ದನಗಳನ್ನು ಕಿಚ್ಚು ಹಾಯಿಸಿದ ದೃಶ್ಯ (ಸಂಗ್ರಹ ಚಿತ್ರ)
ಮಹದೇಶ್ವರಬೆಟ್ಟ: ಜಿಲ್ಲೆಯ ಗಡಿ ಭಾಗದ ಗ್ರಾಮಗಳಲ್ಲಿ ಸಂಕ್ರಾಂತಿಗೂ ಮುನ್ನ ದಿನ ಭೋಗಿ ಹಬ್ಬ ಆಚರಿಸಲಾಗುತ್ತದೆ. ಜಾನುವಾರು ಕೇಂದ್ರಿತವಾಗಿ ಹಬ್ಬ ಕಳೆಗಟ್ಟುತ್ತದೆ.
ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ರಾಗಿಯನ್ನು ಹದ ಮಾಡಿ ಕಣದಲ್ಲಿ ರಾಶಿ ಮಾಡುತ್ತಾರೆ. ಸ್ವಲ್ಪ ಭಾಗವನ್ನು ಬಡವರಿಗೆ ಹಂಚಿ ನಂತರ ಮಕರ ಸಂಕ್ರಾಂತಿ ಹಬ್ಬಕ್ಕೆ ಮುನ್ನುಡಿ ಬರೆಯಲಾಗುತ್ತದೆ. ಇದು ಗೋವುಗಳ ಹಬ್ಬ. ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಗುಡ್ಡಗಾಡು, ಕಾಡಂಚಿನ ಪ್ರದೇಶದ ಜನ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಸಂಕ್ರಾಂತಿ ಹಬ್ಬವನ್ನು ಗಡಿ ಭಾಗಗಳಲ್ಲಿ ನಾಲ್ಕು ದಿನ ಆಚರಿಸಲಾಗುತ್ತದೆ, ಒಂದು ವಾರ ಮುಂಚಿತವಾಗಿ ಮನೆಯನ್ನು ಶುದ್ಧಗೊಳಿಸಿ ಸುಣ್ಣ, ಬಣ್ಣ ಬಳಿದು ಅಂದಗೊಳಿಸಲಾಗಿರುತ್ತದೆ.
ನಾಲ್ಕು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಮೊದಲನೇ ದಿನ ಕಾಪು ಕಟ್ಟು ಹಬ್ಬ. ಮೊದಲ ದಿನ ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಐದು ರೀತಿಯ ಸೊಪ್ಪುಗಳನ್ನು (ಅಣ್ಣೆ ಸೊಪ್ಪು, ಉತ್ತರಾಣಿ ಸೊಪ್ಪು, ಆವರಿಕೆ (ತಂಗಡಿ) ಸೊಪ್ಪು, ತುಂಬೆ ಹೂ, ಬಿಳಿಹುಂಡಿ ಹೂ) ಕಟ್ಟು ಕಟ್ಟಿ ಬಾಗಿಲಿನ ಮುಂಭಾಗ, ರಾಗಿ ಹುಲ್ಲಿನ ಮೆದೆ, ದನದ ಕೊಟ್ಟಿಗೆ ಇನ್ನಿತರೆ ಕಡೆಗಳಲ್ಲಿ ಹಾಕಲಾಗುತ್ತದೆ. ನಂತರ ರಾಗಿ ಮೆದೆಗೆ ಪೂಜೆ ಮಾಡುತ್ತಾರೆ. ಕಾಪು ಕಟ್ಟಿದ ನಂತರ ಮನೆ ಮಂದಿ ಹಾಗೂ ಅಕ್ಕಪಕ್ಕದ ಮನೆಯವರಿಗೆ ಎಳ್ಳು, ಬೆಲ್ಲ ಹಂಚುತ್ತಾರೆ.
ಎರಡನೇ ದಿನ ತುಂಬಿದ ಹಬ್ಬ. ಮಕರ ಸಂಕ್ರಾಂತಿ ದಿನ ಇದನ್ನು ಆಚರಿಸಲಾಗುತ್ತದೆ. ಅಂದು ಬೆಳಗಿನಿಂದಲೇ ಉಪವಾಸವಿದ್ದು, ಮನೆಯಲ್ಲಿ ಪೂಜೆ ನೆರವೇರಿಸಿ ಬಗೆ ಬಗೆಯ ಭಕ್ಷ್ಯಗಳನ್ನು ಸಿದ್ಧ ಮಾಡಿ ಪೂರ್ವಜರಿಗೆ ಎಡೆ ಇಟ್ಟು, ಹೊಸ ಬಟ್ಟೆಗಳನ್ನು ಸಮರ್ಪಿಸಿ ನಂತರ ಮನೆಯವರು ಆಹಾರ ಸೇವಿಸುತ್ತಾರೆ.
ಹಬ್ಬದ ಮೂರನೇ ದಿನ ಗೋವುಗಳಿಗೆ ಮೀಸಲು. ಗೋವುಗಳನ್ನು ಸಾಕಿರುವವರು ಹಾಗೂ ರೈತರು ಈ ದಿನ ಬೆಳಿಗ್ಗೆಯೇ ಗೋವುಗಳನ್ನು ತೊಳೆದು ಶೃಂಗಾರ ಮಾಡಿ ವಿಶೇಷ ಪೂಜೆ ಮಾಡುತ್ತಾರೆ. ಹಬ್ಬದ ಅಡುಗೆ ಸಿದ್ಧಪಡಿಸಿ ಮೊದಲು ಹಸುವಿಗೆ ನೀಡಿ, ಕೊಟ್ಟಿಗೆಯಿಂದ ಹೊರ ಹೋಗುವ ದಾರಿಯಲ್ಲಿ ಒನಕೆಯನ್ನು ಇಟ್ಟು ಗೋವುಗಳನ್ನು ದಾಟಿಸಿ ಮೇಯಲು ಬಿಡುತ್ತಾರೆ. ನಂತರ ಸಂಜೆಯವರೆಗೆ ಕಾದು ಗೋವುಗಳು ಬರುವಂತಹ ಸಮಯದಲ್ಲಿ ಹಾದಿ ಮಧ್ಯೆ ಬೆಂಕಿ ಹಾಕಿ ಕಿಚ್ಚು ಹಾಯಿಸಿ ಗೋವುಗಳನ್ನು
ಬರಮಾಡಿಕೊಳ್ಳುತ್ತಾರೆ.
ನಾಲ್ಕನೇ ದಿನ ‘ಮನುಷ್ಯರ ಹಬ್ಬ’ ಎಂದು ಆಚರಿಸಲಾಗುತ್ತದೆ. ಈ ದಿನ ತಮಗೆ ಇಷ್ಟವಾದ (ಮಾಂಸ ಆಹಾರ ಸೇವಿಸುವವರು) ಮಾಂಸಾಹಾರವನ್ನು ಸೇವಿಸುವ ಮೂಲಕ ಹಾಗೂ ಸಸ್ಯಾಹಾರಿಗಳು ಖಾರ ಖಾದ್ಯಗಳನ್ನು ಸೇವಿಸುವ ಮೂಲಕ ಹಬ್ಬಕ್ಕೆ ಮಂಗಳ ಹಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.