ADVERTISEMENT

ಮತ ಎಣಿಕೆಯಲ್ಲಿ ಎಡವಟ್ಟು; ಫಲಿತಾಂಶ ಅದಲು ಬದಲು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 16:25 IST
Last Updated 31 ಡಿಸೆಂಬರ್ 2020, 16:25 IST
ಮತ ಎಣಿಕೆ ಕೇಂದ್ರದ ಮುಂದೆ ಇಬ್ಬರೂ ಅಭ್ಯರ್ಥಿಗಳ ಬೆಂಬಲಿಗರು ಗುರುವಾರ ಜಮಾಯಿಸಿದರು
ಮತ ಎಣಿಕೆ ಕೇಂದ್ರದ ಮುಂದೆ ಇಬ್ಬರೂ ಅಭ್ಯರ್ಥಿಗಳ ಬೆಂಬಲಿಗರು ಗುರುವಾರ ಜಮಾಯಿಸಿದರು   

ಹನೂರು: ಚುನಾವಣಾಧಿಕಾರಿಗಳ ಯಡವಟ್ಟಿನಿಂದ ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿಯ ಉದ್ಧಟ್ಟಿ ವಾರ್ಡಿನ ಫಲಿತಾಂಶ ಗೊಂದಲವಾಗಿದ್ದು ಎರಡು ಅಭ್ಯರ್ಥಿಗಳ ಪರ ಮುಖಂಡರು ಮತ್ತು ಕಾರ್ಯಕರ್ತರು ಗುರುವಾರ ಮತ ಎಣಿಕೆ ಕೇಂದ್ರದ ಮುಂಭಾಗ ಜಮಾಯಿಸಿರುವ ಘಟನೆ ಜರುಗಿದೆ.

ಉದ್ಧಟ್ಟಿ ಗ್ರಾಮದ ಸದಸ್ಯತ್ವಕ್ಕಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗೌರಮ್ಮ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ನೀಲಾ ಕಣದಲ್ಲಿದ್ದರು. ಈ ವೇಳೆ ಬುಧವಾರ ಮತ ಎಣಿಕೆ ಪ್ರಕ್ರಿಯೆ ಮುಗಿದ ಬಳಿಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನೀಲಾ ಗೆಲುವು ಸಾಧಿಸಿದ್ದರು ಎನ್ನಲಾಗಿದ್ದು, ಬಳಿಕ ಮತಗಳನ್ನು ಕೂಡಿಸುವಾಗ ಆದ ತಪ್ಪಿನಿಂದ ಲೆಕ್ಕ ತಪ್ಪಾಗಿದೆ. ಗೌರಮ್ಮ ಗೆಲುವು ಸಾಧಿಸಿದ್ದಾರೆ ಎಂದು ಘೋಷಣೆ ಮಾಡಲಾಗಿದೆ ಎನ್ನಲಾಗಿದೆ. ಈ ವಿಷಯ ತಿಳಿದ ಗೌರಮ್ಮ ಬೆಂಬಲಿಗರು ಉದ್ಧಟ್ಟಿ ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುತ್ತಿದ್ದರು.

ಈ ವೇಳೆ ವಿಷಯ ತಿಳಿದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನೀಲಾ ಮತ್ತು ಅವರ ಬೆಂಬಲಿಗರು ಗುರುವಾರ ಹನೂರು ಪಟ್ಟಣಕ್ಕೆ ಬಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಅವರ ಜೊತೆಗೂಡಿ ಮತ ಎಣಿಕೆ ಕೇಂದ್ರಕ್ಕೆ ತೆರಳಿ ನೀಲಾ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಈ ವೇಳೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೌರಮ್ಮ ಪರವೂ ಕೂಡ ಕೆಲ ಕಾರ್ಯಕರ್ತರೂ ಆಗಮಿಸಿ ಫಲಿತಾಂಶದಲ್ಲಿ ನಾವು ಜಯಶೀಲರಾಗಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಒತ್ತಾಯಿಸಿದರು.

ಈ ವೇಳೆ ಚುನಾವಣಾಧಿಕಾರಿ ಅಶೋಕ್ ಅವರು ಸ್ಥಳಕ್ಕಾಗಮಿಸಿ ನೀಲಾ ಅವರೇ ವಿಜೇತ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಇದರಿಂದ ಅಸಮಾಧಾನಗೊಂಡ ಗೌರಮ್ಮ ಬೆಂಬಲಿತ ಕಾರ್ಯಕರ್ತರು ಮುಂದಿನ ಕ್ರಮ ಕೈಗೊಳ್ಳುವುದಾಗಿ ಸ್ಥಳದಿಂದ ತೆರಳಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಜೆ.ಎಚ್‌.ನಾಗರಾಜು ಅವರು, ‘ಎಣಿಕೆ ಸಂದರ್ಭದಲ್ಲಿ ಮತಗಳನ್ನು ಕೂಡಿಸುವಾಗ ತಪ್ಪಾಗಿದೆ. ಇದರಿಂದಾಗಿ ಸಮಸ್ಯೆಯಾಗಿತ್ತು. ಅದನ್ನು ನಿವಾರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.