ADVERTISEMENT

ಶಿವರಾತ್ರಿ ಹಬ್ಬ: ಹೂವು ಕೊಂಚ ತುಟ್ಟಿ

ತರಕಾರಿ ಬೆಲೆ ಯಥಾಸ್ಥಿತಿ, ಸೇಬು, ದಾಳಿಂಬೆ, ಬಾಳೆಗಣ್ಣು ದುಬಾರಿ‌

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 4:01 IST
Last Updated 1 ಮಾರ್ಚ್ 2022, 4:01 IST
ಶಿವರಾತ್ರಿ ಹಬ್ಬದ ಆಚರಣೆಗಾಗಿ ಹೂವು ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು
ಶಿವರಾತ್ರಿ ಹಬ್ಬದ ಆಚರಣೆಗಾಗಿ ಹೂವು ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು   

ಚಾಮರಾಜನಗರ: ಶಿವರಾತ್ರಿ ಹಬ್ಬದ ಪರಿಣಾಮ ಹೂವಿನ ಮಾರುಕಟ್ಟೆಯ ಮೇಲೂ ಆಗಿದ್ದು, ಹೂವುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.

ನಗರಕ್ಕೆ ಸಮೀಪದ ಬಿಡಿಹೂವಿನ ಮಾರುಕಟ್ಟೆಯಲ್ಲಿ ಎರಡು ವಾರಗಳಿಂದ ಹೂವುಗಳ ಧಾರಣೆಯಲ್ಲಿ ಏರಿಕೆ ಕಂಡು ಬಂದಿತ್ತು. ಚೆಂಡು ಹೂವು ಬಿಟ್ಟು ಉಳಿದ ಎಲ್ಲಾ ಬೆಲೆ ತುಟ್ಟಿಯಾಗಿದೆ.

ಶಿವರಾತ್ರಿ ಹಬ್ಬದ ಮುನ್ನಾದಿನವಾದ ಸೋಮವಾರ ಕನಕಾಂಬರದ ಬೆಲೆ ಕೆಜಿಗೆ ₹600ರಿಂದ ₹800 ಇತ್ತು. ಕಾಕಡದ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಕಳೆದ ವಾರ ಕೆಜಿಗೆ ₹280 ಇತ್ತು. ಸೋಮವಾರ ₹500ರಿಂದ ₹600ರವರೆಗೂ ಮಾರಾಟವಾಗಿದೆ.₹120 ಇದ್ದ ಸುಗಂಧ ರಾಜ ₹200ಕ್ಕೆ ಏರಿದೆ. ಬಟನ್‌ ಗುಲಾಬಿ ಕೆಜಿಗೆ ₹200 ಆಗಿದೆ.

ADVERTISEMENT

’ಚೆಂಡು ಹೂವು ಬಿಟ್ಟು ಉಳಿದೆಲ್ಲ ಹೂವುಗಳ ಬೆಲೆ ಹೆಚ್ಚಾಗಿದೆ. ಕಾಕಡಕ್ಕೆ ಹೆಚ್ಚು ಬೇಡಿಕೆ ಇದೆ‘ ಎಂದು ಬಿಡಿಹೂವಿನ ವ್ಯಾಪಾರಿ ರವಿ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ಬಾಳೆಹಣ್ಣು ದುಬಾರಿ: ಹಬ್ಬದ ಕಾರಣಕ್ಕೆ ಹಣ್ಣುಗಳ ಪೈಕಿ ಬಾಳೆಹಣ್ಣುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.

ಹಾಪ್‌ಕಾಮ್ಸ್‌ನಲ್ಲಿ ಏಲಕ್ಕಿ ಬಾಳೆಹಣ್ಣು ಪಚ್ಚೆ ಬಾಳೆ ಬೆಲೆ ಕೆಜಿಗೆ ₹10 ಹೆಚ್ಚಾಗಿದೆ. ಏಲಕ್ಕಿ ಬಾಳೆ ಹಣ್ಣು ₹40ರಿಂದ ₹50ಕ್ಕೆ ಏರಿದ್ದರೆ, ಪಚ್ಚೆ ಬಾಳೆ ಬೆಲೆ ₹20ರಿಂದ ₹30ಕ್ಕೆ ಹೆಚ್ಚಾಗಿದೆ.

ಸೇಬು ಹಾಗೂ ದಾಳಿಂಬೆ ಮತ್ತೆ ₹20 ದುಬಾರಿಯಾಗಿದೆ. ₹140 ಇದ್ದ ಧಾರಣೆ ₹160ಕ್ಕೆ ಏರಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ.

ತರಕಾರಿಗಳ ಪೈಕಿ ಬೀಟ್‌ರೂಟ್‌ನ ಬೆಲೆ ₹10 ಕಡಿಮೆಯಾಗಿ ₹20ಕ್ಕೆ ತಲುಪಿದೆ.

ಟೊಮೆಟೊ (₹10), ಬೀನ್ಸ್‌ (₹40), ಕ್ಯಾರೆಟ್‌ (₹60), ಈರುಳ್ಳಿ (₹40) ಸೇರಿದಂತೆ ಇತರೆ ತರಕಾರಿಗಳ ಬೆಲೆ ಸ್ಥಿರವಾಗಿದೆ.

’ಹಬ್ಬದ ಪರಿಣಾಮ ತರಕಾರಿಗಳ ಮೇಲೆ ಆಗಿಲ್ಲ. ಆದರೆ, ಬಾಳೆಹಣ್ಣಿನ ಬೆಲೆ ಹೆಚ್ಚಾಗಿದೆ. ಎರಡು ದಿನಗಳಿಂದ ಬಾಳೆ ಹಣ್ಣಿಗೆ ಹೆಚ್ಚು ಬೇಡಿಕೆ ಕಂಡು ಬಂದಿದೆ. ಸೇಬು ಹಾಗೂ ದಾಳಿಂಬೆ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವುದರಿಂದ ಬೆಲೆ ಹೆಚ್ಚಾಗಿದೆ‘ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.