
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.14ರಿಂದ 18ರವರೆಗೆ ನಡೆಯಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಬರುವ ಭಕ್ತರ ಸುರಕ್ಷತೆಗೆ ಮಾಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಪರಿಶೀಲಿಸಿದರು.
ಕಾವೇರಿ ನದಿ ದಾಟಿ ಪಾದಯಾತ್ರೆ ಬರುವ ಬಸವನಕಡ ಪ್ರದೇಶಕ್ಕೆ ಭೇಟಿನೀಡಿದ ಅಧಿಕಾರಿಗಳು ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಬಳಿಕ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿನೀಡಿ ಶಿವರಾತ್ರಿ ಜಾತ್ರಾ ಸಿದ್ದತೆಗಳನ್ನು ಪರಿಶೀಲಿಸಿದರು.
ಶಿವರಾತ್ರಿ ಜಾತ್ರೆಗೆ ಕರ್ನಾಟಕ ಹಾಗೂ ತಮಿಳುನಾಡಿನಿಂದ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಆಗಮಿಸುತ್ತಾರೆ. ಕನಕಪುರ–ರಾಮನಗರ–ಚನ್ನಪಟ್ಟಣ–ಮಾಗಡಿ ಪ್ರದೇಶಗಳಿಂದ ಕಾವೇರಿ ನದಿ ಸಂಗಮದ ಮೂಲಕ ಬಸವನಕಡ ತಲುಪಿ ಅರಣ್ಯ ಮಾರ್ಗವಾಗಿ ಎಲ್ಲೇಮಾಳ–ಶಾಗ್ಯ–ಹಲಗಾಪುರ–ತೋಮಿಯಾರ್ ಪಾಳ್ಯ–ಡಿ.ಎಂ ಸಮುದ್ರ ಮಾರ್ಗವಾಗಿ ಭಕ್ತರು ಕ್ಷೇತ್ರಕ್ಕೆ ಬರುತ್ತಾರೆ. ಈ ಮಾರ್ಗದಲ್ಲಿ ಅಗತ್ಯ ಸುರಕ್ಷತೆ ಮತ್ತು ಭದ್ರತೆ ಕಲ್ಪಿಸಲು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಕೆ.ಆರ್.ಎಸ್ ಜಲಾಶಯದಿಂದ ನೀರಿನ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಕಾವೇರಿ ನದಿಯನ್ನು ದಾಟುವ ಸ್ಥಳದಲ್ಲಿ ಭಕ್ತರ ಸುರಕ್ಷತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಬೇಕು. ಅರಣ್ಯ ಪ್ರದೇಶದಲ್ಲಿ ಪಾದಯಾತ್ರೆ ಮಾಡುವ ಭಕ್ತರಿಗೆ ಅರಣ್ಯ ಇಲಾಖೆ ಹೆಚ್ಚಿನ ಗಸ್ತು ತಂಡಗಳನ್ನು ನಿಯೋಜಿಸಬೇಕು ಎಂದು ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ವತಿಯಿಂದ ಶುದ್ಧ ಕುಡಿಯುವ ನೀರು, ಬೆಳಕು ಮತ್ತು ಮೂಲಸೌಲಭ್ಯಗಳ ವ್ಯವಸ್ಥೆ ಸಮರ್ಪಕವಾಗಿ ಕೈಗೊಳ್ಳಬೇಕು. ಎಸ್‌ಟಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಅಲ್ಲಲ್ಲಿ ನಿಯೋಜಿಸಬೇಕು. ಪಾದಯಾತ್ರಿಗಳು ಹಗಲಿನಲ್ಲಿ ಮಾತ್ರ ಅರಣ್ಯ ಪ್ರದೇಶದಲ್ಲಿ ಸಂಚರಿಸಬೇಕು ಎಂದು ತಿಳಿಸಿದರು.
ಪಾದಯಾತ್ರೆಯ ಮಾರ್ಗದಲ್ಲಿ ತುರ್ತು ಚಿಕಿತ್ಸಾ ಕೇಂದ್ರ, ವೈದ್ಯರು ಹಾಗೂ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಶಿವರಾತ್ರಿ ಜಾತ್ರೆಗೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುವ ಸಾಧ್ಯತೆ ಇದ್ದು ಭಕ್ತರ ಆಚಾರ–ವಿಚಾರಗಳಿಗೆ ಧಕ್ಕೆಯಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಭಕರು ಕೂಡ ಜಿಲ್ಲಾಡಳಿತ, ಪೋಲಿಸ್ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಮನವಿ ಮಾಡಿದರು.
ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಸುರೇಂದ್ರ, ಪ್ರಾಧಿಕಾರದ ಕಾರ್ಯದರ್ಶಿ ರಘು, ತಹಸೀಲ್ದಾರ್ ಚೈತ್ರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಕಾವೇರಿ ಸಂಗಮ ಸ್ಥಳಕ್ಕೆ ಭೇಟಿನೀಡಿದ ಜಿಲ್ಲಾಧಿಕಾರಿ ಶ್ರೀರೂಪಾ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಧಿಕಾರಿಗಳೊಂದಿಗೆ ಸಭೆ ಶಿವರಾತ್ರಿ ಜಾತ್ರಾ ಮಹೋತ್ಸವ ಸುಗಮವಾಗಿ ನಡೆಸುವಂತೆ ಸೂಚನೆ