ADVERTISEMENT

ಮಹಾ ಶಿವರಾತ್ರಿ ಜಾತ್ರೆ ಇಂದಿನಿಂದ

ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಮಲೆ ಮಾದಪ್ಪನ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:23 IST
Last Updated 14 ಫೆಬ್ರುವರಿ 2026, 7:23 IST
ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ನಡೆಯುತ್ತಿರುವ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಕಣ್ಮನ ಸೆಳೆಯುತ್ತಿರುವ ಸ್ವಾಗತ ಗೋಪುರ
ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ನಡೆಯುತ್ತಿರುವ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಕಣ್ಮನ ಸೆಳೆಯುತ್ತಿರುವ ಸ್ವಾಗತ ಗೋಪುರ   

ಮಹದೇಶ್ವರ ಬೆಟ್ಟ: ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾದ ಮಲೆ ಮಹದೇಶ್ವರನ ದೇವಸ್ಥಾನ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಸಿಂಗಾರಗೊಂಡಿದೆ. ‌ದೇಗುಲದ ಆವರಣ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. 

ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಉದ್ದಕ್ಕೂ ಬಣ್ಣ ಬಣ್ಣದ ಎಲ್‌ಇಡಿ ಲೈಟ್‌ಗಳ ತೋರಣ ಬಿಡಲಾಗಿದೆ. ದೇವಾಲಯದ ಗೋಪುರ, ಪ್ರಮುಖ ವೃತ್ತ, ಕಮಾನುಗಳಿಗೆ ಶಿವಲಿಂಗ ಹಾಗೂ ತ್ರಿಶೂಲ ಮಾದರಿಯ ದೀಪಗಳನ್ನು ಅಳವಡಿಸಲಾಗಿದ್ದು ಕಣ್ಮನ ಸೆಳೆಯುತ್ತಿವೆ, ಮರಗಳಿಗೆ ಸೀರಿಯಲ್ ಸೆಟ್‌ಗಳ ಅಲಂಕಾರ ಮಾಡಲಾಗಿದೆ. ಕ್ಷೇತ್ರ ಪ್ರವೇಶಿಸುವ ಮಾರ್ಗದಲ್ಲಿ ಸ್ವಾಗತ ಕಮಾನು ಅಳವಡಿಸಲಾಗಿದ್ದು ಬೆಳಕಿನ ಚಿತ್ತಾರ ಮೂಡಿದೆ.

ಫೆ.14ರಿಂದ 18ರವರೆಗೆ ನಡೆಯುವ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬರುತ್ತಿದ್ದಾರೆ. ಹರಕೆ ಹೊತ್ತ ಭಕ್ತರು ಕಾಲ್ನಡಿಗೆಯಲ್ಲಿ ಕ್ಷೇತ್ರದತ್ತ ದಾವಿಸುತ್ತಿದ್ದು ಎಲ್ಲೆಡೆ ಮಾದಪ್ಪನ ಸ್ಮರಣೆ ಅನುರಣಿಸುತ್ತಿದೆ. ಭಕ್ತರ ದಟ್ಟಣೆ ಹೆಚ್ಚಾಗಿರುವುದರಿಂದ ದೇವಸ್ಥಾನದ ಪ್ರಾಂಗಣ ಹಾಗೂ ತೆರೆದ ಜಾಗಗಳಲ್ಲಿ ಭಕ್ತರು ಬಿಡಾರ ಹೂಡಿದ್ದಾರೆ.

ADVERTISEMENT

ಶಾಸಕ ಎಂ.ಆರ್.ಮಂಜುನಾಥ್ ಶುಕ್ರವಾರ ಶಿವರಾತ್ರಿ ಜಾತ್ರಾ ಮಹೋತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದರು. ದಾಸೋಹ ಭವನಕ್ಕೆ ಭೇಟಿನೀಡಿ ಭಕ್ತರಿಗೆ ವಿತರಿಸಲು ಸಿದ್ಧಪಡಿಸಿದ್ದ ಪ್ರಸಾದದ ಗುಣಮಟ್ಟವನ್ನು ಪರಿಶೀಲಿಸಿದರು. ಜಾತ್ರೆಗೆ ಬರುವ ಭಕ್ತರಿಗೆ ಮೂಲಸೌಲಭ್ಯಗಳ ಕೊರೆತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳಲಾಗಿರುವ ಮೂಲಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿ, ಶೌಚಾಲಯ, ಕುಡಿಯುವ ನೀರು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಿಬ್ಬಂದಿಗೆ ನಿರ್ದೇಶನ ನೀಡಿದರು.

ಭಕ್ತರಿಗೆ ಸರದಿ ಸಾಲಿನಲ್ಲಿ ದರ್ಶನ ಪಡೆಯಲು ನೆರಳಿನ ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ವಿತರಣೆಗೆ ಹೆಚ್ಚುವರಿ ಲಾಡು ವಿತರಣೆ ಕೌಂಟರ್ ತೆರೆಯಲಾಗಿದೆ. ಜಾತ್ರೆಗೆ ಬರುವ ಭಕ್ತರಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತರ ದಟ್ಟಣೆ ತಡೆಗೆ ಮಹದೇಶ್ವರನ ಬೆಟ್ಟಕ್ಕೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದ್ದು ಬಸ್‌, ಕಾರು, ಹಾಗೂ ನಾಲ್ಕು ಚಕ್ರದ ವಾಹನಗಳಲ್ಲಿ ಭಕ್ತರು ಕ್ಷೇತ್ರಕ್ಕೆ ಬರುತ್ತಿದ್ದಾರೆ.

ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನಣ್ಣ, ಮುಖಂಡರಾದ ಡಿ.ಆರ್.ಮಾದೇಶ್, ಡಿ.ಕೆ.ರಾಜು, ಅಣ್ಣಯ್ಯ, ಸುರೇಶ್, ಮಂಜೇಶ್ ಗೌಡ, ಸಿದ್ದರಾಜು, ಜಯರಾಮು, ಗೋಪಾಲ್ ನಾಯಕ, ವೆಂಕಟಾಚಲ, ಎಸ್.ಆರ್.ಮಹದೇವ್, ಸತ್ತೇಗಾಲ ಮಂಜು ಇದ್ದರು.

ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಕ್ಷೇತ್ರದ ದಾಸೋಹ ಭವನಕ್ಕೆ ಭೇಟಿನೀಡಿದ ಹನೂರು ಶಾಸಕ ಎಂ.ಆರ್.ಮಂಜುನಾಥ್‌ ಸಿದ್ಧತೆಗಳನ್ನು ಪರಿಶೀಲಿಸಿದರು. 
ಮಲೆ ಮಹದೇಶ್ವರನ ದೇವಸ್ಥಾನದ ಗೋಪುರ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದು

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.