ADVERTISEMENT

ಹುಲುಗನಮುರಡಿ | 'ಚಿಕ್ಕ ತಿರುಪತಿ’ಯಲ್ಲಿ ಸಂಕ್ರಾಂತಿ ತೇರಿನ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 4:25 IST
Last Updated 16 ಜನವರಿ 2024, 4:25 IST
ಗುಂಡ್ಲುಪೇಟೆ ತಾಲ್ಲೂಕಿನ ಹುಲುಗನಮುರಡಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸೋಮವಾರ ಸಂಕ್ರಾಂತಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು
ಗುಂಡ್ಲುಪೇಟೆ ತಾಲ್ಲೂಕಿನ ಹುಲುಗನಮುರಡಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸೋಮವಾರ ಸಂಕ್ರಾಂತಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು   

ಗುಂಡ್ಲುಪೇಟೆ: ತಾಲ್ಲೂಕಿನ ಪ್ರಮುಖ ಧಾರ್ಮಿಕ ಕೇಂದ್ರ,  ‘ಚಿಕ್ಕ ತಿರುಪತಿ’ ಎಂದೇ  ಪ್ರಸಿದ್ದಿಯಾಗಿರುವ ಹುಲುಗನಮುರಡಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. 

ಮಧ್ಯಾಹ್ನ 1.20ರ ಸುಮಾರಿಗೆ ಗರುಡ ಪಕ್ಷಿ ರಥ ಹಾಗೂ ಗೋಪುರದ ಮೇಲೆ ಹಾರಾಟ ನಡೆಸಿದ ನಂತರ ತಹಶೀಲ್ದಾರ್ ಟಿ.ರಮೇಶ್ ಬಾಬು ತೆಂಗಿನ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಗುಂಡ್ಲುಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನಂಜನಗೂಡು, ಚಾಮರಾಜನಗರ, ಯಳಂದೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಸಾವಿರಾರು ಭಕ್ತಾದಿಗಳು ರಥೋತ್ಸದಲ್ಲಿ ಭಾಗವಹಿಸಿದ್ದರು. 

ADVERTISEMENT

ವೆಂಕಟರಮಣ, ಗೋವಿಂದ, ಗೋವಿಂದ ಎಂದು ಜಯ ಘೋಷಣೆ ಕೂಗುತ್ತ ರಥವನ್ನು ದೇವಸ್ಥಾನದ ಒಂದು ಸುತ್ತು ಎಳೆದರು. ನೂರಾರು ಮಂದಿ ನವ ಜೋಡಿಗಳು ಹಾಗೂ ಭಕ್ತಾದಿಗಳು ತೇರಿಗೆ ಹಣ್ಣು-ಜವನ ಎಸೆದು ಭಕ್ತಿ ಸಮರ್ಪಿಸಿದರು. ಹರಕೆ ಹೊತ್ತ ಭಕ್ತರು ಬೆಟ್ಟದ ತಪ್ಪಲು,  ಬೆಟ್ಟದ ಮೇಲೆ ಭಕ್ತರಿಗೆ ಉಪಾಹಾರ, ಪಾನಕ, ಮಜ್ಜಿಗೆಯನ್ನು ವಿತರಿಸಿದರು.

ಹಲವು ಭಕ್ತರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಟ್ಟಕ್ಕೆ ಬಂದರೆ, ಹರಕೆ ಹೊತ್ತ ಇನ್ನೂ ಕೆಲವರು ನೆರೆಯ ಗ್ರಾಮ ಹಾಗು ತಪ್ಪಲಿನಿಂದ ಕಾಲು ದಾರಿಯಲ್ಲಿ ನಡೆದುಕೊಂಡು ಬೆಟ್ಟ ಏರಿದರು.

ಎಲ್ಲ ಖಾಸಗಿ ವಾಹನಗಳಿಗೆ ಬೆಟ್ಟದ ತಪ್ಪಲಿನಿಂದ ದೇವಾಲಯಕ್ಕೆ ಹೋಗಲು ನಿರ್ಬಂಧ ವಿಧಿಸಲಾಗಿತ್ತು. ತಪ್ಪಲಿನಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಟ್ಟಕ್ಕೆ ತೆರಳಿದರು. 

ತಾಲ್ಲೂಕು ಆಡಳಿತವು ಬೆಟ್ಟದ ಮೇಲೆ ಕುಡಿಯುವ ನೀರಿನ ವ್ಯವಸ್ಥೆ ಹಾಗು ತುರ್ತು ಸೇವೆಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿದರು. 

ಬೆಟ್ಟಕ್ಕೆ ಹೋಗುವ ಮಾರ್ಗ ಸಿಗುವ ತೆರಕಣಾಂಬಿ ಗ್ರಾಮದಲ್ಲಿ ಯುವಕರ ಗುಂಪು ಅಲ್ಲಲ್ಲಿ ಪಾನಕ, ಮಜ್ಜಿಗೆಯನ್ನು ದಾರಿಯಲ್ಲಿ ಹೋಗುತ್ತಿದ್ದ ಭಕ್ತರಿಗೆ ವಿತರಿಸಿದರು. 

ಬಿಗಿ ಬಂದೋಬಸ್ತ್‌: ಪೊಲೀಸರು ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ, ಡಿವೈಎಸ್ಪಿ ಲಕ್ಷ್ಮಯ್ಯ ಸ್ಥಳದಲ್ಲಿ ಹಾಜರಿದ್ದು ಭದ್ರತೆ ಮೇಲ್ವಿಚಾರಣೆ ನಡೆಸಿದರು.   

ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ರಥೋತ್ಸವದಲ್ಲಿ ಭಾಗಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.