ADVERTISEMENT

ಶಿಕ್ಷಣ ಸಚಿವರ ಸ್ಪಂದನೆಯ ನಿರೀಕ್ಷೆಯಲ್ಲಿ ಜನ

ಮಾರ್ಟಳ್ಳಿ: 22 ಹಳ್ಳಿಯ ಮಕ್ಕಳಿಗೆ ಸಿಗದ ಸರ್ಕಾರಿ ಪ್ರೌಢಶಾಲೆ ಭಾಗ್ಯ

ಸೂರ್ಯನಾರಾಯಣ ವಿ
Published 13 ಡಿಸೆಂಬರ್ 2019, 20:00 IST
Last Updated 13 ಡಿಸೆಂಬರ್ 2019, 20:00 IST

ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ದುರಂತದಿಂದ ದೇಶದಾದ್ಯಂತ ಸುದ್ದಿಯಾಗಿದ್ದ ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 22 ಹಳ್ಳಿಗಳ ಜನರು, ತಮ್ಮ ಊರಿನಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭವಾಗುವುದನ್ನು ನಿರೀಕ್ಷಿಸುತ್ತಿದ್ದಾರೆ.

ದುರ್ಘಟನೆಯಲ್ಲಿ ಸಂತ್ರಸ್ತರಿಗೆ ಸಾಂತ್ವನ ಹೇಳುವುದಕ್ಕಾಗಿ ಕಳೆದ ವರ್ಷದ ಡಿಸೆಂಬರ್‌ 25ರಂದು ಸುಳ್ವಾಡಿ ಬಳಿಯ ಬಿದರಹಳ್ಳಿಗೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು 2019–20ನೇ ಸಾಲಿನಿಂದಲೇ ಸರ್ಕಾರಿ ಪ್ರೌಢಶಾಲೆ ಆರಂಭಿಸಲಾಗುವುದು ಎಂದು ಘೋಷಿಸಿದ್ದರು.

ಈ ವರ್ಷದ ಜೂನ್‌ನಿಂದ ಹೊಸ ಪ್ರೌಢಶಾಲೆ ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ಜನ ಇದ್ದರು. ಆದರೆ, ಶಾಲೆ ಆರಂಭಿಸುವ ಸಂಬಂಧದ ಯಾವ ಪ್ರಕ್ರಿಯೆಗಳೂ ಇದುವರೆಗೂ ನಡೆದಿಲ್ಲ.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ತಮ್ಮ ಬೇಡಿಕೆಗೆ ಸ್ಪಂದಿಸುವರು ಎಂಬ ನಿರೀಕ್ಷೆಯಲ್ಲಿ ಮಾರ್ಟಳ್ಳಿಯ ಜನ ಇದ್ದಾರೆ. ಗೋಪಿನಾಥಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂದಿನ ವರ್ಷದಿಂದ 1ರಿಂದ 4ನೇ ತರಗತಿವರೆಗೆ ಕನ್ನಡ ಮಾಧ್ಯಮದ ತರಗತಿಗಳು ಆರಂಭಿಸಲು ಸಚಿವರು ತೋರಿದ ಮುತುವರ್ಜಿ ಮಾರ್ಟಳ್ಳಿ ಜನರ ನಿರೀಕ್ಷೆಗೆ ಕಾರಣ.

ಗೋಪಿನಾಥಂ ಶಾಲೆಯಲ್ಲಿ ಸುರೇಶ್‌ ಕುಮಾರ್‌ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಅಲ್ಲಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕನ್ನಡ ಮಾಧ್ಯಮ ಶಾಲೆ ಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದರು. ಇದಕ್ಕೆ ಸ್ಪಂದಿಸಿದ್ದ ಸಚಿವರು, ಎರಡು ವಾರಗಳಲ್ಲಿ ಶಾಲೆ ಆರಂಭಿಸಲು ಅನುಮತಿ ನೀಡುವಂತೆ ಮಾಡಿದ್ದರು.

