ADVERTISEMENT

ಒಬ್ಬರಿಗೆ ತಿಂಗಳಿಗೆ 5  ಕೆ.ಜಿ ಅಕ್ಕಿ ಸಾಕು: ಸಚಿವ ಉಮೇಶ್ ಕತ್ತಿ 

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 8:43 IST
Last Updated 26 ಆಗಸ್ಟ್ 2021, 8:43 IST
ಆಹಾರ ಮತ್ತು‌ ನಾಗರಿಕ ಪೂರೈಕೆ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ
ಆಹಾರ ಮತ್ತು‌ ನಾಗರಿಕ ಪೂರೈಕೆ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ    

ಗುಂಡ್ಲುಪೇಟೆ: ಒಬ್ಬ ಮನುಷ್ಯನಿಗೆ ತಿಂಗಳಿಗೆ 5 ಕೆ.ಜಿ ಅಕ್ಕಿ ಸಾಕು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜಕೀಯ ಕಾರಣಕ್ಕಾಗಿ ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಆಹಾರ ಮತ್ತು‌ ನಾಗರಿಕ ಪೂರೈಕೆ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಗುರುವಾರ ಹೇಳಿದರು.

ಬಂಡೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿಗೆ ಬೇಕಾದಷ್ಟು ಅಕ್ಕಿಯನ್ನು ನಾವು ವಿತರಿಸುತ್ತಿದ್ದೇವೆ. ಆಹಾರ ಭದ್ರತಾ‌ ಯೋಜನೆಯಡಿ 4.1 ಕೋಟಿ ಜನರಿಗೆ ಪಡಿತರ ವಿತರಿಸುತ್ತಿದ್ದೇವೆ ಎಂದರು.

'ಪಡಿತರದಾರರ ಇ-ಕೆವೈಸಿ ಶೇ 70 ಮುಗಿದಿದ್ದು, ಅನರ್ಹ ಪಡಿತರದಾರರನ್ನು ಕೈಬಿಡುವ ಉದ್ದೇಶದಿಂದ ಕಾರ್ಯಕ್ರಮ ನಡೆಯುತ್ತಿದೆ. ಸಂಪೂರ್ಣ ಇ-ಕೆವೈಸಿ ಆದ ಬಳಿಕ ಎಷ್ಟು ಪಡಿತರ ಉಳಿತಾಯ ಆಗಲಿದೆ' ಎಂದು ತಿಳಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಶಾಶ್ವತ ಸಿಎಂ ಆಕಾಂಕ್ಷಿ: 'ನನಗೀಗ 60 ವರ್ಷ ವಯಸ್ಸು ಆದ್ದರಿಂದ, ಇನ್ನು 15 ವರ್ಷ ಅವಕಾಶ ಇದೆ. ನಾನು ಶಾಶ್ವತ, ಸಿಎಂ ಆಕಾಂಕ್ಷಿ. ಮುಂದೆ ನೋಡೋಣ' ಎಂದು ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ರಸ್ತೆ ವಿಸ್ತರಣೆಗೆ ಅವಕಾಶ ಕೊಡಲ್ಲ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿಯಿಂದ ಕೆಕ್ಕನಹಳ್ಳ ಚೆಕ್ ಪೋಸ್ಟ್‌ವರೆಗೆ‌ ರಸ್ತೆ ವಿಸ್ತರಣೆ ಮಾಡುವ ಸಂಬಂಧ ರಾಷ್ಟ್ರೀಯ‌ ಹೆದ್ದಾರಿ ಪ್ರಾಧಿಕಾರ‌ ಮಾಡಿರುವ ಪ್ರಸ್ತಾವದ ಬಗ್ಗೆ ಪ್ರತಿಕ್ರಿಯಿಸಿದ ಉಮೇಶ್ ಕತ್ತಿ ಅವರು, 'ಪ್ರಸ್ತಾವವನ್ನು ವಿರೋಧಿಸಿ ಪತ್ರ ಬರೆಯಲಾಗಿದೆ. ಯಾವ ಕಾರಣಕ್ಕೂ ರಸ್ತೆ ವಿಸ್ತರಣೆಗೆ ಮತ್ತು ರಾತ್ರಿ ಸಂಚಾರಕ್ಕೆ ಅವಕಾಶ ಕೊಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.