ADVERTISEMENT

ಪಿಎಲ್‌ಡಿ ಬ್ಯಾಂಕ್: ಅಧ್ಯಕ್ಷರಾಗಿ ಮಹದೇವಸ್ವಾಮಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 17:12 IST
Last Updated 11 ಡಿಸೆಂಬರ್ 2023, 17:12 IST
ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಹದೇವಸ್ವಾಮಿ ಅವರನ್ನು ನಿರ್ಗಮಿತ ಅಧ್ಯಕ್ಷ ಬಸವಣ್ಣ ಅಭಿನಂದಿಸಿದರು. ಉಪಾಧ್ಯಕ್ಷ ಭಾನುಪ್ರಕಾಶ್‌, ನಿರ್ದೇಶಕರು ಭಾಗವಹಿಸಿದ್ದರು
ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಹದೇವಸ್ವಾಮಿ ಅವರನ್ನು ನಿರ್ಗಮಿತ ಅಧ್ಯಕ್ಷ ಬಸವಣ್ಣ ಅಭಿನಂದಿಸಿದರು. ಉಪಾಧ್ಯಕ್ಷ ಭಾನುಪ್ರಕಾಶ್‌, ನಿರ್ದೇಶಕರು ಭಾಗವಹಿಸಿದ್ದರು   

ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ಪ್ರಾಥಮಿಕ ಸಹಕಾರ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಎಚ್.ಎಸ್.ಮಹದೇವಸ್ವಾಮಿ (ಎನ್‌ರಿಚ್), ಉಪಾಧ್ಯಕ್ಷರಾಗಿ ಕೆ.ಬಿ.ಭಾನುಪ್ರಕಾಶ್ ಅವಿರೋಧವಾಗಿ ಸೋಮವಾರ ಆಯ್ಕೆಯಾದರು.

ಅಧ್ಯಕ್ಷರಾಗಿದ್ದ ಎಚ್.ಎಂ.ಬಸವಣ್ಣ, ಉಪಾಧ್ಯಕ್ಷ ಮಹದೇವನಾಯಕ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. 

ಅಧ್ಯಕ್ಷ ಸ್ಥಾನಕ್ಕೆ ಮಹದೇವಸ್ವಾಮಿ (ಎನ್‌ರಿಚ್), ಉಪಾಧ್ಯಕ್ಷ ಸ್ಥಾನಕ್ಕೆ ಭಾನು ಪ್ರಕಾಶ್ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ತ್ಯಾಗರಾಜು ಅವರು ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ADVERTISEMENT

ರೈತ ಅಭಿವೃದ್ದಿಗಾಗಿ ಶ್ರಮಿಸುವೆ: ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಮಹದೇವಸ್ವಾಮಿ, ‘ಸಂಘದ ಎಲ್ಲ ನಿರ್ದೇಶಕರು ಒಮ್ಮತದಿಂದ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಆಭಾರಿಯಾಗಿದ್ದೇನೆ. ನಿರ್ಗಮಿತ ಅಧ್ಯಕ್ಷ ಎಚ್.ಎಂ.ಬಸವಣ್ಣ ಅವರ ಮಾರ್ಗದರ್ಶನದಲ್ಲಿ ಎಲ್ಲ ನಿರ್ದೇಶಕರ ಸಹಕಾರ ಮತ್ತು ವಿಶ್ವಾಸದೊಂದಿಗೆ ಬ್ಯಾಂಕ್ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ’ ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತ ಕಲ್ಯಾಣಕ್ಕಾಗಿ ಬಿಡುಗಡೆಯಾಗುವ ಅನುದಾನವನ್ನು ಹೆಚ್ಚಿನ ರೀತಿಯಲ್ಲಿ ಪಡೆದುಕೊಳ್ಳಲು ಅದ್ಯತೆ ನೀಡಲಾಗುವುದು. ಸಹಕಾರಿ ಬ್ಯಾಂಕ್‌ನಲ್ಲಿ ಸಾಲ ಪಡೆದು ಬಹಳ ವರ್ಷಗಳಿಂದ ಸುಸ್ತಿಯಾಗಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು. ರೈತರ ಜಮೀನು ಅಭಿವೃದ್ಧಿಗಾಗಿ ಹೆಚ್ಚಿನ ಸಾಲ ಸೌಲಭ್ಯ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಎಲ್ಲರ ಸಹಕಾರದೊಂದಿಗೆ ರೈತರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.

ಸಂಘದ ನಿಗರ್ಮಿತ ಅಧ್ಯಕ್ಷ ಎಚ್.ಎಂ.ಬಸವಣ್ಣ, ಉಪಾಧ್ಯಕ್ಷ ಮಹದೇವನಾಯಕ ನಿರ್ದೇಶಕರಾದ ನಲ್ಲೂರು ಮಹದೇವಪ್ಪ, ಜನ್ನೂರು ಎ. ದೊರೆಸ್ವಾಮಿ, ಬದನಗುಪ್ಪೆ ಬಸವರಾಜು, ಶಿವಪುರದ ಎಸ್.ರಾಜು, ಬೆಟ್ಟದಪುರದ ಶಿವಶಂಕರಪ್ಪ, ಬಿಸಲವಾಡಿ ಸಾಕಮ್ಮ, ಕಲ್ಪುರ ರತ್ನಮ್ಮ, ಮ್ಯಾನೇಜರ್ ಸತೀಶ್, ಶಶಿಕಿರಣ್, ನವೀನ್, ದಿನಾಕರ್ ಇದ್ದರು. 

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಮಾಜಿ ಶಾಸಕರಾದ ಎನ್.ಮಹೇಶ್, ಎಸ್.ಬಾಲರಾಜು, ಸಹಕಾರಿ ದುರೀಣ ಕೋಡಿಮೋಳೆ ರಾಜಶೇಖರ್, ಚಾಮೂಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ, ಮಾಜಿ ನಿರ್ದೇಶಕ ಬಸವರಾಜು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಂದ್ರ, ಮಹದೇವಪ್ರಸಾದ್, ಬಿಜೆಪಿಯ ಮುಖಂಡರು, ಪದಾಧಿಕಾರಿಗಳು ಸಹಕಾರಿ ಗಣ್ಯರು ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.