ಸುತ್ತಮುತ್ತಲಿನ 22 ಹಳ್ಳಿಗಳಿಗೆ ಗ್ರಾಮ ಪಂಚಾಯಿತಿ ಕೇಂದ್ರವಾದ ಮಾರ್ಟಳ್ಳಿಯೇ ದೊಡ್ಡ ಊರು. ಈ ಭಾಗದಲ್ಲಿ ಅಂದಾಜು 25 ಸಾವಿರ ಜನಸಂಖ್ಯೆ ಇದೆ.ಲಿಂಗಾಯತರು, ಬೇಡಗಂಪಣರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪಡೆಯಾಚ್ಚಿ ಗೌಂಡರ್‌, ಲಂಬಾಣಿಗಳು ಹಾಗೂ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

4 ಖಾಸಗಿ ಪ್ರೌಢಶಾಲೆಗಳು:ಮಾರ್ಟಳ್ಳಿ, ವಡ್ಡರದೊಡ್ಡಿ, ಸುಳ್ವಾಡಿ ಮತ್ತು ಸಂದನಪಾಳ್ಯದಲ್ಲಿ ಖಾಸಗಿ ಪ್ರೌಢಶಾಲೆಗಳಿವೆ. ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಪಡೆದಿರುವ ಮಕ್ಕಳು ಪ್ರೌಢ ಶಿಕ್ಷಣಕ್ಕಾಗಿ ಈ ನಾಲ್ಕು ಶಾಲೆಗಳನ್ನೇ ಅವಲಂಬಿಸಿದ್ದಾರೆ.

ಮಾರ್ಟಳ್ಳಿಯಿಂದ 20 ಕಿ.ಮೀ ದೂರದಲ್ಲಿರುವ ರಾಮಾಪುರ ಹಾಗೂ 13 ಕಿ.ಮೀ ದೂರದಲ್ಲಿರುವ ಕೌದಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆಗಳಿವೆ. ಇಲ್ಲಿಗೆ ಸರ್ಕಾರಿ ಬಸ್‌ಗಳಿಲ್ಲ. ಇಲ್ಲಿಗೆ ಹೋಗಲು ಬಯಸುವ ವಿದ್ಯಾರ್ಥಿಗಳು ಖಾಸಗಿ ಬಸ್ ಅಥವಾ ಆಟೊಗಳನ್ನೇ ಅವಲಂಬಿಸಬೇಕಾಗಿದೆ.

ಬಡವರೇ ಹೆಚ್ಚು: ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಖಾಸಗಿ ಶಾಲೆಗಳಲ್ಲಿ ಶುಲ್ಕ ಜಾಸ್ತಿ ಇದೆ. ಬಡವರಿಗೆ ಅದನ್ನು ಪಾವತಿಸಲು ಆಗುತ್ತಿಲ್ಲ. ಇದೇ ಕಾರಣಕ್ಕೆ ಕೆಲವು ಮಕ್ಕಳು ಶಾಲೆಗೆ ಹೋಗುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಡಾನ್‌ ಬಾಸ್ಕೊ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುಮಾರಸ್ವಾಮಿ ಅವರು ಭರವಸೆ ನೀಡಿದ್ದರಿಂದ ನಿರೀಕ್ಷೆ ಇಟ್ಟುಕೊಂಡಿದ್ದೆವು. ಇದುವರೆಗೂ ಶಾಲೆ ಆರಂಭಿಸುವ ಬಗ್ಗೆ ಯಾವುದೇ ಬೆಳವಣಿಗೆ ಆಗಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್‌.ಸುರೇಶ್‌ ಕುಮಾರ್‌ ಅವರಾದರೂ ಈ ಕೆಲಸ ಮಾಡಲಿ’ ಎಂದು ಡಾನ್‌ ಬಾಸ್ಕೊ ಆಗ್ರಹಿಸಿದರು.

22 ಹಳ್ಳಿಗಳು ಯಾವುವು?

ಮಾರ್ಟಳ್ಳಿ,ಹಳೇ ಮಾರ್ಟಳ್ಳಿ,ತಾಂಡಾಮೇಡು,ವಡ್ಡರದೊಡ್ಡಿ,ಗೋಡೇಸ್ ನಗರ,ಅಂಥೋಣಿಯಾರ್ ಕೋಯಿಲ್,ಕಡಬೂರು,ಬಿದರಹಳ್ಳಿ,ಎಲಚಿಕೆರೆ,ಆಲದಮರ ದೊಡ್ಡಿ,ಮೇಟುತಿರುವು,ಕೋಟೆಪೋದೈ,ಸುಳ್ವಾಡಿ,ಕೀರೆಪಾತಿ,ಸಂದನಪಾಳ್ಯ,ನಾಲ್ ರೋಡ್,ಪಾಲಿಮೇಡು,ವೆಟ್ಟುಕಾಡು,ಕೊಂಬೈನಗರ,ವೆಳ್ಳಾರಿಬೋರೆ,ಏರಿಕಾಡು ಮತ್ತು ಅಯ್ಯಂಕಾಡು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.