ಮಹದೇಶ್ವರಬೆಟ್ಟ: ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಫೆ 25ರಿಂದ ಆರಂಭವಾಗುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿವೆ.
ಫೆ.26ರಂದು ಮಾದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ, ಉತ್ಸವಾದಿಗಳು, ಜಾಗರಣೆ ಉತ್ಸವ ಜರುಗಲಿದೆ. 27ರಂದು ವಿಶೇಷ ಸೇವೆ, ಉತ್ಸವಗಳು, 28ರಂದು ಅಮಾವಾಸ್ಯೆ ಪ್ರಯುಕ್ತ ವಿಶೇಷಪೂಜೆ, ಸೇವಾ ಉತ್ಸವಾದಿಗಳು, ಮಾರ್ಚ್ 1ರಂದು ಬೆಳಗ್ಗೆ ಶಿವರಾತ್ರಿ ಜಾತ್ರೆ ಮಹಾರಥೋತ್ಸವ ಜರುಗಲಿದೆ. ರಾತ್ರಿ ಅಭಿಷೇಕ, ಪೂಜೆ ಬಳಿಕ ಕೊಂಡೋತ್ಸವ ನಡೆಯಲಿದ್ದು ಜಾತ್ರೆಗೆ ತೆರೆಬೀಳಲಿದೆ.
ಮಹದೇಶ್ವರಬೆಟ್ಟದ ಬೇಡಗಂಪಣ ಅರ್ಚಕರು ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕಾಗಿ ವಿಶೇಷ ರಥ ನಿರ್ಮಾಣ ಮಾಡಿದ್ದಾರೆ. ಬಿದಿರು ಹಾಗೂ ಉರಿಯ ಹಗ್ಗಗಳಿಂದ ರಥವನ್ನು ನಿರ್ಮಾಣ ಮಾಡಲಾಗಿದ್ದು, ವಸ್ತ್ರಧಾರಣೆ ನಡೆದಿದೆ. ಆಕರ್ಷಕವಾಗಿ ತೇರು ಕಂಗೊಳಿಸುತ್ತಿದೆ. ಮಾರ್ಚ್ 1ರಂದು ಬೆಳಿಗ್ಗೆ 8.10 ರಿಂದ 8.45ರ ನಡುವಿನ ಅವಧಿಯಲ್ಲಿ ಶಿವರಾತ್ರಿ ಮಹಾರಥೋತ್ಸವ ಪ್ರಾರಂಭವಾಗಲಿದ್ದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ.
ಐದು ದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಜಾತ್ರೆಯನ್ನು ಅಚ್ಚುಕಟ್ಟಾಗಿ ಮಾಡಲು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಭಕ್ತರಿಗೆ ವಿಶೇಷ ದಾಸೋಹ ವ್ಯವಸ್ಥೆ, ರಾಜಗೋಪುರದ ಮುಂಭಾಗ ಹಾಗೂ ಸರದಿ ಸಾಲಿನ ಕಡೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ದರ್ಶನ ಮಾಡುವ ವೇಳೆ ಭಕ್ತರ ನೂಕ ನುಗ್ಗಲು ತಡೆಗಟ್ಟಲು ಹೆಚ್ಚುವರಿ ಸರತಿ ಸಾಲುಗಳನ್ನು ನಿರ್ಮಾಣ ಮಾಡಿ ಪ್ರಸಾದ ವಿನಿಯೋಗಕ್ಕೆ ಹೆಚ್ಚುವರಿ ಲಾಡು ಕೌಂಟರ್‌ಗಳನ್ನು ತೆರೆಯಲಾಗಿದೆ. ವಿವಿಧ ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ ಮತ್ತು ಅಗತ್ಯ ಸೌಕರ್ಯ ಒದಗಿಸಲಾಗಿದೆ.
ವಿಶೇಷವಾಗಿ ಭಕ್ತರ ಅನುಕೂಲಕ್ಕಾಗಿ 500 ಬಸ್‌ಗಳು ಸಂಚಾರ ಮಾಡಲಿವೆ. ಜಾತ್ರೆಯ ಅವಧಿಯಲ್ಲಿ ಮಹದೇಶ್ವರಬೆಟ್ಟಕ್ಕೆ ದ್ವಿ-ಚಕ್ರ ವಾಹನಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಕೌದಳ್ಳಿ ಗ್ರಾಮದ ಬಳಿ ದ್ವಿಚಕ್ರ ವಾಹನ ನಿಲುಗಡೆಗೆ ಸೌಲಭ್ಯ ಕಲ್ಪಿಸಲಾಗಿದೆ. 3 ಲಕ್ಷ ಲಾಡುಗಳನ್ನು ತಯಾರಿಸಲಾಗಿದೆ. ಭಕ್ತರ ಬೇಡಿಕೆ ತಕ್ಕಂತೆ ಹೆಚ್ವುವರಿ ಲಾಡುಗಳು ಸಿದ್ಧವಾಗಲಿವೆ.
ದೇವಾಲಯ ಹಾಗೂ ಸುತ್ತಮುತ್ತ ಕಣ್ಮನಸೆಳೆಯುವ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಬಿಗಿ ಪೋಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈಗಾಗಲೇ ಜಾತ್ರೆ ಪ್ರಯುಕ್ತ ಕಾಲ್ನಡಿಗೆ ಹಾಗೂ ವಾಹನಗಳ ಮೂಲಕ ಬಂದಿರುವ ಭಕ್ತರು ದೇಗುಲದ ಪ್ರಾಂಗಣ, ಸಾಲೂರು ಬೃಹನ್ಮಠ ಹಾಗೂ ಇನ್ನಿತರ ಖಾಲಿ ಜಾಗಗಳಲ್ಲಿ ಬಿಡಾರ ಹೂಡಿದ್ದಾರೆ.
ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು.ಎ.ಈ ಸ್ಥಳದಲ್ಲಿ ಬೀಡುಬಿಟ್ಟಿದ್ದು ವಿಶೇಷ ದಾಸೋಹ, ದೇವಾಲಯ, ಮಾತೃಕುಟೀರ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೇ ಸಮಸ್ಯೆ ಎದುರಾಗದಂತೆ ಭಕ್ತರಿಗೆ ಅಗತ್ಯ ಸೌಕರ್ಯ ಕೊರೆತೆ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಗತ್ಯ ವ್ಯವಸ್ಥೆ
ಶಿವರಾತ್ರಿ ಜಾತ್ರೆ ಪ್ರಯುಕ್ತ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ದಾಸೋಹ ಕುಡಿಯುವ ನೀರು ಲಾಡು ಕೌಂಟರ್ ಶೌಚಗೃಹ ಸೇರಿದಂತೆ ಅಗತ್ಯ ಸೌಕರ್ಯಕ್ಕೆ ಕ್ರಮವಹಿಸಲಾಗಿದೆ. ಮಾತೃಕುಠೀರ ಮತ್ತು ಅಲ್ಲಲ್ಲಿ ನೀರಿನ ವ್ಯವಸ್ಥೆಗೆ ಚಾಲನೆ ನೀಡಲಾಗುತ್ತಿದೆ ಎಂದು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು.ಎ.ಈ ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.