊಕ್ಕೊ ಆಟಗಾರ್ತಿ ಚೈತ್ರಾ ಕುರುಬೂರು, ಸಾಹಿತಿ ಸ್ವಾಮಿ ಪೊನ್ನಾಚಿ, ಶಿಕ್ಷಕಿ ಅನಿತಾ, ಎಂ.ಪಿ.ರಾಜಣ್ಣ, ಡಾ.ಕೆ.ವಿ.ಯೋಗೇಶ್, ಕೆ.ಜಿ.ಶಶಿಕಲಾ, ಪ್ರಕಾಶ್ ಪುಟ್ಟಪ್ಪ, ಹಿನ್ನೆಲೆಗಾಯಕಿ ಶಿವಾನಿ, ಅಕ್ಕಮಹಾದೇವಿ ಮಹಿಳಾ ಭಜನಾಸಂಘದ ಸದಸ್ಯೆಯರನ್ನು ಸನ್ಮಾನಿಸಲಾಯಿತು.
ವೀರಶೈವ ಲಿಂಗಾಯತ ಸಮಾಜ ಸಂಘಟಿತರಾಗಿ ಸಹಕಾರದೊಂದಿಗೆ ಚಾಮರಾಜನಗರದಲ್ಲಿ ಬಸವ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು.–ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ
ಹರವೆ ವಿರಕ್ತಮಠದ ಸರ್ಪಭೂಷಣ ಸ್ವಾಮೀಜಿ, ಸಿದ್ದಮಲ್ಲೇಶರ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಮರಿಯಾಲ ಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಹನೂರು ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಪ್ರೊ.ಕೆ.ಆರ್.ಮಲ್ಲಿಕಾರ್ಜುಪ್ಪ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಚುಡಾ ಅಧ್ಯಕ್ಷ ಮೊಹಮ್ಮದ್ ಅಸ್ಗರ್ ಮುನ್ನ, ನಗರಸಭಾ ಅಧ್ಯಕ್ಷ ಸುರೇಶ್, ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಮಹಾಸಭಾ ಕೇಂದ್ರ ಸಮಿತಿ ಸದಸ್ಯ ಎಚ್.ಎಸ್.ಮಹದೇವಸ್ವಾಮಿ, ರಾಷ್ಟ್ರೀಯ ಸಮಿತಿ ಸದಸ್ಯೆ ರೂಪಾ ರಾಜಶೇಖರ್, ರಾಜ್ಯ ಸಮಿತಿ ಸದಸ್ಯ ಸುರೇಂದ್ರ ಇದ್ದರು.
‘ಹಿಂದುಳಿದ ಲಿಂಗಾಯತರಿಗೆ ಮೀಸಲಾತಿ ಕೊಡಿ’
ಲಿಂಗಾಯತದಿಂದ ಆರಂಭವಾಗುವ ಪಂಗಡಗಳನ್ನು 3 ‘ಬಿ’ಗೆ ಸೇರಿಸಲಾಗಿದ್ದು ಹಿಂದೂ ಪದದಿಂದ ಆರಂಭವಾಗುವ ಪಂಗಡಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಲಿಂಗಾಯತ ಕುರುಬರು ಯಳವರು ಕುಂಬಾರರು ಬಣಗಾರ ಶೆಟ್ಟಿ ಮೇದಾರ ಶಿಂಪಿ ಗಾಣಿಗ ಹೀಗೆ ಲಿಂಗಾಯತರಲ್ಲಿ ಹಿಂದುಳಿದ ಪಂಗಡಗಳನ್ನು 1 ‘ಎ’ 1 ‘ಬಿ’ 2 ‘ಎ’ ಮೀಸಲಾತಿ ಸೌಲಭ್ಯ ದೊರೆಯಬೇಕು. ಜಾತಿ ಜನಗಣತಿಯಲ್ಲಿ ಯಾವ ಜಾತಿ ಉಪಜಾತಿಯ ಹೆಸರನ್ನು ಬರೆಸಬೇಕು ಎಂದು ಮಹಾಸಭಾ ಶೀಘ್ರ ತೀರ್ಮಾನಿಸಲಿದೆ. ಲಿಂಗಾಯತ ಹಾಗೂ ವೀರಶೈವ ಎರಡೂ ಒಂದೇ. ಆದರೆ ವೀರಶೈವ ಲಿಂಗಾಯತ ಎರಡೂ ಪದಗಳು ಒಟ್ಟಿಗೆ ಬಳಸುವುದು ಬೇಡ. ಸಿದ್ಧಗಂಗಾ ಶ್ರೀಗಳ ಆಶಯದಂತೆ ಸಮಾಜ ಮುನ್ನಡೆಯಬೇಕು ಎಂದು ಶಂಕರ ಬಿದರಿ ಒತ್ತಾಯಿಸಿದರು.
ಶಾಮನೂರು ಗೈರು
ಹವಾಮಾನ ವೈಪರೀತ್ಯದ ಕಾರಣ ಹೆಲಿಕಾಪ್ಟರ್ ಹಾರಾಟ ಸಾಧ್ಯವಾಗದ ಪರಿಣಾಮ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.