ADVERTISEMENT

ಬಾವನನ್ನು ಕೊಂದ ಬಾಮೈದನಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 14:14 IST
Last Updated 2 ಏಪ್ರಿಲ್ 2021, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಳ್ಳೇಗಾಲ: ಅಕ್ಕನಿಗೆ ಪ್ರತಿನಿತ್ಯ ಹೊಡೆದು ತೊಂದರೆ ಕೊಡುತ್ತಿದ್ದ ಕಾರಣಕ್ಕೆ, ಆಕೆಯ ಪತಿಯನ್ನು (ಬಾವ) ಹಿಟ್ಟಿನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ ಬಾಮೈದನಿಗೆ ಇಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಹನೂರು ತಾಲ್ಲೂಕಿನ ಆಲಂಬಾಡಿ ಗ್ರಾಮದ ಸೆಲ್ವ ಶಿಕ್ಷೆಗೆ ಗುರಿಯಾದ ವ್ಯಕ್ತಿ.

ಘಟನೆ ವಿವರ: ಹನೂರು ತಾಲ್ಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿಗೆ ಸೇರಿದ ಆಲಂಬಾಡಿ ಗ್ರಾಮದ ಮೇರಿ ವಿಧವೆಯಾಗಿದ್ದರು. ಕುಟುಂಬದವರ ಒಪ್ಪಿಗೆ ಪಡೆದು ಗ್ರಾಮದ ಸುರೇಶ್ ಎಂಬುವರ ಜೊತೆ 2ನೇ ಮದುವೆಯಾಗಿದ್ದರು. ಸುರೇಶ್ ನಿತ್ಯವೂ ಮೇರಿ ಅವರೊಂದಿಗೆ ಪ್ರತಿನಿತ್ಯ ಜಗಳ ಮಾಡಿ ಕಿರುಕುಳ ನೀಡುತ್ತಿದ್ದರು. ಈ ವಿಚಾರ ಮೇರಿಯ ತಮ್ಮ ಸೆಲ್ವಗೆ ತಿಳಿದಿತ್ತು. 2017 ನವೆಂಬರ್ 25 ರಂದು ಮೇರಿ ಮತ್ತು ಸುರೇಶ್ ಜಗಳವಾಡುತ್ತಿದ್ದುದನ್ನು ಗಮನಿಸಿದ ಸೆಲ್ವ, ಸುರೇಶ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಬೈದು, ‘ನೀನು ಇದ್ದರೆ ತಾನೆ ನಮ್ಮ ಅಕ್ಕನಿಗೆ ಪ್ರತಿನಿತ್ಯ ಹೊಡೆದು ಚಿತ್ರಹಿಂಸೆ ನೀಡುತ್ತಿಯಾ? ನಿನ್ನನ್ನು ಸಾಯಿಸುತ್ತೇನೆ’ ಎಂದು ಹೇಳಿ ಹಿಟ್ಟಿನ ದೊಣ್ಣೆಯಿಂದ ತಲೆಗೆ, ಕೈ, ಕಾಲು ಸೇರಿದಂತೆ ಭಾಗಕ್ಕೆ ಹೊಡೆದಿದ್ದ. ತಡೆಯಲು ಬಂದ ಅಕ್ಕ ಮೇರಿಗೂ ಹೊಡೆದು ಪರಾರಿಯಾಗಿದ್ದ.

ADVERTISEMENT

ತೀವ್ರವಾಗಿ ಗಾಯಗೊಂಡಿದ್ದ ಸುರೇಶ್ ಅವರನ್ನು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡಿಸಿ ಹೆಚ್ಚಿನ ಚಿಕಿತ್ಸೆಗೆ ಸೇಲಂ ಮೋಹನ ಕುಮಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ನವೆಂಬರ್‌ 29ರಂದು ಮೃತಪಟ್ಟಿದ್ದರು.

ಮಹದೇಶ್ವರ ಬೆಟ್ಟದ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಸೆಲ್ವ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.

ಕೊಲೆ ಕೃತ್ಯ ಸಾಬೀತಾಗಿದ್ದರಿಂದ ಸೆಲ್ವಗೆ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಡಿ.ವಿನಯ್ ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ 20 ಸಾವಿರ ದಂಡ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್‌ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಷಾ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.