ADVERTISEMENT

ಮಹದೇಶ್ವರ ಬೆಟ್ಟದಲ್ಲಿ ಸಿಬ್ಬಂದಿ ಎಡವಟ್ಟು: ಲಾಡು ಜೊತೆ ₹2.91 ಲಕ್ಷ ಭಕ್ತನ ಕೈಗೆ!

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 13:05 IST
Last Updated 29 ಜುಲೈ 2022, 13:05 IST
ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯದ ನೋಟ
ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯದ ನೋಟ   

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಸಿಬ್ಬಂದಿ ಎಡವಟ್ಟಿನಿಂದಾಗಿ ಲಾಡು ಪ್ರಸಾದದ ಜೊತೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ₹2.91 ಲಕ್ಷ ಹಣ ಭಕ್ತನ ಕೈ ಸೇರಿದೆ.

ಭೀಮನ ಅಮಾವಾಸ್ಯೆ ದಿನವಾದ ಗುರುವಾರ ಈ ಘಟನೆ ನಡೆದಿದೆ.ಮಹದೇಶ್ವರಬೆಟ್ಟದ ರಾಜಗೋಪುರ ಬಳಿ ವಿಶೇಷ ದರ್ಶನದ ₹500 ಟಿಕೆಟ್‌ ಕೌಂಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಭಕ್ತರಿಗೆ ವಿಶೇಷ ದರ ಟಿಕೆಟ್ ನೀಡಿ ಪ್ರಸಾದ ನೀಡಿದ್ದಾರೆ. ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪವೇ ಹಣ ಇದ್ದ ಚೀಲ ಇದ್ದುದರಿಂದ ಹಣ ಸಹಿತ ಬ್ಯಾಗ್‌ ಅನ್ನು ಭಕ್ತರೊಬ್ಬರಿಗೆ ಸಿಬ್ಬಂದಿ ನೀಡಿದ್ದಾರೆ.

ಮಧ್ಯಾಹ್ನ ಹಣ ಕಾಣಿಸದೇ ಇದ್ದುದರಿಂದ ಗಾಬರಿಗೊಂಡು ಬಳಿಕ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳಿಗೆ ಸಿಬ್ಬಂದಿ ವಿಷಯ ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಭಕ್ತರೊಬ್ಬರು ಲಾಡು ಪ್ರಸಾದದ ಜೊತೆ ಹಣವಿದ್ದ ಚೀಲವನ್ನು ನೀಡಿರುವುದು ಗೊತ್ತಾಗಿದೆ.

‘ಕಣ್ತಪ್ಪಿನಿಂದ ಈ ಘಟನೆ ಜರುಗಿದೆ ಎಂದು ಹೇಳಲಾಗುತ್ತಿದ್ದು, ಭಕ್ತನ ಕೈ ಸೇರಿದ ಹಣವನ್ನು ಕೌಂಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದಲೇ ವಸೂಲು ಮಾಡಲು ತಾಕೀತು ಮಾಡಲಾಗಿದೆ’ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.